×
Ad

ಕಾನೂನು ಬಾಹಿರ ತೆರವು ಖಂಡಿಸಿ ಬೀದಿ ವ್ಯಾಪಾರಿಗಳ ಪ್ರತಿಭಟನೆ: ಸರಕಾರಕ್ಕೆ ಅನಿರ್ದಿಷ್ಟಾವಧಿ ಹೋರಾಟದ ಎಚ್ಚರಿಕೆ

Update: 2026-07-08 22:44 IST

ಬೆಂಗಳೂರು  : ಬೀದಿಬದಿ ವ್ಯಾಪಾರಿಗಳ ಕಾನೂನು ಬಾಹಿರ ತೆರವು ನೀತಿಯನ್ನು ಖಂಡಿಸಿ ಸರಕಾರದ ವಿರುದ್ಧ ಸಾವಿರಾರು ಬೀದಿ ವ್ಯಾಪಾರಿಗಳು ಬುಧವಾರ ‘ಬೆಂಗಳೂರು ಬೀದಿ ವ್ಯಾಪಾರಿಗಳ ಬಂದ್’ ಅನ್ನು ಯಶಸ್ವಿಯಾಗಿ ನಡೆಸಿ ನಗರದ ಫ್ರೀಡಂ ಪಾರ್ಕ್‍ನಲ್ಲಿ ಇಡೀ ದಿನ ಬೃಹತ್ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವರು ಹಾಗೂ ಜಿಬಿಎ ಮುಖ್ಯ ಆಯುಕ್ತರು ಬೀದಿ ವ್ಯಾಪಾರಿಗಳ ಪ್ರತಿನಿಧಿಗಳೊಂದಿಗೆ ಶೀಘ್ರದಲ್ಲೇ ಸಭೆ ಆಯೋಜಿಸಿ ನ್ಯಾಯ ಒದಗಿಸಬೇಕು. ಇಲ್ಲವಾದಲ್ಲಿ ಈ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಿ, ರಾಜ್ಯವ್ಯಾಪಿ ಅನಿರ್ದಿಷ್ಟಾವಧಿ ಪ್ರತಿಭಟನೆಗೆ ಮುಂದಾಗಲಿದ್ದೇವೆ ಎಂದು ಪ್ರತಿಭಟನಾನಿರತರು ಸರಕಾರಕ್ಕೆ ಎಚ್ಚರಿಕೆ ನೀಡಿದರು.

ಬೀದಿ ವ್ಯಾಪಾರಿಗಳ ಕಾನೂನು ಬಾಹಿರ ತೆರವು ಕೂಡಲೇ ನಿಲ್ಲಬೇಕು. ಜು.1ರಿಂದ ಒಕ್ಕಲೆಬ್ಬಿಸಿದ ಬೀದಿ ವ್ಯಾಪಾರಿಗಳನ್ನು ಮತ್ತೆ ಅದೇ ಸ್ಥಳದಲ್ಲಿ ವ್ಯಾಪಾರ ಮಾಡಲು ಅನುವು ಕೊಡಬೇಕು. ಒಂದು ವೇಳೆ ಅಲ್ಲಿ ಪಾದಚಾರಿ ಮಾರ್ಗಕ್ಕೆ ಅಡ್ಡ ಇದ್ದರೆ, ಅದೇ ರಸ್ತೆಯ ಬದಿಯಲ್ಲಿ ತಾತ್ಕಾಲಿಕವಾಗಿ ಬೀದಿ ವ್ಯಾಪಾರಿಗಳಿಗೆ ಸ್ಥಳ ನೀಡಬೇಕು. ಅಂತಿಮ ತೀರ್ಮಾನ ಪಟ್ಟಣ ವ್ಯಾಪಾರ ಸಮಿತಿ ತೆಗೆದುಕೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಜಪ್ತಿ ಮಾಡಿದ ಎಲ್ಲ ಸಾಮಗ್ರಿಗಳನ್ನು ಹಿಂತಿರುಗಿಸಬೇಕು. ಯಾವ ವ್ಯಾಪಾರಿಗಳ ಸರಕು ನಾಶ ಹಾಗೂ ಗಾಡಿಗಳಿಗೆ ಹಾನಿಯಾಗಿದೆಯೋ ಅಂಥಹವರ ಪಟ್ಟಿ ಮಾಡಿ ಅವರಿಗೆ ಪರಿಹಾರ ನೀಡಬೇಕು. ಬೀದಿ ವ್ಯಾಪಾರಿಗಳ ಕಾಯ್ದೆಯನ್ನು ಸಂಪೂರ್ಣವಾಗಿ ಜಾರಿಗೆ ತರಬೇಕು. 2024ರ ಸಮೀಕ್ಷೆಯಲ್ಲಿ ಬಿಟ್ಟುಹೋದವರನ್ನು ಒಳಗೊಂಡು ಸಮಗ್ರ ಸಮೀಕ್ಷೆ ನಡೆಸಿ ಎಲ್ಲರಿಗೂ ಗುರುತಿನ ಚೀಟಿಗಳನ್ನು ಹಾಗೂ ವ್ಯಾಪಾರದ ಪ್ರಮಾಣ ಪತ್ರ ನೀಡಬೇಕು ಎಂದು ಪ್ರತಿಭಟನಾನಿರತರು ಆಗ್ರಹಿಸಿದರು.

ಸಮೀಕ್ಷೆಯಲ್ಲಿ ಒಳ್ಳಗೊಳ್ಳಲು ಪಡಿತರ ಚೀಟಿ ಕಡ್ಡಾಯವಾಗಿ ಇರಬೇಕು ಎಂದು ಕಡ್ಡಾಯ ಮಾಡದೆ, ಕರ್ನಾಟಕದ ಯಾವುದೇ ಒಂದು ದಾಖಲೆ (ಆಧಾರ್, ವೋಟಿಂಗ್ ಕಾರ್ಡ್, ಪಡಿತರ ಚೀಟಿ, ಚಾಲನಾ ಪರವಾನಗಿ ಇತ್ಯಾದಿ) ಆಧಾರದ ಮೇಲೆ ಸಮೀಕ್ಷೆಯಲ್ಲಿ ಅನುಮತಿಸಬೇಕು. ಹೊಸ ನಾಗರ ಪಾಲಿಕೆಗಳಲ್ಲಿ ಟೌನ್ ವೆಂಡಿಂಗ್ ಸಮಿತಿಗಳನ್ನು ರಚಿಸಿ, ಬಲಪಡಿಸಿ ವ್ಯಾಪಾರಿಗಳ ನೈಜ ಪ್ರತಿನಿಧಿತ್ವವನ್ನು ಖಚಿತಪಡಿಸಬೇಕು ಎಂದು ಆಗ್ರಹಿಸಿದರು.

ನಗರಪಾಲಿಕೆ ಅಧಿಕಾರಿಗಳಿಗೆ ಬೀದಿ ವ್ಯಾಪಾರಿಗಳ ಕಾಯ್ದೆ ಬಗ್ಗೆ ಅರಿವಿನ ಕಾರ್ಯಾಗಾರ ನಡೆಸಬೇಕು. ಬೀದಿ ವ್ಯಾಪಾರಿಗಳನ್ನು ಹೊರಹಾಕುವ ಬದಲು ನಗರಾದ್ಯಂತ ಪಾದಚಾರಿ ಮಾರ್ಗಗಳನ್ನು ಅಗಲ ಮಾಡಿ ಪಾದಚಾರಿಗಳಿಗೂ ಜಾಗ ನೀಡಿ, ವ್ಯಾಪಾರಿಗಳಿಗೂ ಜಾಗ ನೀಡಬೇಕು. ನಿಜವಾದ ಒತ್ತುವರಿದಾರರ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದು ತಿಳಿಸಿದರು.

ಈ ಪ್ರತಿಭಟನೆಯನ್ನು ಕರ್ನಾಟಕ ಪ್ರಗತಿಪರ ಬೀದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಎಸ್.ಬಾಬು, ಎಐಸಿಸಿಟಿಯು ರಾಷ್ಟ್ರೀಯ ಉಪಾಧ್ಯಕ್ಷ ಕ್ಲಿಫ್ಟನ್ ಡಿ' ರೋಜಾರಿಯೋ, ಸಿಐಟಿಯು ಪ್ರಧಾನ ಕಾರ್ಯದರ್ಶಿ ವರಲಕ್ಷ್ಮೀ, ಬೆಂಗಳೂರು ಬೀದಿ ವ್ಯಾಪಾರಿಗಳ ಸಂಘದ ಬಸಮ್ಮ, ಕರ್ನಾಟಕ ರಾಜ್ಯ ರಸ್ತೆಬದಿ ವ್ಯಾಪಾರಿಗಳ ಮಹಾಮಂಡಳದ ರಾಜಣ್ಣ, ಕರುನಾಡು ಬೀದಿ ಬದಿ ವ್ಯಾಪಾರಿಗಳ ಸಂಘಟನೆಗಳ ಒಕ್ಕೂಟದ ಸುರೇಶ್, ನವ ಕರ್ನಾಟಕ ರಾಜ್ಯ ಬೀದಿ ಬದಿ ವ್ಯಾಪಾರಿಗಳ ಸಂಘದ ಕೇಶವಮೂರ್ತಿ ಹಾಗೂ ಕರ್ನಾಟಕ ಮಹಿಳಾ ಬೀದಿ ಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟದ ಮುನಿಲಕ್ಷ್ಮೀ ಉದ್ದೇಶಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ನಗರದ ಪ್ರಮುಖ ಮಾರುಕಟ್ಟೆಗಳಾದ ಕೆ.ಆರ್.ಮಾರ್ಕೆಟ್, ಗಾಂಧಿ ಬಜಾರ್, ಮಲ್ಲೇಶ್ವರಂ, ಜಯನಗರ, ವಿಜಯನಗರ, ನಂದಿನಿ ಲೇಔಟ್, ಎಚ್‍ಎಸ್‍ಆರ್ ಲೇಔಟ್, ಕೆಂಗೇರಿ, ಎನ್.ಆರ್.ಕಾಲೋನಿ, ಬನಶಂಕರಿ ಬಿಡಿಎ ಕಾಂಪ್ಲೆಕ್ಸ್, ಕೋರಮಂಗಲ, ಬನಶಂಕರಿ, ಜಯನಗರ, ಶಿವಾಜಿನಗರ, ಗಾಂಧಿನಗರ ಸೇರಿದಂತೆ ಹಲವಾರು ವ್ಯಾಪಾರ ಕೇಂದ್ರಗಳು ಸಂಪೂರ್ಣವಾಗಿ ಬಂದ್ ಆಗಿದ್ದವು.

ಈ ಪ್ರತಿಭಟನೆ ನಡೆಯುತ್ತಲೇ ಬೀದಿ ವ್ಯಾಪಾರಿಗಳ ಜಂಟಿ ಹೋರಾಟ ಸಮಿತಿಯ ನಿಯೋಗವು ಗ್ರೇಟರ್ ಬೆಂಗಳೂರು ಪ್ರಾಧಿಕಾರದ(ಜಿಬಿಎ) ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರನ್ನು ಭೇಟಿ ಮಾಡಿ ಹಕ್ಕೊತ್ತಾಯ ಪತ್ರವನ್ನು ನೀಡಿತು. ಈ ಸಂದರ್ಭದಲ್ಲಿ ಅವರು, ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡರೊಂದಿಗೆ ಚರ್ಚಿಸಿ, ಶೀಘ್ರದಲ್ಲೇ ಬೀದಿ ವ್ಯಾಪಾರಿಗಳ ಪ್ರತಿನಿಧಿಗಳೊಂದಿಗೆ ಅಧಿಕೃತ ಸಭೆಯನ್ನು ಆಯೋಜಿಸುವುದಾಗಿ ಭರವಸೆ ನೀಡಿದರು.

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News