×
Ad

ಆದಿ ಕರ್ನಾಟಕ, ಆದಿ ಆಂಧ್ರ ಮತ್ತು ಆದಿ ದ್ರಾವಿಡ ಜಾತಿಗಳನ್ನು ಕೈಬಿಡಲು ಒತ್ತಾಯ

Update: 2025-09-12 22:56 IST

ಬೆಂಗಳೂರು, ಸೆ.12: ಆದಿ ಕರ್ನಾಟಕ, ಆದಿ ಆಂಧ್ರ ಮತ್ತು ಆದಿ ದ್ರಾವಿಡ ಜಾತಿಗಳನ್ನು ಪರಿಶಿಷ್ಟ ಜಾತಿಗಳ ಪಟ್ಟಿಯಿಂದ ಕೈಬಿಡಲು ಕೇಂದ್ರ ಸರಕಾರಕ್ಕೆ ಕೂಡಲೇ ಶಿಫಾರಸ್ಸು ಮಾಡಬೇಕು ಎಂದು ಸಾಮಾಜಿಕ ನ್ಯಾಯಕ್ಕಾಗಿ ಒಳಮೀಸಲಾತಿ ಹೋರಾಟ ಸಮಿತಿಯು ಒತ್ತಾಯಿಸಿದೆ.

ಶುಕ್ರವಾರ ನಗರದಲ್ಲಿ ಸರಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರನ್ನು ಮಾಜಿ ಸಚಿವ ಎಚ್.ಆಂಜನೇಯ ಸೇರಿ ಸಮಿತಿಯ ಮುಖಂಡರಾದ ತಿಮ್ಮರಾಯಪ್ಪ, ಮಾರೆಪ್ಪ, ಅಂಬಣ್ಣ ಆರೋಲಿಕರ್, ರವಿ ಬೋಸರಾಜ್, ಬಸವರಾಜ್ ಕೌತಾಳ್, ವೇಣುಗೋಪಾಲ್ ಮೌರ್ಯ, ಹನುಮೇಶ ಗುಂಡೂರ್, ಮಂಜುನಾಥ್, ಶಂಕರಪ್ಪ, ಗುಡಿಮನಿ, ಚೌಡಿ ಲೋಕೇಶ್ ಸೇರಿ ಮತ್ತಿತರರು ಭೇಟಿ ಮಾಡಿ ಮನವಿ ಪತ್ರವನ್ನು ಸಲ್ಲಿಸಿದರು.

ಆದಿ ಕರ್ನಾಟಕ, ಆದಿ ಆಂಧ್ರ, ಆದಿ ದ್ರಾವಿಡ ಜಾತಿಯವರಿಗೆ ಮೂಲ ಜಾತಿ ಪ್ರಮಾಣ ಪತ್ರ ತೆಗೆದುಕೊಳ್ಳಲು ಕಂದಾಯ ಇಲಾಖೆ ಆದೇಶ ಹೊರಡಿಸಬೇಕು. ಪರಿಶಿಷ್ಟ ಜಾತಿಗಳ ಒಳಮೀಸಲಾತಿಯನ್ನು ನೇಮಕಾತಿ ಅಲ್ಲದೇ ಬಡ್ತಿ ನೇಮಕಾತಿ, ಬ್ಯಾಕ್‍ಲಾಗ್ ಅನ್ವಯಿಸಿ ರೋಸ್ಟರ್ ಬಿಂದು ಪ್ರಕಟಿಸಬೇಕು ಎಂದು ಒತ್ತಾಯಿಸಿದ್ದಾರೆ.

ಸಮಾಜ ಕಲ್ಯಾಣ ಇಲಾಖೆ ಸಚಿವರು ಹಾಗೂ ಉನ್ನತ ಅಧಿಕಾರಿಗಳನ್ನು ಬದಲಾಯಿಸಬೇಕು. ತೆಲಂಗಾಣ ರಾಜ್ಯ ಹಾಗೂ ಆಂಧ್ರದ ಮಾದರಿಯಲ್ಲಿ ಒಳಮೀಸಲಾತಿ ಪ್ರತ್ಯೇಕ ಕಾಯ್ದೆಯನ್ನು ಕೂಡಲೇ ರಚಿಸಬೇಕು. ಶಾಶ್ವತ ಆಯೋಗವನ್ನು ಕೂಡಲೇ ರಚಿಸಿ ಆದೇಶ ಹೊರಡಿಸಬೇಕು. ಶಾಶ್ವತ ಆಯೋಗದಲ್ಲಿ ಪರಿಶಿಷ್ಟ ಜಾತಿಗಳ ಎಲ್ಲ ಸಮುದಾಯಗಳ ಪ್ರತಿನಿಧಿಗಳು ಇರಬೇಕು ಎಂದು ಆಗ್ರಹಿಸಿದ್ದಾರೆ.

‘ಶಿಕ್ಷಣ, ಉದ್ಯೋಗಕ್ಕೆ ಅನ್ವಯವಾಗುವ ರೀತಿ ಒಳಮೀಸಲಾತಿಯನ್ನು ರಾಜ್ಯ ಸರಕಾರ ಜಾರಿಗೊಳಿಸಿದೆ. ಆದರೆ, ಬಡ್ತಿಯಲ್ಲಿ ಒಳಮೀಸಲಾತಿ ಇಲ್ಲವೆಂಬ ಮಾತುಗಳು ಸರಕಾರಿ ನೌಕರರಲ್ಲಿ ತೀವ್ರ ಆತಂಕ ಉಂಟು ಮಾಡಿದೆ. ಈ ಗೊಂದಲ ನಿವಾರಣೆಗೆ ಸರಕಾರ ಆದೇಶ ಹೊರಡಿಸಬೇಕು’

-ಎಚ್.ಆಂಜನೇಯ, ಮಾಜಿ ಸಚಿವ

‘ರಾಜ್ಯದಲ್ಲಿ ಪರಿಶಿಷ್ಟ ಜಾತಿ ಒಳಮೀಸಲಾತಿ ಜಾರಿಗೊಂಡ ತಕ್ಷಣವೇ ಉದ್ಯೋಗ ನೇಮಕಾತಿ ಪ್ರಕ್ರಿಯೆಗಳು ಆರಂಭವಾಗಿದೆ. ಹಾಗೆಯೇ ಒಳಮೀಸಲಾತಿಯು ಭಡ್ತಿಯಲ್ಲೂ ಅನ್ವಯವಾಗಲಿದೆ. ಈ ಸಂಬಂಧ ಈಗಾಗಲೇ ಕಾರ್ಯಪ್ರವೃತ್ತವಾಗಿದ್ದೇವೆ. ಈ ವಿಷಯದಲ್ಲಿ ಯಾವುದೇ ಕಾರಣಕ್ಕೂ ಪರಿಶಿಷ್ಟ ಜಾತಿಗಳಲ್ಲಿ ಆತಂಕ ಬೇಕಿಲ್ಲ’

-ಶಾಲಿನಿ ರಜನೀಶ್, ಸರಕಾರದ ಮುಖ್ಯಕಾರ್ಯದರ್ಶಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News