ಜೆ.ಪಿ.ಪಾರ್ಕ್‌ನಲ್ಲಿ ಜಯಪ್ರಕಾಶ್ ನಾರಾಯಣ್ ಅವರ ಪುತ್ಥಳಿ ಮರುಸ್ಥಾಪನೆ : ಡಿಸಿಎಂ ಡಿ.ಕೆ.ಶಿವಕುಮಾರ್ ಭರವಸೆ
ಬೆಂಗಳೂರು, ಅ.12 : "ಜೆ.ಪಿ ಉದ್ಯಾನದಲ್ಲಿ ಜಯಪ್ರಕಾಶ್ ನಾರಾಯಣ್ ಅವರ ಪುತ್ಥಳಿ ಮರು ಸ್ಥಾಪನೆಗೆ ಕ್ರಮ ತೆಗೆದುಕೊಳ್ಳಲಾಗುವುದು. ಉದ್ಯಾನದ ಸೌಂದರ್ಯೀಕರಣ, ಈಜುಕೊಳ, ಯೋಗಶಾಲೆ, ಜಿಮ್ ಹಾಗೂ ಮಕ್ಕಳ ಆಟದ ಮೈದಾನ, ಟಾಯ್ ಟ್ರೈನ್ ಸೇರಿದಂತೆ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುತ್ತೇನೆ" ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಭರವಸೆ ನೀಡಿದರು.
'ಬೆಂಗಳೂರು ನಡಿಗೆ' ಕಾರ್ಯಕ್ರಮದ ಪ್ರಯುಕ್ತ ನಗರದ ಜೆ.ಪಿ ಉದ್ಯಾನದಲ್ಲಿ ಸಾರ್ವಜನಿಕರ ಜೊತೆ ರವಿವಾರ ಹೆಜ್ಜೆ ಹಾಕಿದ ಡಿಸಿಎಂ ಅವರು ಜನರ ಅಹವಾಲುಗಳನ್ನು ಆಲಿಸಿದರು. ಪಾಲಿಕೆ ಆಯುಕ್ತರು ಹಾಗೂ ಜೆ.ಪಿ.ಪಾರ್ಕ್ ಹಿತರಕ್ಷಣಾ ಸಮಿತಿಯ ಪದಾಧಿಕಾರಿಗಳಿಂದ ಉದ್ಯಾನದಲ್ಲಿನ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದರು. ಟಾಯ್ ಟ್ರೈನ್, ಮಕ್ಕಳ ಆಟಿಕೆಗಳು ಸೇರಿದಂತೆ ಮೂಲಸೌಕರ್ಯಗಳ ಕೊರತೆ ಏಕೆ ಉಂಟಾಗಿದೆ ಎಂದು ಅಧಿಕಾರಿಗಳಿಗೆ ಪ್ರಶ್ನಿಸಿದರು.
ಪ್ರತಿದಿನವೂ ಎಲ್ಲಾ ಶೌಚಾಲಯಗಳಿಗೂ ಬೀಗ ಹಾಕಲಾಗಿರುತ್ತದೆ ಎನ್ನುವ ದೂರಿಗೆ, "ಇನ್ನೆರಡು ದಿನದಲ್ಲಿ ಈ ಸಮಸ್ಯೆ ಬಗೆಹರಿಯಲೇ ಬೇಕು" ಎಂದು ನಗರ ಪಾಲಿಕೆ ಆಯುಕ್ತರಾದ ಪೊಮ್ಮಲ ಸುನೀಲ್ ಕುಮಾರ್ ಅವರಿಗೆ ಸೂಚನೆ ನೀಡಿದರು. ಜಿಮ್ ಪರಿಕರಗಳು ಹಾಳಾಗಿರುವುದನ್ನು ನೋಡಿದ ಡಿಸಿಎಂ ಅವರು ಗರಂ ಆದರು.
ಉದ್ಯಾನದಲ್ಲಿನ ಕೆರೆಗೆ ಈ ಮೊದಲು ಮಳೆ ನೀರು ಹರಿಯುತ್ತಿತ್ತು. ಈಗ ಬರುತ್ತಿಲ್ಲ ಎಂದು ನಾಗರಿಕರೊಬ್ಬರು ದೂರಿದಾಗ, "ಹಾಗಾದರೆ ಕಾಲುವೆಯನ್ನು ಮುಚ್ಚಲಾಗಿದೆ. ಅದನ್ನು ಸರಿಪಡೊಸೋಣ" ಎಂದರು.
ಉದ್ಯಾನದ ಮೂಲೆಯೊಂದರಲ್ಲಿ ಬೇಲಿ ಕಿತ್ತು ಹಾಕಿ ಮಾದಕ ವ್ಯಸನಿಗಳ ಅಡ್ಡೆಯಾಗಿ ಮಾಡಿಕೊಳ್ಳಲಾಗಿದೆ ಎಂದು ದೂರಿದಾಗ, "ಚಲನವಲನಗಳನ್ನು ಗಮನಿಸಲು ಕ್ಯಾಮೆರಾ ಅಳವಡಿಸಬೇಕು, ಪೊಲೀಸರನ್ನು ನಿಯೋಜಿಸಬೇಕು, ವ್ಯಸನಿಗಳನ್ನು ಮಟ್ಟ ಹಾಕಬೇಕು" ಎಂದು ಪೊಲೀಸ್ ಇನ್ಸ್‌ಪೆಕ್ಟರ್ ಗೆ ಖಡಕ್ ಸೂಚನೆ ನೀಡಿದರು.
"ಉದ್ಯಾನದಲ್ಲಿನ ಅಧ್ವಾನಗಳನ್ನು ನಾನೇ ಕಣ್ಣಾರೆ ನೋಡಿದ್ದೇನೆ. ಅದರ ವಿಡಿಯೋ ಚಿತ್ರೀಕರಣ ಕೂಡ ಮಾಡಿಸಿದ್ದೇನೆ. ಜಿಬಿಎ ವ್ಯಾಪ್ತಿಯಲ್ಲಿ ಯಾವುದೇ ಕುಂದುಕೊರತೆಗಳು, ಸಮಸ್ಯೆಗಳು ಕಂಡುಬಂದರೆ 1533 ಸಹಾಯವಾಣಿಗೆ ದೂರು ನೀಡಿ ನಿಮ್ಮ ಅಹವಾಲನ್ನು ಸಲ್ಲಿಸಬಹುದು" ಎಂದರು.
"ಎಲ್ಲಿ ಕಸವಿದೆ, ರಸ್ತೆಗುಂಡಿಯಿದೆ ಎಂದು ಈ ಮೊದಲು ಸರ್ಕಾರದ ಗಮನಕ್ಕೆ ತರುವ ವ್ಯವಸ್ಥೆ ಸಾರ್ವಜನಿಕರಿಗೆ ಇತ್ತೇ? ನಾನು ಮೊಬೈಲ್ ಆ್ಯಪ್ ಮೂಲಕ ದೂರು ಸಲ್ಲಿಸುವ ವ್ಯವಸ್ಥೆ ತಂದಿದ್ದೇನೆ. ತೆರಿಗೆದಾರರಿಗೆ ಗೌರವ ಕೊಡಬೇಕಿರುವುದು ನಮ್ಮ ಕರ್ತವ್ಯ" ಎಂದರು.
"ಬೆಂಗಳೂರು ಯೋಜಿತ ನಗರವಲ್ಲ. ಕಂದಾಯ ಬಡಾವಣೆಗಳಾದ ನಂತರ ಪಾಲಿಕೆಯಾಗಿ ಪರಿವರ್ತನೆಯಾಗಿದೆ. ಕೆಲವೊಂದು ಕಡೆ ಮಾತ್ರ ಯೋಜಿತ ಬಡಾವಣೆಗಳಿವೆ. ಯಾವುದೇ ಪಕ್ಷವಿದ್ದರೂ ಸಹ ಸೇವೆ ಮಾಡಿದ್ದು ಮಾತ್ರ ಶಾಶ್ವತವಾಗಿ ಉಳಿದುಕೊಳ್ಳುತ್ತದೆ" ಎಂದರು.