×
Ad

ವೇತನ ಸಹಿತ ಋತುಚಕ್ರ ರಜೆ : ರಾಜ್ಯ ಸರಕಾರಕ್ಕೆ ಸುರ್ಜೆವಾಲ ಅಭಿನಂದನೆ

‘ಮಹಿಳೆಯರ ಸಬಲೀಕರಣಕ್ಕೆ ಮತ್ತೊಂದು ದಿಟ್ಟ ಹೆಜ್ಜೆ’

Update: 2025-10-12 22:03 IST

ರಣದೀಪ ಸುರ್ಜೆವಾಲಾ | PC : PTI

ಬೆಂಗಳೂರು, ಅ.12 : ರಾಜ್ಯ ಸರಕಾರವು ಉದ್ಯೋಗಸ್ಥ ಮಹಿಳೆಯರಿಗೆ ಮಾಸಿಕ ಒಂದು ದಿನದ ವೇತನ ಸಹಿತ ಋತುಚಕ್ರದ ರಜೆ ಘೋಷಿಸಿರುವುದಕ್ಕೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಹರ್ಷ ವ್ಯಕ್ತಪಡಿಸಿ, ಅಭಿನಂದನೆ ಸಲ್ಲಿಸಿದ್ದಾರೆ.

ಮಹಿಳೆಯರ ಬಹುದಿನಗಳ ಬೇಡಿಕೆಗೆ ಸ್ಪಂದನೆ: ಈ ನಿರ್ಧಾರವನ್ನು ‘ಒಂದು ದಿಟ್ಟ ಹೆಜ್ಜೆ’ ಎಂದು ಬಣ್ಣಿಸಿರುವ ರಣದೀಪ್ ಸಿಂಗ್ ಸುರ್ಜೆವಾಲ, ಈ ಮೂಲಕ ರಾಜ್ಯ ಸರಕಾರವು ಮಹಿಳೆಯರ ಬಹುದಿನಗಳ ಬೇಡಿಕೆಗೆ ಸ್ಪಂದಿಸಿದೆ. ‘ಋತುಚಕ್ರದ ಸಂದರ್ಭದಲ್ಲಿ ಮಹಿಳೆಯರು ಅನುಭವಿಸುವ ನೋವು ಮತ್ತು ಆರೋಗ್ಯದ ಸೂಕ್ಷ್ಮತೆಯನ್ನು ಗುರುತಿಸಿ ವೇತನ ಸಹಿತ ರಜೆ ಘೋಷಿಸಿರುವುದು, ಮಹಿಳೆಯರ ಸ್ವಾವಲಂಬನೆಗೆ ಮತ್ತು ಆರೋಗ್ಯಕ್ಕೆ ಒಂದು ದಾರಿ ಮಾಡಿಕೊಟ್ಟಿದೆ’ ಎಂದು ಅವರು ತಿಳಿಸಿದ್ದಾರೆ.

ಇದು ಪಂಚ ಗ್ಯಾರಂಟಿಯ ಮುಂದುವರಿದ ಭಾಗ: ರಾಜ್ಯ ಸರಕಾರವು ಈಗಾಗಲೆ ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆಗಳ ಸರಣಿಯಲ್ಲಿ ಇದೊಂದು ಮಹತ್ವದ ಮುಂದುವರಿದ ಭಾಗವಾಗಿದೆ ಎಂದು ರಣದೀಪ್ ಸಿಂಗ್ ಸುರ್ಜೆವಾಲ ಅಭಿಪ್ರಾಯಪಟ್ಟಿದ್ದಾರೆ.

ಈಗಾಗಲೇ ಗೃಹಲಕ್ಷ್ಮಿ, ಗೃಹ ಜ್ಯೋತಿ ಮತ್ತು ಶಕ್ತಿ ಯೋಜನೆಗಳ ಮೂಲಕ ನಮ್ಮ ಸರಕಾರವು ಮಹಿಳೆಯರನ್ನು ಸಮಾಜದ ಮುಖ್ಯವಾಹಿನಿಗೆ ತಂದು ಒಂದು ಮೈಲಿಗಲ್ಲು ಸಾಧಿಸಿದೆ. ಆರ್ಥಿಕ ಮತ್ತು ಸಾಮಾಜಿಕ ಸಬಲೀಕರಣದ ಈ ಕ್ರಮಗಳ ಬೆನ್ನಲ್ಲೇ, ದೈಹಿಕ ಆರೋಗ್ಯಕ್ಕೆ ಸಂಬಂಧಿಸಿದ ಈ ನಿರ್ಧಾರವು ಮಹಿಳೆಯರ ಪಾಲಿಗೆ ಮತ್ತಷ್ಟು ಸ್ವಾವಲಂಬನೆ ಶಕ್ತಿ ತುಂಬಿದೆ ಎಂದು ಅವರು ಹೇಳಿದ್ದಾರೆ.

ಈ ರಜಾ ನೀತಿಯು ರಾಜ್ಯದ ಎಲ್ಲ ಸರಕಾರಿ ಕಚೇರಿಗಳು, ಖಾಸಗಿ ವಲಯ, ಗಾರ್ಮೆಂಟ್ಸ್‌, ಬಹುರಾಷ್ಟ್ರೀಯ ಕಂಪನಿಗಳು ಮತ್ತು ಐಟಿ ಸಂಸ್ಥೆಗಳು ಸೇರಿದಂತೆ ಎಲ್ಲ ವಲಯದ ಉದ್ಯೋಗಸ್ಥ ಮಹಿಳೆಯರಿಗೂ ಅನ್ವಯವಾಗುತ್ತದೆ. ವಾರ್ಷಿಕವಾಗಿ ಒಟ್ಟು 12 ದಿನಗಳು ರಜೆ ಸಿಗುವಂತೆ ಮಾಡಿರುವುದು ನಿಜಕ್ಕೂ ಅಭಿನಂದನಿಯ ಕ್ರಮ ಎಂದು ಸುರ್ಜೆವಾಲ ಹೇಳಿದ್ದಾರೆ.

ರಾಜ್ಯ ಸರಕಾರದ ಈ ಋತುಚಕ್ರ ರಜೆ ನೀತಿ 2025 ದೇಶಕ್ಕೆ ಮಾದರಿಯಾಗಿದೆ ಎಂದು ಹೇಳಿರುವ ರಣದೀಪ್ ಸಿಂಗ್ ಸುರ್ಜೆವಾಲ, ನಮ್ಮ ಕಾಂಗ್ರೆಸ್ ಪಕ್ಷವು ಹುಟ್ಟಿನಿಂದಲೂ ಮಹಿಳೆಯರ ಬಗ್ಗೆ ಅಪಾರವಾದ ಗೌರವವನ್ನು ಹೊಂದಿದೆ. ಜೊತೆಗೆ ಅವರ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಇಂತಹ ಮಾನವೀಯ ಮತ್ತು ಪ್ರಗತಿಪರ ಕ್ರಮವನ್ನು ಕೈಗೊಳ್ಳಲು ಕಾಂಗ್ರೆಸ್ ಸರಕಾರಕ್ಕೆ ಮಾತ್ರ ಸಾಧ್ಯ. ಈ ನಿರ್ಧಾರದಿಂದಾಗಿ ಕರ್ನಾಟಕವು ಗ್ಯಾರಂಟಿ ಯೋಜನೆಗಳ ನಂತರ ಮತ್ತೊಮ್ಮೆ ಇಡೀ ದೇಶಕ್ಕೆ ಮತ್ತು ಇತರ ರಾಜ್ಯಗಳಿಗೆ ಮಾದರಿಯಾಗಿದೆ ಎಂದು ಪ್ರಶಂಸಿಸಿದ್ದಾರೆ.

ನಮ್ಮ ಕರ್ನಾಟಕ ಕಾಂಗ್ರೆಸ್ ಸರಕಾರದ ಈ ಐತಿಹಾಸಿಕ ನಿರ್ಧಾರಕ್ಕಾಗಿ ಸಚಿವ ಸಂಪುಟವನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ. ಇದು ಕೇವಲ ರಜೆಯಲ್ಲ, ಮಹಿಳೆಯರ ಆರೋಗ್ಯದ ಹಕ್ಕು ಮತ್ತು ಘನತೆಯನ್ನು ಎತ್ತಿಹಿಡಿಯುವ ಕ್ರಮ ಎಂದು ರಣದೀಪ್ ಸಿಂಗ್ ಸುರ್ಜೆವಾಲಾ ಪ್ರಕಟಣೆಯಲ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News