ನನ್ನ ಹೇಳಿಕೆ ತಿರುಚಲಾಗಿದೆ : ಉಪ ಲೋಕಾಯುಕ್ತ ನ್ಯಾ.ಬಿ.ವೀರಪ್ಪ ಬೇಸರ
Update: 2025-12-05 22:24 IST
ಬೆಂಗಳೂರು : 'ಶೇ.63ರಷ್ಟು ಭ್ರಷ್ಟಾಚಾರʼ ಸಂಬಂಧ ನನ್ನ ಹೇಳಿಕೆಯನ್ನು ದುರ್ಬಳಕೆ ಮಾಡಿಕೊಂಡಿರುವುದು ಮಾತ್ರವಲ್ಲದೆ, ತಿರುಚಲಾಗಿದೆ ಎಂದು ಉಪ ಲೋಕಾಯುಕ್ತ ನ್ಯಾ.ಬಿ.ವೀರಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಹೇಳಿಕೆಯನ್ನು ತಿರುಚಲಾಗಿದೆ. ರಾಜಕೀಯ ನಾಯಕರು ಇದನ್ನು ತಮ್ಮ ಸ್ವಾರ್ಥಕ್ಕೆ ಬಳಸಿಕೊಂಡಿದ್ದಾರೆ. ನಾನು ನಮ್ಮ ದೇಶ, ನಮ್ಮ ರಾಜ್ಯ ಎಂದು ಸಾಮಾನ್ಯೀಕರಿಸಿ ಮಾಡಿ ಮಾತನಾಡಿದ್ದೇನೆ. ನನ್ನ ಹೇಳಿಕೆಯನ್ನು ಈ ರೀತಿ ಬಳಕೆ ಮಾಡಿಕೊಂಡಿರುವುದು ನನಗೆ ನಿಜಕ್ಕೂ ನೋವು ತಂದಿದೆ ಎಂದರು.
ಈ ಭ್ರಷ್ಟಾಚಾರಕ್ಕೆ ಸಮಾಜ ಮತ್ತು ಜನರು ಕೂಡ ಕಾರಣ. ಆರಂಭದಿಂದಲೂ ಎಲ್ಲ ಸರಕಾರಗಳು ಕೂಡ ಭ್ರಷ್ಟಾಚಾರದಲ್ಲಿ ಇವೆ. ನಾನು ಯಾವುದೇ ಒಂದು ನಿರ್ದಿಷ್ಟ ಸರಕಾರ ಎಂದು ಗುರಿಯಾಗಿಸಿ ಹೇಳಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.