‘ಮತಕಳ್ಳತನ’ ಪ್ರಜಾಪ್ರಭುತ್ವದ ಕಗ್ಗೊಲೆ : ಸಚಿವ ಕೆ.ಜೆ.ಜಾರ್ಜ್
ಬೆಂಗಳೂರು, ಅ. 18: ಮತ ಕಳ್ಳತನದ ಮೂಲಕ ಕೇಂದ್ರದಲ್ಲಿ ಅಧಿಕಾರ ಹಿಡಿದಿರುವ ಬಿಜೆಪಿಯ ಅಧಿಕಾರ ದುರುಪಯೋಗದ ಬಗ್ಗೆ ಮನೆ ಮನೆಗೆ ತೆರಳಿ ಜನರಿಗೆ ಮನವರಿಕೆ ಮಾಡಿಕೊಡಲಾಗುವುದು ಎಂದು ಇಂಧನ ಸಚಿವರೂ ಆಗಿರುವ ಸರ್ವಜ್ಞನಗರ ಕ್ಷೇತ್ರದ ಶಾಸಕ ಕೆ.ಜೆ.ಜಾರ್ಜ್ ಹೇಳಿದ್ದಾರೆ.
ಶನಿವಾರ ಸರ್ವಜ್ಞನಗರ ಕ್ಷೇತ್ರದ ಬಾಣಸವಾಡಿಯಲ್ಲಿ ಪ್ರದೇಶ ಕಾಂಗ್ರೆಸ್ ವತಿಯಿಂದ ಹಮ್ಮಿಕೊಂಡಿದ್ದ ‘ಮತ ಕಳ್ಳತನ’ ವಿರುದ್ಧದ ಸಹಿ ಸಂಗ್ರಹ ಅಭಿಯಾನದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಮ್ಮ ನಾಯಕ ರಾಹುಲ್ ಗಾಂಧಿ ಮತ ಕಳ್ಳತನದ ಬಗ್ಗೆ ಸಾಕ್ಷಿ ಸಮೇತ ಬಹಿರಂಗಗೊಳಿಸಿದ್ದಾರೆ. ರಾಹುಲ್ ಗಾಂಧಿ ಅವರು ನೀಡಿರುವ ದಾಖಲೆಗಳಿಗೆ ಇದುವರೆಗೂ ಚುನಾವಣಾ ಆಯೋಗ ಸಮರ್ಪಕ ಉತ್ತರ ನೀಡಿಲ್ಲ ಎಂದು ಆರೋಪಿಸಿದರು.
ಚು.ಆಯೋಗ ಮತ್ತು ಬಿಜೆಪಿಯ ಈ ಮತಗಳ್ಳತನದ ವಿರುದ್ಧ ನಮ್ಮ ಹೋರಾಟ ನಿಲ್ಲುವುದಿಲ್ಲ. ಮನೆ ಮನೆಗೆ ಹೋಗಿ ಬಿಜೆಪಿಯ ಅಧಿಕಾರ ದುರುಪಯೋಗದ ಬಗ್ಗೆ ಜನರಿಗೆ ತಿಳಿಸುತ್ತೇವೆ. ಲೋಕಸಭೆ ಚುನಾವಣೆ ವೇಳೆ ಮಹದೇವಪುರ ಕ್ಷೇತ್ರದಲ್ಲಿ ನಡೆದಿರುವ ಮತಗಳ್ಳತನ ಕೇವಲ ಕಾಂಗ್ರೆಸ್ ಪಕ್ಷಕ್ಕೆ ಮಾತ್ರವಲ್ಲ, ಪ್ರಜಾಪ್ರಭುತ್ವಕ್ಕೇ ಮಾರಕ. ಹಿಂಬಾಗಿಲ ಮೂಲಕ ಅಧಿಕಾರ ಹಿಡಿಯುವ ಬಿಜೆಪಿಗೆ ಕರ್ನಾಟಕದಲ್ಲಿ ಯಾವತ್ತೂ ಜನಾದೇಶ ಸಿಕ್ಕಿಲ್ಲ. ಹೀಗಾಗಿ ಮತ ಕಳ್ಳತನವನ್ನೇ ಆಸರೆಯಾಗಿಟ್ಟುಕೊಂಡು ಅಧಿಕಾರಕ್ಕೆ ಬಂದಿದೆ ಎಂದು ಕಿಡಿಕಾರಿದರು.
ಕಾಂಗ್ರೆಸ್ ಯಾವಾಗಲೂ ಜನಾದೇಶವನ್ನು ಗೌರವಿಸಿದೆ. ಹಿಂದೆ ಇಂದಿರಾ ಗಾಂಧಿ ಅವರು ಚುನಾವಣೆಯಲ್ಲಿ ಹಿನ್ನಡೆ ಅನುಭವಿಸಿದ್ದರೂ ಜನಾದೇಶಕ್ಕೆ ಮನ್ನಣೆ ನೀಡಿದ್ದರು. ಇದರ ಮಧ್ಯೆ ಚಿಕ್ಕಮಗಳೂರಿನ ಜನ ಇಂದಿರಾ ಅವರಿಗೆ ಶಕ್ತಿ ನೀಡಿ ಲೋಕಸಭೆಗೆ ಕಳುಹಿಸಿಕೊಟ್ಟರು ಎಂದು ಅವರು ಸ್ಮರಿಸಿದರು.
ಜಾತಿ, ಧರ್ಮದ ಆಧಾರದಲ್ಲಿ ಕಾಂಗ್ರೆಸ್ ರಾಜಕಾರಣ ಮಾಡುವುದಿಲ್ಲ. ನಮ್ಮದು ಅಭಿವೃದ್ಧಿ ಕೇಂದ್ರಿತ, ಹಿಂದುಳಿದವರನ್ನು ಮುನ್ನಲೆಗೆ ತರುವ ಬದ್ಧತೆಯ ರಾಜಕಾರಣ. ಕರ್ನಾಟಕದಲ್ಲಿ ಜಾರಿಯಾಗಿರುವ ಗ್ಯಾರಂಟಿ ಯೋಜನೆಗಳು ಯಾವುದೇ ಜಾತಿ- ಧರ್ಮದ ಆಧಾರದಲ್ಲಿ ಅಲ್ಲ. ಎಲ್ಲ ಸಮುದಾಯಗಳ ಅರ್ಹ ಫಲಾನುಭವಿಗಳಿಗೆ ಗ್ಯಾರಂಟಿ ಸೌಲಭ್ಯಗಳನ್ನು ನೀಡಲಾಗುತ್ತಿದೆ ಎಂದರು.
ಕಾಂಗ್ರೆಸ್ ಮುಖಂಡ ಅಬ್ದುಲ್ ವಾಜೀದ್ ಮಾತನಾಡಿ, ಮತಗಳ್ಳತನದ ವಿರುದ್ಧ ಕಾಂಗ್ರೆಸ್ ಹೋರಾಟ ಆರಂಭಿಸಿದೆ. ಸಹಿ ಮಾಡಿ ಸುಮ್ಮನೆ ಇರುವುದಿಲ್ಲ, ಪ್ರತಿ ಮನೆಗೂ ಹೋಗಿ ವೋಟ್ ಚೋರಿ ಬಗ್ಗೆ ತಿಳಿಸಲಾಗುವುದು. ಅಲ್ಲದೆ, ಆಳಂದ ಕ್ಷೇತ್ರದ ಮಾಜಿ ಶಾಸಕ ಸುಭಾಷ್ ಗುತ್ತೇದಾರ್ ಮನೆಯಲ್ಲಿ ಎಸ್‍ಐಟಿ ದಾಳಿ ವೇಳೆ ಸಿಕ್ಕಿದ ಮತದಾರರ ಗುರುತಿನ ಚೀಟಿಗಳು ಬಿಜೆಪಿಯ ಮತಗಳ್ಳತನವನ್ನು ಬಯಲು ಮಾಡಿದೆ ಎಂದರು.