ಶಾಸಕರ ಭವನ: ಸರಕಾರಿ ವಾಹನ ದುರ್ಬಳಕೆಗೆ ಕಡಿವಾಣ
ಬೆಂಗಳೂರು : ವಿಧಾನಸೌಧ ವ್ಯಾಪ್ತಿಯಲ್ಲಿನ ಶಾಸಕರ ಭವನ (ಎಲ್‍ಎಚ್)ದಲ್ಲಿನ ಸರಕಾರಿ ವಾಹನಗಳ ದುರ್ಬಳಕೆಗೆ ಕಡಿವಾಣ ಹಾಕಲು ವಿಧಾನಸಭೆ ಕಾರ್ಯಾಲಯ ಕಠಿಣ ಮಾರ್ಗಸೂಚಿಗಳನ್ನು ಜಾರಿಗೊಳಿಸಿದೆ.
ಮಾರ್ಗಸೂಚಿಯಂತೆ ಇನ್ನು ಮುಂದೆ ಶಾಸಕರು ತಮ್ಮ ವೈಯಕ್ತಿಕ ಸಹಾಯಕರು (ಪಿಎ), ಅತಿಥಿಗಳು ಅಥವಾ ಪರಿಚಯಸ್ಥರ ಬಳಕೆಗಾಗಿ ಶಾಸಕರ ಭವನದ ವಾಹನಗಳನ್ನು ಶಿಫಾರಸು ಮಾಡಲು ಅವಕಾಶ ಇರುವುದಿಲ್ಲ. ಶಾಸಕರ ಭವನದ ವಾಹನಗಳನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯೊಳಗೆ ಮಾತ್ರ ಬಳಸಬೇಕು. ತುರ್ತು ಪರಿಸ್ಥಿತಿ ಹೊರತುಪಡಿಸಿ ಬೆಂಗಳೂರಿನ ಹೊರಗೆ ವಾಹನಗಳನ್ನು ಕೊಂಡೊಯ್ಯಲು ಅವಕಾಶ ಇರುವುದಿಲ್ಲ. ಅನಿವಾರ್ಯ ಸಂದರ್ಭಗಳಲ್ಲಿ ವಾಹನವನ್ನು ಹೊರ ಜಿಲ್ಲೆಗಳಿಗೆ ತೆಗೆದುಕೊಂಡು ಹೋಗಬೇಕಾದರೆ ವಿಧಾನಸಭಾಧ್ಯಕ್ಷರ ಪೂರ್ವಾನುಮತಿ ಕಡ್ಡಾಯವಾಗಿದೆ.
ಶಾಸಕರ ಹೆಸರಿನಲ್ಲಿ ಅವರ ವೈಯಕ್ತಿಕ ಸಹಾಯಕರು, ಪಕ್ಷದ ಕಾರ್ಯಕರ್ತರು ಹಾಗೂ ಪರಿಚಯಸ್ಥರು ಶಿಫಾರಸು ಪತ್ರಗಳ ಮೂಲಕ ವಾಹನಗಳನ್ನು ಪಡೆದು ಹೊರ ಜಿಲ್ಲೆಗಳಿಗೆ ಬಳಸುತ್ತಿರುವ ಆರೋಪಗಳು ಕೇಳಿಬಂದಿದ್ದವು. ಇದರಿಂದ ಶಾಸಕರಿಗೆ ಅಗತ್ಯವಿದ್ದ ಸಂದರ್ಭದಲ್ಲಿ ವಾಹನಗಳ ಕೊರತೆ ಉಂಟಾಗುತ್ತಿತ್ತು ಎಂದು ಕಾರ್ಯಾಲಯ ತಿಳಿಸಿದೆ.