ಛಲವಾದಿ ನಾರಾಯಣಸ್ವಾಮಿ, ಶ್ರೀವತ್ಸ ವಿರುದ್ಧ ಎಫ್‍ಐಆರ್ ದಾಖಲು
ಶ್ರೀವತ್ಸ, ಛಲವಾದಿ ನಾರಾಯಣಸ್ವಾಮಿ
ಬೆಂಗಳೂರು, ಸೆ.20: ಕುರುಬ ಸಮುದಾಯಕ್ಕೆ ಎಸ್‍ಟಿ ಮೀಸಲಾತಿ ವಿಚಾರವಾಗಿ ಮಾತನಾಡಿದ್ದ ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಹಾಗೂ ಮೈಸೂರು ಶಾಸಕ ಶ್ರೀವತ್ಸ ಅವರ ವಿರುದ್ಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.
ಕರ್ನಾಟಕ ಪ್ರದೇಶ ಕುರುಬರ ಎಸ್‍ಟಿ ಹೋರಾಟ ಸಮಿತಿ ಅಧ್ಯಕ್ಷ ಸಿದ್ದಣ್ಣ ತೇಜಿ ಎಂಬುವರು ನೀಡಿದ ದೂರಿನ ಮೇರೆಗೆ ಇಬ್ಬರು ಜನಪ್ರತಿನಿಧಿಗಳ ವಿರುದ್ಧ ಬಿಎನ್‍ಎಸ್ ಸೆಕ್ಷನ್ 353(2)(ಸಮುದಾಯಗಳ ನಡುವೆ ದ್ವೇಷ ಬಿತ್ತುವಿಕೆ) ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕುರುಬ ಸಮಾಜವನ್ನು ಎಸ್ಟಿಗೆ ಸೇರಿಸಬೇಕೆಂಬ ವಿಚಾರ ಮುನ್ನೆಲೆಯಲ್ಲಿದ್ದು, ಈ ಬಗ್ಗೆ ಪರ-ವಿರೋಧ ಚರ್ಚೆಗಳು ಕೇಳಿಬರುತ್ತಿವೆ. ಈ ಮಧ್ಯೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಟೀಕಿಸುವ ಭರದಲ್ಲಿ ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಹಾಗೂ ಶಾಸಕ ಶ್ರೀವತ್ಸ ಅವರು ಕುರುಬ ಸಮುದಾಯಕ್ಕೆ ಅವಮಾನ ಆಗುವ ರೀತಿ ಮಾತನಾಡಿದ್ದಾರೆ. ಅಲ್ಲದೆ, ವಾಲ್ಮೀಕಿ ಸಮುದಾಯದಿಂದ ಕುರುಬ ಸಮಾಜ ದಂಗೆ ಏಳಬೇಕು ಎಂಬರ್ಥದಲ್ಲಿ ಮಾತನಾಡಿದ್ದಾರೆ. ಈ ಮೂಲಕ ಎರಡು ಸಮಾಜಗಳ ನಡುವೆ ದ್ವೇಷ ಮೂಡಿಸುವ ಕೆಲಸ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.