×
Ad

ಭತ್ತ ಸಂಶೋಧನೆ: ಫಿಲಿಪೈನ್ಸ್‌ನೊಂದಿಗೆ ಒಡಂಬಡಿಕೆ

Update: 2025-10-15 21:15 IST

ಮನಿಲಾ(ಫಿಲಿಪೈನ್ಸ್), ಅ.15: ರಾಜ್ಯದಲ್ಲಿ ಭತ್ತದ ತಳಿಗಳ ಆಧುನಿಕ ಸಂಶೋಧನೆ ಮತ್ತು ಸಂವರ್ಧನೆಗೆ ನೆರವಾಗುವ ಕುರಿತು ಫಿಲಿಪೈನ್ಸ್‌ ನ ಅಂತರ ರಾಷ್ಟ್ರೀಯ ಭತ್ತ ಸಂಶೋಧನಾ ಕೇಂದ್ರದೊಂದಿಗೆ ಮಂಡ್ಯ ಕೃಷಿ ವಿಶ್ವವಿದ್ಯಾಲಯ ಮಹತ್ವದ ಒಡಂಬಡಿಕೆ ಮಾಡಿಕೊಂಡಿದೆ.

ಫಿಲಿಪೈನ್ಸ್‌ ನ ಮನಿಲಾದಲ್ಲಿರುವ ಅಂತರರಾಷ್ಟ್ರೀಯ ಭತ್ತ ಸಂಶೋಧನಾ ಕೇಂದ್ರಕ್ಕೆ ಉನ್ನತ ಮಟ್ಟದ ನಿಯೋಗದೊಂದಿಗೆ ತೆರಳಿರುವ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಒಪ್ಪಂದಕ್ಕೆ ಸಹಿ ಮಾಡಿದರು. ರಾಜ್ಯದಲ್ಲಿ ನೆರೆ ಹಾವಳಿ, ಬರ ಪರಿಸ್ಥಿತಿ ಗಳು ಕರಾವಳಿ, ಮಲೆನಾಡು ಬಯಲು ಸೀಮೆ ವಿಭಿನ್ನ ಭೌಗೋಳಿಕ ಪರಿಸರಕ್ಕೆ ಹೊಂದಾಣಿಕೆಯಾಗುವ ವಿವಿಧ ಜೈವಿಕ, ಅಜೈವಿಕ ಒತ್ತಡಗಳಿಗೆ ನಿರೋಧಕತೆ ಜೊತೆಗೆ ಪೌಷ್ಠಿಕಾಂಶ ಉಳ್ಳ, ಅಧಿಕ ಇಳುವರಿ ತರುವ ಬೇಸಾಯ ಕ್ರಮಗಳು ಮತ್ತು ಭತ್ತದ ತಳಿಗಳ ಸಂಶೋಧನೆಗೆ ಈ ಒಡಂಬಡಿಕೆ ನೆರವಾಗಲಿದೆ.

ಇದೇ ವೇಳೆ ಕರ್ನಾಟಕದಲ್ಲಿಯೂ ಅಂತರ ರಾಷ್ಟ್ರೀಯ ಮಟ್ಟದ ಭತ್ತ ಸಂಶೋಧನಾ ಕೇಂದ್ರ ಸ್ಥಾಪನೆ ಬಗ್ಗೆಯೂ ಸಚಿವರು ಮಹತ್ವದ ಚರ್ಚೆ ನಡೆಸಿದರು. ಅಲ್ಲದೆ ಭತ್ತದ ಮಹತ್ವ, ಉಭಯ ದೇಶಗಳು ಅನುಸರಿಸುತ್ತಿರುವ ಬೇಸಾಯ ಕ್ರಮಗಳು, ಮೌಲ್ಯ ವರ್ಧನೆಗೆ ಅನುಸರಿಸಬೇಕಾದ ಮಾರ್ಗೋಪಾಯಗಳ ಬಗ್ಗೆ ಮಾಹಿತಿ ಹಾಗೂ ಅನುಭವಗಳನ್ನು ವಿನಿಮಯ ಮಾಡಿಕೊಳ್ಳಲಾಯಿತು.

ಭತ್ತದ ತಳಿಗಳ ಸಂರಕ್ಷಣೆ, ಸಂಶೋಧನೆಗೆ ಕರ್ನಾಟಕ ಸರಕಾರ ತೋರುತ್ತಿರುವ ಕಾಳಜಿ ಮತ್ತು ರೈತ ಪರ ಯೋಜನೆಗಳ ಬಗ್ಗೆ ಫಿಲಿಪೈನ್ಸ್‌ನ ಅಂತರ ರಾಷ್ಟ್ರೀಯ ಭತ್ತ ಸಂಶೋಧನಾ ಕೇಂದ್ರದ ಅಧಿಕಾರಿಗಳು ಮೆಚ್ಚುಗೆ ಸೂಚಿಸಿ ಇದಕ್ಕೆ ಕಾರಣರಾಗಿರುವ ಕೃಷಿ ಸಚಿವರಾದ ಎನ್.ಚಲುವರಾಯಸ್ವಾಮಿ ಅವರಿಗೆ ಅಭಿನಂದನೆ ಸಲ್ಲಿಸಿದರು.

1945ರಿಂದಲೂ ಭಾರತ ಮತ್ತು ಫಿಲಿಪೈನ್ಸ್ ನಡುವೆ ಇರುವ ಬಾಂಧವ್ಯ, ಕೃಷಿ ಕ್ಷೇತ್ರದ ಸಹಕಾರಗಳನ್ನು ಸಹ ಸ್ಮರಿಸಿ, ಶ್ಲಾಘಿಸಲಾಯಿತು. ಅಂತರ ರಾಷ್ಟ್ರೀಯ ಭತ್ತದ ಸಂಶೋಧನಾ ಕೇಂದ್ರದ ಉಪ ಮಹಾ ನಿರ್ದೇಶಕರಾದ ಜುನೆಲ್ ಸಯಾನೋ, ಡಾ.ಸಂಕಲ್ಪ್ ಭೋಸ್ಲೆ, ಮಂಡ್ಯ ಕೃಷಿ ವಿವಿ ವಿಶೇಷಾಧಿಕಾರಿ ಡಾ.ಕೆ.ಎಂ.ಹರಿಣಿಕುಮಾರ್, ಡಾ.ವೇಣುಪ್ರಸಾದ್, ಡಾ.ಮಲ್ಲಿಕಾರ್ಜುನ ಸ್ವಾಮಿ, ವಿ.ಸಿ.ಫಾರಂನ ಭತ್ತದ ತಳಿ ವಿಜ್ಞಾನಿ ಡಾ.ದೀಪಕ್, ರಾಯಚೂರು ಕೃಷಿ ವಿವಿಯ ಕೃಷಿ ವಿಜ್ಞಾನಿ ಡಾ.ಸುಜಯ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News