ಬೆಂಗಳೂರು | ಪ್ರಧಾನಿ ಮೋದಿ ಹುಟ್ಟುಹಬ್ಬ : ಕೇಂದ್ರ ಸಚಿವರ ಕಚೇರಿ ಮುಂಭಾಗ ‘ಪಕೋಡಾ ಮಾಡಿ ಆಕ್ರೋಶ’
ಬೆಂಗಳೂರು, ಸೆ.17: ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬ ಹಿನ್ನೆಲೆ ಕೇಂದ್ರದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಕಚೇರಿ ಮುಂಭಾಗ ಯುವ ಕಾಂಗ್ರೆಸ್ ಕಾರ್ಯಕರ್ತರು ಪಕೋಡಾ ಮಾಡುವ ಮೂಲಕ ರಾಷ್ಟ್ರೀಯ ನಿರುದ್ಯೋಗ ದಿನ ಆಚರಿಸಿ ಆಕ್ರೋಶ ವ್ಯಕ್ತಪಡಿಸಿದರು.
ಬುಧವಾರ ನಗರದ ಹೆಬ್ಬಾಳದಲ್ಲಿರುವ ಎಸ್ಟೀಮ್ ಮಾಲ್ ಬಳಿ ಇರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಕಚೇರಿ ಮುಂಭಾಗ ಜಮಾಯಿಸಿದ ಕೆಪಿಸಿಸಿ ಯುವ ಘಟಕದ ಕಾರ್ಯಕರ್ತರು, ಪಕೋಡಾ ಮಾಡಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸರಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು.
ಇಂದು ರಾಷ್ಟ್ರೀಯ ನಿರುದ್ಯೋಗ ದಿನ ಆಗಿದ್ದು, ಇದಕ್ಕೆ ಕೇಂದ್ರವೇ ನೇರ ಹೊಣೆ ಎಂದು ಘೋಷಣೆ ಕೂಗಿದರು. ಈ ವೇಳೆ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡರು.
ಇದಕ್ಕೂ ಮೊದಲು ಸುದ್ದಿಗಾರರೊಂದಿಗೆ ಮಾತನಾಡಿದ ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಮಂಜುನಾಥ್ ಗೌಡ, ‘ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಜನ್ಮದಿನ. ಆದರೆ, ಅವರು ನೀಡಿದ ಉದ್ಯೋಗ ಭರವಸೆಗಳನ್ನು ನೆರವೇರಿಸದೆ, ದೇಶದ ಯುವಕರ ಭವಿಷ್ಯವನ್ನು ಹಾಳು ಮಾಡಿದ್ದಾರೆ ಎಂದು ಟೀಕಿಸಿದರು.
ಕೇಂದ್ರ ಸರಕಾರವು ತನ್ನ ಸಂವಿಧಾನಾತ್ಮಕ ಜವಾಬ್ದಾರಿಗಳನ್ನು ನಿರ್ವಹಿಸಲು ವಿಫಲವಾಗಿದೆ. ಇದರ ವಿರುದ್ಧವಾಗಿ ರಾಷ್ಟ್ರದಾದ್ಯಂತ ಯುವ ಕಾಂಗ್ರೆಸ್ ವತಿಯಿಂದ ಹೋರಾಟಗಳು ನಡೆಯುತ್ತಿದ್ದು, ರಾಜ್ಯ ಯುವ ಕಾಂಗ್ರೆಸ್ ವತಿಯಿಂದ ಇದರ ಅಂಗವಾಗಿ ಕೇಂದ್ರದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಕಚೇರಿ ಮುಂಭಾಗ ಯುವ ಕಾಂಗ್ರೆಸ್ ಕಾರ್ಯಕರ್ತರು ರಾಷ್ಟ್ರೀಯ ನಿರುದ್ಯೋಗ ದಿನ ಆಚರಿಸಿದ್ದಾರೆ ಎಂದರು.