ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಗೆ ಮೇಲ್ಜಾತಿಗಳ ವಿರೋಧ : ಪ್ರಗತಿಪರ ಚಿಂತಕರು, ಸಾಹಿತಿಗಳು ಖಂಡನೆ
ಸಾಂದರ್ಭಿಕ ಚಿತ್ರ
ಬೆಂಗಳೂರು, ಸೆ.23: ರಾಜ್ಯಾದ್ಯಂತ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಯುತ್ತಿದೆ. ಈ ಸಮೀಕ್ಷೆಯನ್ನು ಮೇಲ್ಜಾತಿಗಳು ವಿರೋಧಿಸುತ್ತಿದ್ದು, ಮೇಲ್ಜಾತಿಯ ರಾಜಕೀಯ ಹುನ್ನಾರವನ್ನು ಸಾಹಿತಿಗಳು, ಶಿಕ್ಷಣತಜ್ಞರು ಸೇರಿದಂತೆ ಪ್ರಗತಿಪರ ಚಿಂತಕರು ವಿರೋಧ ವ್ಯಕ್ತಪಡಿಸಿದ್ದಾರೆ.
ಮಂಗಳವಾರ ಅಂಕಣಕಾರ ಸನತ್ ಕುಮಾರ ಬೆಳಗಲಿ, ಶಿಕ್ಷಣತಜ್ಞ ನಿರಂಜನಾರಾಧ್ಯ ವಿ.ಪಿ. , ಲೇಖಕ ಬಸವರಾಜ ಸೂಳಿಭಾವಿ, ಚಂದ್ರಕಾಂತ ವಡ್ಡು, ಜಿ.ಪಿ ಬಸವರಾಜು, ಬಿ. ಶ್ರೀನಿವಾಸ, ಎಚ್.ಎಸ್. ಬಸವಪ್ರಭು, ವೈ.ಬಿ.ಹಿಮ್ಮಡಿ, ಕ.ಮ. ರವಿಶಂಕರ, ಕೆ.ಪಿ. ಸುರೇಶ ಸೇರಿದಂತೆ 48 ಮಂದಿ ಜಂಟಿ ಪ್ರಕಟನೆ ಹೊರಡಿಸಿದ್ದಾರೆ.
ಈ ಬಾರಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ರಾಜಕಾರಣಿಗಳು ಮಾತ್ರವಲ್ಲ, ಮಠಾಧೀಶರೂ ಬೀದಿಗೆ ಬಂದಿದ್ದಾರೆ. ಮಾನವ ಧರ್ಮ ಸ್ಥಾಪಿಸಬೇಕಾದ ಈ ಮಹಾಪುರುಷರು, ಜಾತಿ ಹಿಂದೆ ಬಿದ್ದು, ಮಾನವೀಯತೆಯನ್ನು ಅಪಮೌಲ್ಯಗೊಳಿಸಿದ್ದಾರೆ ಎಂದು ಪ್ರಗತಿಪರ ಚಿಂತಕರು ಖಂಡಿಸಿದ್ದಾರೆ.
ಸಮಾಜದ ಪಟ್ಟಭದ್ರ ಹಿತಾಸಕ್ತಿಗಳ ಹಾಗೂ ಇಡೀ ಸಮೀಕ್ಷಾ ಪ್ರಕ್ರಿಯೆಯನ್ನೇ ಸ್ಥಗಿಸಿಗೊಳಿಸುವ ಬಲಿಷ್ಠ ಜಾತಿಗಳ ಹುನ್ನಾರದ ಒತ್ತಡದ ನಡುವೆ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಕೈಗೊಳ್ಳುವ ದಿಟ್ಟ ತೀರ್ಮಾನವನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಕೈಗೊಂಡಿದ್ದಾರೆ. ಮೇಲ್ಜಾತಿಯ ರಾಜಕೀಯ ಹುನ್ನಾರದ ಇಂಥ ಸವಾಲನ್ನು ಬೇರೆ ಯಾವ ಮುಖ್ಯಮಂತ್ರಿಯೂ ಎದುರಿಸಲಾಗುತ್ತಿರಲಿಲ್ಲ. ಇದಕ್ಕಾಗಿ ನಾವು ಅವರ ಜೊತೆಗೆ ನಿಲ್ಲುತ್ತೇವೆ ಎಂದು ಬೆಂಬಲ ಸೂಚಿಸಿದ್ದಾರೆ.
ರಾಜ್ಯ ಸಚಿವ ಸಂಪುಟದ ಸಭೆಯಲ್ಲಿ ತೀವ್ರ ಆಕ್ಷೇಪ ಬಂದ ಹಿನ್ನೆಲೆಯಲ್ಲಿ ಜಾತಿವಾರು ಸಮೀಕ್ಷೆಯನ್ನು ಕೈ ಬಿಡಲಾಗುವುದು. ಇಲ್ಲವೇ, ಮುಂದೂಡಲಾಗುವುದು ಎಂಬ ದಟ್ಟ ವದಂತಿಗಳು ಹರಡಿದ್ದವು. ಇದರ ನಡುವೆ ಮುಖ್ಯಮಂತ್ರಿಗಳ ಈ ದಿಟ್ಟ ನಿಲುವಿನಿಂದ ಈ ಬಗೆಗಿನ ಗೊಂದಲ ನಿವಾರಣೆಯಾದಂತಾಗಿದೆ ಎಂದು ಅವರು ತಿಳಿಸಿದ್ದಾರೆ.
ಮೇಲ್ಜಾತಿ ಹಾಗೂ ಧರ್ಮದ ರಾಜಕೀಯವನ್ನೇ ತನ್ನ ತಂತ್ರವನ್ನಾಗಿರಿಸಿಕೊಂಡಿರುವ ಬಿಜೆಪಿ ಈ ಸಮೀಕ್ಷೆಯಿಂದ ಹೆದರಿ ಕಂಗಾಲಾಗಿದೆ. ಇದು ಹಿಂದುಗಳನ್ನು ವಿಭಜಿಸುವ ತಂತ್ರ ಎಂದು ಹತಾಶೆಯಿಂದ ಟೀಕಿಸುತ್ತಿದೆ. ಬಿಜೆಪಿ ನಿಲುವಿಗೆ ಬೆಂಬಲವಾಗಿ ವೀರಶೈವ ಲಿಂಗಾಯತ ಪಂಚಮಸಾಲಿ ಸಮುದಾಯದ ಮಠಾಧೀಶರು ನಿಂತಿದ್ದಾರೆ ಎಂದು ಪ್ರಗತಿಪರರು ಖಂಡಿಸಿದ್ದಾರೆ.