ಡಿ.ಕೆ.ಶಿವಕುಮಾರ್‌ರಿಂದ ಶಾಸಕ ಮುನಿರತ್ನಗೆ ಅವಮಾನ ಆರೋಪ; ಮತದಾರರಿಗೆ ಮಾಡಿದ ಅಪಮಾನ : ವಿಜಯೇಂದ್ರ
ಬೆಂಗಳೂರು, ಅ. 12: ‘ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು, ರಾಜರಾಜೇಶ್ವರಿನಗರ ಕ್ಷೇತ್ರದ ಶಾಸಕ ಮುನಿರತ್ನ ಅವರಿಗೆ ಮಾಡಿದ ಅಪಮಾನವಲ್ಲ, ಆ ಕ್ಷೇತ್ರದ ಮತದಾರರಿಗೆ ಮಾಡಿದ ಅಪಮಾನ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿಶ್ಲೇಷಿಸಿದ್ದಾರೆ.
ರವಿವಾರ ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮುಂಬರುವ ದಿನದಲ್ಲಿ ಡಿ.ಕೆ. ಶಿವಕುಮಾರ್, ಕಾಂಗ್ರೆಸ್ ಪಕ್ಷಕ್ಕೆ ಕರಿಟೋಪಿಯ ಬೆಲೆ ಏನೆಂದು ತೋರಿಸುತ್ತೇವೆ. ಒಬ್ಬ ಉಪಮುಖ್ಯಮಂತ್ರಿ, ಜವಾಬ್ದಾರಿಯುತ ಸಚಿವರಾಗಿ ಸಾರ್ವಜನಿಕ ಸ್ಥಳದಲ್ಲಿ ಹಾಗೂ ಒಬ್ಬ ಜನಪ್ರತಿನಿಧಿ ಬಗ್ಗೆ ಹೇಗೆ ನಡೆದುಕೊಳ್ಳಬೇಕು ಎಂಬ ಕನಿಷ್ಠ ಸೌಜನ್ಯವೂ ಅವರಿಗೆ ಇಲ್ಲ ಎಂದು ಆಕ್ಷೇಪಿಸಿದರು.
ಅಧಿಕಾರ ಎಂಬುದು ಶಾಶ್ವತ ಅಲ್ಲ, ಡಿ.ಕೆ.ಶಿವಕುಮಾರ್ ನಡವಳಿಕೆ, ಮಾತಿನ ಧಾಟಿ, ಒಬ್ಬ ಚುನಾಯಿತ ಪ್ರತಿನಿಧಿಗೆ ಮಾಡಿದ ಅಪಮಾನದ ವಿರುದ್ಧ ಸಾರ್ವಜನಿಕರು ಮಾತನಾಡುತ್ತಿದ್ದಾರೆ. ಈಚೆಗೆ ಮೈಸೂರಿನಲ್ಲಿ ಸಿಎಂ ಶಕ್ತಿ ಪ್ರದರ್ಶನ ಏರ್ಪಡಿಸಲಾಗಿತ್ತು. ಡಿ.ಕೆ.ಶಿವಕುಮಾರ್ ಹೇಳದೇ-ಕೇಳದೇ ಸಿಡಿದು, ಹೊಸದಿಲ್ಲಿಗೆ ದೌಡಾಯಿಸಿದ್ದನ್ನು ತಾವೇ ವರದಿ ಮಾಡಿದ್ದೀರಿ. ಮತ್ತೊಂದು ಕಡೆ ಸಿದ್ದರಾಮಯ್ಯನವರು ಸಂಪುಟ ವಿಸ್ತರಣೆಯ ದಾಳ ಬಿಟ್ಟಿದ್ದಾರೆ. ತಾವು ಮುಖ್ಯಮಂತ್ರಿ ಆಗಬೇಕೆಂಬ ಪ್ರಯತ್ನ ಡಿ.ಕೆ.ಶಿವಕುಮಾರ್ ಅವರದು ಎಂದು ಉತ್ತರಿಸಿದರು.
ಸಿಎಂ ಔತಣ ಕೂಟ ಕರೆದಿದ್ದಾರೆ. ಔತಣಕೂಟದಲ್ಲಿ ರಾಜ್ಯದ ರೈತರ ಸಮಸ್ಯೆ ಬಗ್ಗೆ ಚರ್ಚೆ ಮಾಡುತ್ತಾರಾ? ಎಂದು ಪ್ರಶ್ನಿಸಿದ ಅವರು, ರೈತರು ತೀವ್ರ ಅತಿವೃಷ್ಟಿಯಿಂದ ಸಂಕಷ್ಟದಲ್ಲಿದ್ದಾರೆ. ಯಾದಗಿರಿ, ಗುಲ್ಬರ್ಗ ಜಿಲ್ಲೆಗಳ ರೈತರ ತೊಗರಿ ಮತ್ತಿತರ ಬೆಳೆ ಸುಮಾರು ಶೇ.70ರಿಂದ 90ರಷ್ಟು ನಾಶವಾಗಿದೆ. ಮನೆ ಕಳಕೊಂಡವರು ಕಾಳಜಿ ಕೇಂದ್ರದಲ್ಲಿ ಮಕ್ಕಳೊಂದಿಗೆ ಪರದಾಡುತ್ತಿದ್ದಾರೆ ಎಂದು ಗಮನ ಸೆಳೆದರು.
ಬೆಳೆ ಸಂಪೂರ್ಣ ನಾಶ: ರಾಜ್ಯದಲ್ಲಿ ಸುಮಾರು 10ಲಕ್ಷ ಹೆಕ್ಟೇರ್ ಬೆಳೆ ನಾಶವಾಗಿದೆ ಎಂದು ಸಿಎಂ ಹೇಳುತ್ತಾರೆ. ರಾಜ್ಯದಲ್ಲಿ ಗುಲ್ಬರ್ಗ ಒಂದೇ ಜಿಲ್ಲೆಯಲ್ಲೇ ಆರರಿಂದ ಆರೂವರೆ ಲಕ್ಷ ಹೆಕ್ಟೇರ್ ನಷ್ಟು ಬೆಳೆ ನಾಶವಾಗಿದೆ, ತಪ್ಪು ಅಂಕಿಅಂಶ ಹೇಳುತ್ತಿದ್ದಾರೆ. ಕಲ್ಯಾಣ ಕರ್ನಾಟಕ ಮತ್ತು ಕಿತ್ತೂರು ಕರ್ನಾಟಕದಲ್ಲಿ ಕನಿಷ್ಠ 25- 30ಲಕ್ಷ ಹೆಕ್ಟೇರಿನಷ್ಟು ರೈತರ ಬೆಳೆ ನಾಶವಾಗಿದೆ. ಬಡ ರೈತರು ಮನೆ ಕಳಕೊಂಡಿದ್ದಾರೆ ಎಂದು ಅವರು ಹೇಳಿದರು.
ಸಿಎಂ ವೈಮಾನಿಕ ಸಮೀಕ್ಷೆ ಮಾಡಿ ಘೋಷಣೆ ಮಾಡಿದರೆ ರೈತರ ಹೊಟ್ಟೆ ತುಂಬುವುದೇ? ಸರ್ವೇ ಮಾಡುವುದು ಯಾವಾಗ? ಪರಿಹಾರ ಕೊಡುವುದು ಯಾವಾಗ. ಸಿಎಂ ಇಲಾಖಾ ಅಧಿಕಾರಿಗಳನ್ನೂ ಕಳುಹಿಸಿ ಕೊಡುತ್ತಿಲ್ಲ. ಮೊದಲು ಈಗಾಗಲೇ ಘೋಷಿಸಿದ ಪರಿಹಾರ ಕೊಡಿ. ಈ ಸರಕಾರಕ್ಕೆ ಬದ್ಧತೆ ಇಲ್ಲ ಎಂಬುದು ಸ್ಪಷ್ಟ ಎಂದು ಟೀಕಿಸಿದರು.