ಕೋಗಿಲು ಪ್ರಕರಣ: ಅಧಿಕಾರಿಗಳಿಂದ ದಾಖಲೆಗಳ ಸಂಗ್ರಹ
ಬೆಂಗಳೂರು : ಬ್ಯಾಟರಾಯನಪುರ ಕ್ಷೇತ್ರದ ಕೋಗಿಲು ಬಡಾವಣೆಯಲ್ಲಿ ಮನೆ ಕಳೆದುಕೊಂಡಿರುವ ಸಂತ್ರಸ್ತರಿಗೆ ಬೈಯ್ಯಪ್ಪನಹಳ್ಳಿಯ ರಾಜೀವ್ ಗಾಂಧಿ ನಿಗಮಗದ ವಸತಿ ಸಮುಚ್ಛಯದಲ್ಲಿ ನಿರ್ಮಿಸುತ್ತಿರುವ ಮನೆಗಳನ್ನು ಹಂಚಿಕೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ ಬೆನ್ನಲ್ಲೆ ಅಧಿಕಾರಿಗಳು ದಾಖಲೆಗಳ ಸಂಗ್ರಹದಲ್ಲಿ ತೊಡಗಿದ್ದಾರೆ.
ಮಂಗಳವಾರ ಮನೆ ನೀಡುವ ಪ್ರಕ್ರಿಯೆಗೆ ಸಂಬಂಧಿಸಿದಂತೆ ಕೋಗಿಲು ಬಡಾವಣೆ ಸಂತ್ರಸ್ತರಿಂದ ಜಿಲ್ಲಾಡಳಿತ, ಜಿಬಿಎ ಮತ್ತು ರಾಜೀವ್ ಗಾಂಧಿ ವಸತಿ ನಿಗಮದ ಅಧಿಕಾರಿಗಳು ದಾಖಲೆಗಳನ್ನು ಸಂಗ್ರಹಿಸಿದ್ದಾರೆ. ಪ್ರತಿ ಮನೆಯಿಂದ ಐದು ದಾಖಲೆಗಳನ್ನು ಸಂಗ್ರಹಿಸಲಾಗುತ್ತಿದೆ. ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ವಿದ್ಯುತ್ ಬಿಲ್, ತಾತ್ಕಾಲಿಕ ಆದೇಶ ಪ್ರತಿ, ಪಡಿತರ ಚೀಟಿಯನ್ನು ಜಿಬಿಎ ಅಧಿಕಾರಿಗಳ ತಂಡ ಸಂಗ್ರಹಿಸುತ್ತಿದೆ. ಸಂಗ್ರಹಿಸಿದ ದಾಖಲೆಗಳನ್ನು ಕೋಗಿಲು ಸರಕಾರಿ ಶಾಲೆಯಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
ಜಿಲ್ಲಾಡಳಿತ ಅಧಿಕಾರಿಗಳು ಸಹ ಸ್ಥಳ ಪರಿಶೀಲನೆ ನಡೆಸಿ, ಸಂತ್ರಸ್ತರಿಂದ ಮಾಹಿತಿ ಪಡೆದುಕೊಂಡರು. ರಾಜೀವ್ ಗಾಂಧಿ ವಸತಿ ನಿಗಮದ ಅಧಿಕಾರಿಗಳು ಸರ್ವೆ ಕಾರ್ಯ ಆರಂಭಿಸಿದ್ದಾರೆ. ಯಲಹಂಕ ತಹಶೀಲ್ದಾರ್ ಜಿ.ಎಸ್.ಶ್ರೇಯಸ್, ರಾಜೀವ್ ಗಾಂಧಿ ವಸತಿ ನಿಗಮದ ನಿರ್ದೇಶಕ ಪರಶುರಾಮ್, ಜಿಲ್ಲಾಧಿಕಾರಿ ಜಗದೀಶ್ ಸಹ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ.
‘185 ಮನೆಗಳಲ್ಲಿ 20 ಮನೆಯವರು ಬೇರೆಯವರು ಇದ್ದಾರೆ. ಅವರು ಕರ್ನಾಟಕದ ರಾಯಚೂರು, ಕಲಬುರಗಿ ಮೂಲದವರು. ಅವರೆಲ್ಲರೂ ಸ್ಥಳಿಯರಾ? ಮನೆ ಇದೆಯೇ? ಎಂಬುದನ್ನು ಪರಿಶೀಲಿಸಲಾಗುವುದು. ಆಶಾ ಕಾರ್ಯಕರ್ತೆಯರ ಬಳಿ ಇರುವ ದಾಖಲೆಗಳ ಮಾಹಿತಿ ಕಲೆ ಹಾಕಲಾಗುವುದು’ ಎಂದು ಜಿಬಿಎ ಅಧಿಕಾರಿಗಳು ತಿಳಿಸಿದ್ದಾರೆ.
‘ಎಷ್ಟು ವರ್ಷದಿಂದ ವಾಸ ಮಾಡುತ್ತಿದ್ದೀರಾ? ಉದ್ಯೋಗ ಏನು ಮಾಡುತ್ತಿದ್ದೀರಾ? ಮಕ್ಕಳು ಯಾವ ಶಾಲೆಗೆ ಹೋಗುತ್ತಿದ್ದಾರೆ? ಎಂಬ ಪ್ರಶ್ನೆಗಳನ್ನು ಅಧಿಕಾರಿಗಳು ಕೇಳಿದರು. ಅಲ್ಲದೇ ಆಧಾರ್ ಕಾರ್ಡ್, ಪಾನ್ ಕಾರ್ಡ್, ಮತದಾರರ ಗುರುತಿನ ಚೀಟಿ ಹಾಗೂ ವಾಸ ದೃಢೀಕರಣ ಪತ್ರಗಳನ್ನು ಪರಿಶೀಲಿಸಿದರು. ಆಧಾರ್ ಕಾರ್ಡ್, ಗುರುತಿನ ಚೀಟಿ, ವಿದ್ಯುತ್ ಬಿಲ್ ಕೇಳಿ ಪಡೆದುಕೊಂಡರು ಎಂದು ಸಂತ್ರಸ್ತರು ತಿಳಿಸಿದರು.
‘ಕೋಗಿಲು ಪ್ರಕರಣಕ್ಕೆ ಸಂಬಂಧಿಸಿದಂತೆ, ಕೋಗಿಲು ಬಡಾವಣೆಯಲ್ಲಿ ಕಂದಾಯ ಇಲಾಖೆ, ಜಿಬಿಎ ಮತ್ತು ರಾಜೀವ್ ಗಾಂಧಿ ವಸತಿ ನಿಗಮದ ವತಿಯಿಂದ ಜಂಟಿ ಸರ್ವೆ ಮಾಡಲಾಗಿದೆ. ಮೂರು ತಂಡಗಳು ಮಾಡಿರುವ ಸರ್ವೆ ವರದಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಗುವುದು. ಮಾಹಿತಿಯನ್ನು ಕ್ರೂಢಿಕರಿಸಿ ಸರಕಾರಕ್ಕೆ ಸಲ್ಲಿಸಲಾಗುತ್ತದೆ’
-ಶ್ರೇಯಸ್, ತಹಶೀಲ್ದಾರ್ ಯಲಹಂಕ