×
Ad

ಪತ್ರಿಕೋದ್ಯಮ, ಜನಪ್ರತಿನಿಧಿಗಳು ಸಮಾಜದ ಎರಡು ಕಣ್ಣುಗಳಿದ್ದಂತೆ : ಯು.ಟಿ.ಖಾದರ್

‘ಪ್ರೈಡ್ ಆಫ್ ಕರ್ನಾಟಕ’ ಪ್ರಶಸ್ತಿ ಪ್ರದಾನ ಸಮಾರಂಭ

Update: 2025-12-30 21:27 IST

ಬೆಂಗಳೂರು : ಪತ್ರಿಕೋದ್ಯಮ ಮತ್ತು ಜನಪ್ರತಿನಿಧಿಗಳು ಸಮಾಜ ಎರಡು ಕಣ್ಣುಗಳು. ಒಂದು ಕಣ್ಣು ಸಮಾಜದ ಎಲ್ಲ ಸಮಸ್ಯೆಗಳನ್ನು ನೋಡಿಕೊಂಡಿದ್ದರೆ, ಇನ್ನೊಂದು ಕಣ್ಣು ಅದಕ್ಕೆ ಪರಿಹಾರ ಕೊಡುವ ಕಾರ್ಯ ಚಟುವಟಿಕೆ ಮಾಡುತ್ತದೆ. ಯಾವಾಗ ಎರಡೂ ಕಣ್ಣು ಮುಚ್ಚುತ್ತವೆಯೋ ಆಗ ಸಮಾಜ ಕತ್ತಲೆಯಡೆಗೆ ಜಾರುತ್ತದೆ ಎಂದು ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ ಅವರು ಅಭಿಪ್ರಾಯಪಟ್ಟಿದ್ದಾರೆ.

ಮಂಗಳವಾರ ನಗರದ ಪ್ರೆಸ್‍ಕ್ಲಬ್‍ನಲ್ಲಿ ಆಯೋಜಿಸಿದ್ದ ‘ಪ್ರೈಡ್ ಆಫ್ ಕರ್ನಾಟಕ’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೇವಲ ಮಾಹಿತಿ ಕೊಡುವ ಕಾರಣಕ್ಕೆ ಮಾತ್ರ ಪತ್ರಿಕೋದ್ಯಮವನ್ನು ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಎಂದು ಕರೆಯುದಿಲ್ಲ. ಮಾಧ್ಯಮಗಳು ಮಾಹಿತಿ ಕೊಡುವ ಜೊತೆಗೆ ಸಾಮಾಜಿಕ ಜವಾಬ್ಧಾರಿಯ ಪ್ರತೀಕ ಎಂದು ತಿಳಿಸಿದರು.

ಮಾಧ್ಯಮಗಳು ಮಾನವೀಯ ಮೌಲ್ಯಗಳ ಪ್ರತಿಧ್ವನಿಯಾಗಿ ಕೆಲಸ ಮಾಡುವುದು ದೊಡ್ಡಮಟ್ಟದ ಶಕ್ತಿ. ಮಾನವೀಯ ಮೌಲ್ಯ ಜೀವಂತವಾಗಿ ಇರಬೇಕಾದರೆ ಪತ್ರಿಕೋದ್ಯಮದ ಪ್ರೋತ್ಸಾಹ ಮುಖ್ಯ. ಅದರಿಂದ ಆಧುನಿಕ ಕಾಲಘಟ್ಟದಲ್ಲಿ ಜನ ಸಾಮಾನ್ಯರು ಹಾಗೂ ವಿದ್ಯಾರ್ಥಿಗಳಲ್ಲಿ ಮಾನವೀಯ ಮೌಲ್ಯ ಬಲಿಷ್ಠವಾಗಿ ನಿಲ್ಲುತ್ತವೆ ಎಂದು ಹೇಳಿದರು.

ಸಮಾಜದ ಸಹೋದರತೆ, ಪ್ರೀತಿ, ವಿಶ್ವಾಸ, ಎಲ್ಲ ಜಾತಿ, ಮತಗಳ, ಮಣ್ಣಿನ ಸಂಸ್ಕೃತಿ, ಪರಂಪರೆ, ಆಚಾರ, ವಿಚಾರ ಎಲ್ಲವನ್ನೂ ಒಟ್ಟುಗೂಡಿಸಿ ಮುಂದುವರಿಸಿಕೊಂಡು ಹೋಗಲಿಕ್ಕೆ ಪತ್ರಿಕೋದ್ಯಮ ತನ್ನದೇ ಆದ ಜವಾಬ್ಧಾರಿಯನ್ನು ನಿರ್ವಹಿಸಿದೆ ಎಂದು ಅವರು ತಿಳಿಸಿದರು.

ಒಂದು ದೇಶದಲ್ಲಿ ಪ್ರಜಾಪ್ರಭುತ್ವ ಉಳಿಯಲು ಎಲ್ಲ ವಿಚಾರಗಳು ಇರಬೇಕು. ಅದನ್ನು ಉಳಿಸುವ ದೊಡ್ಡಮಟ್ಟದ ಜವಾಬ್ಧಾರಿ ಪತ್ರಿಕೋದ್ಯಮದ ಮೇಲೆ ಇದೆ. ರಾಜಕೀಯವನ್ನು ಬಿಟ್ಟು, ಪತ್ರಿಕೋದ್ಯಮ ಇಲ್ಲ. ಪತ್ರಿಕೋದ್ಯಮ ಬಿಟ್ಟು ರಾಜಕೀಯ ಸಾಧ್ಯ ಇಲ್ಲ. ಎರಡಕ್ಕೂ ಒಂದಕ್ಕೊಂದು ಅಂತರ್ ಸಂಬಂಧವಿದೆ ಎಂದು ಖಾದರ್ ಹೇಳಿದರು.

ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಪೌರಾಡಳಿತ ಸಚಿವ ರಹೀಂಖಾನ್, ಶಿಕ್ಷಣ ಸಚಿವ ಮಧು ಬಂಗಾರಪ್ಪ, ಬಿಡಿಎ ಅಧ್ಯಕ್ಷ ಹಾರಿಸ್, ಪ್ರೆಸ್‍ಕ್ಲಬ್ ಅಧ್ಯಕ್ಷ ಶ್ರೀಧರ್, ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಬೆಳ್ಳಿತಟ್ಟೆ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News