×
Ad

ಯಾವುದೇ ಬೆದರಿಕೆಗಳಿಗೆ ಕಾಂಗ್ರೆಸ್ ಪಕ್ಷ ಮಣಿಯುವುದಿಲ್ಲ : ರಮೇಶ್‍ ಬಾಬು

Update: 2025-10-14 22:05 IST

ಬೆಂಗಳೂರು, ಅ. 14: ‘ಬಿಜೆಪಿ ನಾಯಕರು ಸಂಘ ಪರಿವಾರದ ಹೆಸರಿನಲ್ಲಿ ಕಾಂಗ್ರೆಸ್ ಪಕ್ಷದ ಮೇಲೆ ಮುಗಿ ಬೀಳುವ ಪ್ರಯತ್ನ ಮಾಡುತ್ತಿದ್ದಾರೆ. ‘ಸಂಘ’ದಲ್ಲಿ ಕಲಿತಿರುವ ಮತ್ತು ಕಲಿಯಬಹುದಾದ ದ್ವೇಷ ಭಾವನೆಯ ಪರಮಾವಧಿಯನ್ನು ಬಿಜೆಪಿ ನಾಯಕರು ತಲುಪಿದ್ದಾರೆ. ಇವರ ಆದರ್ಶ ವ್ಯಕ್ತಿತ್ವದ ಇನ್ನೊಂದು ಮುಖವಾಡ ಬಹಿರಂಗವಾಗುತ್ತಿದೆ’ ಎಂದು ಕೆಪಿಸಿಸಿ ಮಾಧ್ಯಮ ವಿಭಾಗದ ಅಧ್ಯಕ್ಷ ಹಾಗೂ ಪರಿಷತ್ ಸದಸ್ಯ ರಮೇಶ್ ಬಾಬು ವಾಗ್ದಾಳಿ ನಡೆಸಿದ್ದಾರೆ.

ಮಂಗಳವಾರ ನಗರದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಿಜೆಪಿ ನಾಯಕರ ಪ್ರಚೋದನೆ ಹಿನ್ನೆಲೆಯಲ್ಲಿ ಸನಾತನಿಗಳು ಮತ್ತು ಸಂಘ ಪರಿವಾರದ ಮೂಲಭೂತವಾದಿಗಳು ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಪ್ರಾಣ ಬೆದರಿಕೆ ಒಡ್ಡುವುದು ಹಾಗೂ ಅವರ ಕುಟುಂಬವನ್ನು ನಿಂದಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಇದರ ಹಿಂದೆ ಬಿಜೆಪಿ ನಾಯಕರ ತಂತ್ರವು ಅಡಗಿದೆ’ ಎಂದು ದೂರಿದರು.

ಗೋಡ್ಸೆ ಮನಸ್ಥಿತಿಯಿಂದ ಹೊರಬರದ ಬಿಜೆಪಿ ನಾಯಕರು, ಸಂಘ ಪರಿವಾರದ ಸಂಸ್ಕೃತಿ ಕಲಿತಿರುವ ಜನನಾಯಕರು ಈ ದಿನ ಕಾಂಗ್ರೆಸ್ ನಾಯಕರಿಗೆ ಪ್ರಾಣ ಬೆದರಿಕೆಯನ್ನು ಒಡ್ಡುವ ಪರಿಪಾಠವನ್ನು ಮುಂದುವರಿಸಿದ್ದಾರೆ. ಯಾವುದೇ ಸಂಘಟನೆ ತಮ್ಮ ಮೇಲೆ ಆರೋಪ ಬಂದರೆ ಆ ಸಂದರ್ಭದಲ್ಲಿ ಅದನ್ನು ಆಧಾರ ಪೂರಕವಾಗಿ ನಿರಾಕರಿಸಬೇಕಾಗುತ್ತದೆ ಎಂದು ಅವರು ತಿಳಿಸಿದರು.

ಆರೋಗ್ಯಕರವಾದ ಟೀಕೆಗೆ ತೆರೆದುಕೊಳ್ಳದ ಬಿಜೆಪಿ ನಾಯಕರು, ಸಂಘ ಪರಿವಾರದ ಮೇಲೆ ಪತ್ರ ಬರೆದ ಒಂದೇ ಕಾರಣಕ್ಕೆ ಪ್ರಾಣ ಬೆದರಿಕೆ ಒಡ್ಡಲು ಮುಂದಾಗಿರುತ್ತಾರೆ. ಇಂತಹ ಯಾವುದೇ ಬೆದರಿಕೆಗಳಿಗೆ ಕಾಂಗ್ರೆಸ್ ಪಕ್ಷ ಮಣಿಯುವುದಿಲ್ಲ. ಕಾಂಗ್ರೆಸ್ ನಾಯಕರ ಅಳಿಸುವ ಅಥವಾ ಕಾಂಗ್ರೆಸ್ ಪಕ್ಷದ ಸಿದ್ಧಾಂತವನ್ನು ಮುಚ್ಚುವ ಪ್ರಯತ್ನದಲ್ಲಿ ಸಂಘ ಪರಿವಾರದ ಅಥವಾ ಬಿಜೆಪಿ ನಾಯಕರು ಸಫಲವಾಗುವುದಿಲ್ಲ ಎಂದು ಅವರು ಕಿಡಿಕಾರಿದರು.

ಕಾಂಗ್ರೆಸ್ ಪಕ್ಷವನ್ನು ಟೀಕಿಸುವ ನೆಪದಲ್ಲಿ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಸೇರಿದಂತೆ ಇನ್ನಿತರರು ಕೆಳಮಟ್ಟದ ಭಾಷೆಯನ್ನು ಬಳಸಿರುತ್ತಾರೆ. ಸದನದ ಒಳಗೆ ನೀಲಿಚಿತ್ರ ನೋಡಿದ ಬಿಜೆಪಿ ನಾಯಕರು ತಮ್ಮ ಕಚ್ಚೆ ಹರುಕತನವನ್ನು ಮುಚ್ಚಿಟ್ಟುಕೊಂಡಿದ್ದಾರೆ. ಮನಸ್ಮೃತಿಯ ಪಕ್ಷವಾದ ಬಿಜೆಪಿ ನಾಯಕರ ಇಂತಹ ಕೆಳಮಟ್ಟದ ಮನಸ್ಥಿತಿಯನ್ನು ಕಾಂಗ್ರೆಸ್ ಖಂಡಿಸುತ್ತದೆ ಎಂದು ಅವರು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News