ರಾಜ್ಯದಲ್ಲಿ ಆರೆಸ್ಸೆಸ್ ನಿಷೇಧಿಸಲು ಆಗ್ರಹ
ಬೆಂಗಳೂರು, ಅ.14 : ಮಕ್ಕಳಲ್ಲಿ ದ್ವೇಷದ ವಿಷ ಬೀಜ ಬಿತ್ತುತ್ತಿರುವ ಮತ್ತು ಹಿಂದೂ-ಮುಸ್ಲಿಮ್ ಹೆಸರಿನಲ್ಲಿ ಕೋಮುಗಲಭೆಗಳ ಮೂಲಕ ಭಯೋತ್ಪಾದನೆ ಸೃಷ್ಟಿಸುತ್ತಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರೆಸ್ಸೆಸ್)ವನ್ನು ಕರ್ನಾಟಕ ರಾಜ್ಯದಲ್ಲಿ ನಿಷೇಧಿಸಬೇಕು ಎಂದು ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್ ಗೌಡ ಆಗ್ರಹಿಸಿದ್ದಾರೆ.
ಮಂಗಳವಾರ ನಗರದ ಫ್ರೀಡಂ ಪಾರ್ಕ್‍ನಲ್ಲಿ ಯುವ ಕಾಂಗ್ರೆಸ್ ವತಿಯಿಂದ ಕೇರಳ ರಾಜ್ಯದಲ್ಲಿ ಆರೆಸ್ಸೆಸ್ ಮುಖಂಡರಿಂದ ಸಾಫ್ಟ್ ವೇರ್ ಎಂಜಿನಿಯರ್ ಮೇಲೆ ನಡೆದಂತಹ ಲೈಂಗಿಕ ದೌರ್ಜನ್ಯ ಮತ್ತು ಆತ್ಮಹತ್ಯೆಯನ್ನು ವಿರೋಧಿಸಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಆರೆಸ್ಸೆಸ್‍ಗೆ ನೂರು ವರ್ಷ ತುಂಬಿದೆ ಎಂದು ಸಂಭ್ರಮಾಚರಣೆ ಮಾಡುತ್ತಿದೆ. ಆದರೆ ಅದರಿಂದ ದೇಶಕ್ಕೆ ಇಲ್ಲಿಯವರೆಗೂ ಯಾವೊಂದು ಒಳ್ಳೆಯ ಕೆಲಸವೂ ಆಗಿಲ್ಲ ಎಂದು ಟೀಕಿಸಿದರು.
ಆರೆಸ್ಸೆಸ್‍ನ ಯಾವೊಬ್ಬ ನಾಯಕರೂ ದೇಶದ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿಲ್ಲ ಮತ್ತು ಬೆಂಬಲವನ್ನೂ ಸೂಚಿಸಿಲ್ಲ. ಸುಪ್ರೀಂಕೋರ್ಟ್‍ನ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರ ಮೇಲೆ ಸನಾತನಿ ವಕೀಲ ಶೂ ಎಸೆದ ಪ್ರಕರಣಕ್ಕೆ ಇಲ್ಲಿಯವರೆಗೂ ಬಿಜೆಪಿ, ಆರೆಸ್ಸೆಸ್‍ನವರು ಯಾರೂ ಖಂಡನೆ ವ್ಯಕ್ತಪಡಿಸಿಲ್ಲ, ಬಂಧಿಸಲೂ ಆಗ್ರಹಿಸಿಲ್ಲ. ಅವರು ಏನಿದ್ದರೂ ಮೇಲ್ವರ್ಗದವರಿಗೆ ಮಾತ್ರ ಬೆಂಬಲ ಸೂಚಿಸುತ್ತಾರೆ ಹೊರತು, ದಲಿತರ ಪರವಾಗಿ ಎಂದೂ ಧ್ವನಿ ಎತ್ತುವುದಿಲ್ಲ ಎಂದು ಮಂಜುನಾಥ್ ಗೌಡ ಆಕ್ರೋಶ ವ್ಯಕ್ತಪಡಿಸಿದರು.
ಸಮಾನತೆ, ಸ್ವಾತಂತ್ರ್ಯವನ್ನೂ ಎಂದಿಗೂ ಒಪ್ಪಿಕೊಂಡಿಲ್ಲ. ಆದುದರಿಂದಲೇ ಸಮಾನತೆಯನ್ನು ಪ್ರತಿಪಾದಿಸಿದ ಗಾಂಧಿ, ಅಂಬೇಡ್ಕರ್, ಪೆರಿಯಾರ್, ಬಸವಣ್ಣನಂತಹ ನಾಯಕರ ಸಿದ್ದಾಂತಗಳನ್ನು ಸಹಿಸುವುದಿಲ್ಲ. ಇವರು ದೇಶಪ್ರೇಮಿಗಳಲ್ಲ, ದೇಶ ವಿರೋಧಿಗಳು, ಭಯೋತ್ಪಾದಕರು. ದೇಶವನ್ನು ಹಾಳು ಮಾಡಲೆಂದೇ ಹುಟ್ಟಿದ್ದಾರೆ. ಆ ನಿಟ್ಟಿನಲ್ಲಿಯೇ ಕೆಲಸ ಮಾಡುತ್ತಿದ್ದಾರೆ. ಇಂತಹ ಆರೆಸ್ಸೆಸ್ ಮನುವಾದಿ ಸಂಘಟನೆಯನ್ನು ರಾಜ್ಯದಲ್ಲಿ ಕೂಡಲೇ ನಿಷೇಧ ಮಾಡಬೇಕು ಎಂದು ಮಂಜುನಾಥ್ ಗೌಡ ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಕಾರ್ಯಕರ್ತರಾದ ಚೈತ್ರ ಗೌಡ, ನದೀಂ ಅಕ್ರಮ್, ಮುಹಮ್ಮದ್ ಮಾರೂಫ್, ರೇಶಲ್, ಪವನ್ ಗೌಡ, ವಿಶ್ವನಾಥ್ ಸೇರಿದಂತೆ ಹಲವರು ಭಾಗಹಿಸಿದ್ದರು.
ಆರೆಸ್ಸೆಸ್ ಭಾವಚಿತ್ರಕ್ಕೆ ಬೆಂಕಿ ಹಾಕುವ ಮೂಲಕ ಪ್ರತಿಭಟನಾಕಾರರು ಆಕ್ರೋಶವನ್ನು ವ್ಯಕ್ತಪಡಿಸಿದರು. ಈ ವೇಳೆಯಲ್ಲಿ ರಸ್ತೆಗೆ ನುಗ್ಗಿದ ರಾಜ್ಯ ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ, ಹೋರಾಟಗಾರರನ್ನು ಚದುರಿಸಿದರು.