ಸಾರ್ವಜನಿಕರಿಗೆ ಉತ್ತರ ನೀಡಬೇಕಾದ ಸಂದರ್ಭದಲ್ಲಿ ವಿದೇಶಕ್ಕೆ ಪಲಾಯನ : ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ಆಕ್ರೋಶ
ಪ್ರಧಾನಿ ಮೋದಿ(PTI )/ಪ್ರಿಯಾಂಕ್ ಖರ್ಗೆ
ಬೆಂಗಳೂರು : ರಾಮ ಮಂದಿರ ದೇಣಿಗೆ ಲೂಟಿ ವಿಚಾರವಾಗಿ ಪ್ರಧಾನಿ ಮೋದಿ ಉತ್ತರವನ್ನು ನೀಡದೆ, ವಿದೇಶ ಪ್ರವಾಸಕ್ಕೆ ತೆರಳಿದ್ದಾರೆ. ಸಾರ್ವಜನಿಕರ ಮುಂದೆ ಉತ್ತರಿಸಬೇಕಾದ ಪ್ರಶ್ನೆಗಳು ಎದುರಾದಾಗಲೆಲ್ಲ ಅವರು ವಿದೇಶಕ್ಕೆ ಪಲಾಯನ ಮಾಡುತ್ತಾರೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಟೀಕಿಸಿದ್ದಾರೆ.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರಿಗೆ ‘ದೇಶ ಮೊದಲು ಅಲ್ಲ’, ದೇಣಿಗೆ ಮೊದಲು’. ಈ ಹಣ ಎಲ್ಲಿಗೆ ಹೋಗಿದೆ? ಟ್ರಸ್ಟ್ ನವರು ಏಕೆ ರಾಜೀನಾಮೆ ನೀಡಿದ್ದಾರೆ? ಅವರು ರಾಜೀನಾಮೆ ನೀಡಿದ್ದಾರೆ ಎಂದ ಮೇಲೆ ಈ ಪ್ರಶ್ನೆಗಳಿಗೆ ಉತ್ತರ ನೀಡಲೇಬೇಕಲ್ಲವೇ? ದೇಣಿಗೆ ದುರ್ಬಳಕೆಗೆ ಕಾಂಗ್ರೆಸ್ ಪಕ್ಷ ಏಕೆ ಉತ್ತರ ನೀಡಬೇಕು. ಇದಕ್ಕೆ ಹೊಣೆ ಯಾರು ಎಂದು ಅವರು ಪ್ರಶ್ನಿಸಿದರು.
ರಾಮಮಂದಿರ ವಿಚಾರದಲ್ಲಿ ಸುಪ್ರೀಂ ಕೋರ್ಟ್ ತೀರ್ಪಿನ ಶ್ರೇಯಸ್ಸು ಬಿಜೆಪಿಯವರೇ ಪಡೆದಿದ್ದಾರೆ. ಶಿಲಾನ್ಯಾಸದ ಶ್ರೇಯಸ್ಸು ಅವರೇ ಪಡೆದಿದ್ದಾರೆ. ಧ್ವಜಾರೋಹಣದ ಶ್ರೇಯಸ್ಸು ಪಡೆದಿದ್ದಾರೆ. ಪ್ರಾಣ ಪ್ರತಿಷ್ಠೆಯ ಶ್ರೇಯಸ್ಸು ಅವರಿಗೇ ಹೋಗಿದೆ. ಉದ್ಘಾಟನೆಯ ಶ್ರೇಯಸ್ಸನ್ನೂ ಬಿಜೆಪಿಯವರೇ ಪಡೆದಿದ್ದಾರೆ. ಹೀಗಿರುವಾಗ ಆರೋಪಿತ ದೇಣಿಗೆ ದುರ್ಬಳಕೆಯ ಹೊಣೆಯನ್ನೂ ಅವರೇ ಹೊರಬೇಕಲ್ಲವೇ ಎಂದು ಅವರು ಹೇಳಿದರು.