×
Ad

ಎಲ್ಲೆಂದರಲ್ಲಿ ನಿಲ್ಲಿಸಲಾದ ಬೀಡಾಡಿ ವಾಹನಗಳ ತೆರವು ಕಾರ್ಯಾಚರಣೆಗೆ ಸಚಿವ ಕೃಷ್ಣಬೈರೇಗೌಡ ಚಾಲನೆ

Update: 2026-07-10 22:30 IST

ಬೆಂಗಳೂರು, ಜು.10: ನಗರದ ರಸ್ತೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತ ನಿಲುಗಡೆ ಮಾಡಿರುವ ವಾಹನಗಳನ್ನು ತೆರವು ಮಾಡುವ ವಿಶೇಷ ಕಾರ್ಯಾಚರಣೆಗೆ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ಶುಕ್ರವಾರ ಚಾಲನೆ ನೀಡಿದ್ದಾರೆ.

ನಗರದ ಕ್ವೀನ್ಸ್ ರಸ್ತೆಯಲ್ಲಿ ಅನಧಿಕೃತವಾಗಿ ನಿಲ್ಲಿಸಲಾಗಿದ್ದ ವಾಹನಗಳಿಗೆ ನೋಟಿಸ್ ಅಂಟಿಸುವ ಮೂಲಕ ಕಾರ್ಯಾಚರಣೆಗೆ ಚಾಲನೆ ನೀಡಿ ಮಾತನಾಡಿದ ಸಚಿವರು, ಬೆಂಗಳೂರಿನಲ್ಲಿ ಸಾರ್ವಜನಿಕ ಸ್ಥಳಗಳ ಅತಿಕ್ರಮಣಕ್ಕೆ ಕಡಿವಾಣ ಹಾಕಿ, ಪಾದಚಾರಿಗಳಿಗೆ ಉಂಟಾಗುತ್ತಿರುವ ಅಡಚಣೆ ಕಡಿಮೆ ಮಾಡುವ ಉದ್ದೇಶದಿಂದ ಈ ಕಾರ್ಯಾಚರಣೆ ಆರಂಭಿಸಲಾಗಿದೆ ಎಂದರು.

ಸಾರ್ವಜನಿಕರಿಗೆ ಸೇರಿರುವ ಸ್ಥಳಗಳನ್ನು ಸ್ವಂತಕ್ಕೆ ಅತಿಕ್ರಮಿಸಿಕೊಂಡು ಎಲ್ಲೆಂದರಲ್ಲಿ ನಿಲ್ಲಿಸಲಾದ ಬೀಡಾಡಿ ವಾಹನಗಳನ್ನು ತೆರವು ಮಾಡುವಂತೆ 15 ದಿನಗಳ ಹಿಂದೆಯೇ ಸೂಚಿಸಲಾಗಿತ್ತು. ಆದರೂ ಕೇರ್ ಮಾಡದೇ ನಿಲ್ಲಿಸಿರುವ ವಾಹನಗಳ ತೆರವು ಕಾರ್ಯಾಚರಣೆ ಆರಂಭಿಸಲಾಗಿದೆ. ನಗರದಲ್ಲಿ ಅನಧಿಕೃತವಾಗಿ ನಿಲ್ಲಿಸಿರುವ ಸುಮಾರು 1,581 ವಾಹನಗಳನ್ನು ಪೊಲೀಸ್ ಇಲಾಖೆಯು ಗುರುತಿಸಿದ್ದು, ಅಂತಹ ವಾಹನಗಳನ್ನು ತೆರವುಗೊಳಿಸಲು ಒಂದು ವಾರದ ಗಡುವು ನೀಡಿ ನೋಟಿಸ್ ಅಂಟಿಸಲಾಗುತ್ತಿದೆ ಎಂದು ಕೃಷ್ಣಬೈರೇಗೌಡ ಹೇಳಿದರು.

ಪಾಲಿಕೆ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು ಜಂಟಿಯಾಗಿ ತೆರಳಿ ನೋಟಿಸ್ ಅಂಟಿಸುವ ಕೆಲಸ ಮಾಡಲಿದ್ದಾರೆ. ಮಾಲಕರು ಒಂದು ವಾರದ ಅವಧಿಯೊಳಗೆ ಬಂದು ದಂಡದ ಮೊತ್ತ ಪಾವತಿಸಿ ತಮ್ಮ ವಾಹನಗಳನ್ನು ಕೊಂಡೊಯ್ಯಬಹುದು. ಇಲ್ಲವಾದರೆ ಆ ವಾಹನಗಳನ್ನು ಟೋಯಿಂಗ್ ಮಾಡಲಾಗುತ್ತದೆ. ನಂತರವೂ ಸಹ ಮಾಲಕರು ಬಂದು ದಂಡ ಹಾಗೂ ಟೋಯಿಂಗ್ ಶುಲ್ಕ ಪಾವತಿಸಿ ವಾಹನವನ್ನು ಕೊಂಡೊಯ್ಯಬಹುದು. ಆಗಲೂ ಕೊಂಡೊಯ್ಯದ ವಾಹನಗಳ ವಿವರವನ್ನು ಪತ್ರಿಕೆಯಲ್ಲಿ ಜಾಹೀರಾತು ನೀಡಲಿದ್ದು, 15 ದಿನಗಳ ಬಳಿಕ ಹರಾಜು ಮಾಡಲಿದ್ದೇವೆ ಎಂದು ಕೃಷ್ಣಬೈರೇಗೌಡ ತಿಳಿಸಿದರು.

ಪಾದಚಾರಿ ಮಾರ್ಗಗಳನ್ನು ಮುಕ್ತಗೊಳಿಸುವುದು, ಸಾರ್ವಜನಿಕ ಸುರಕ್ಷತೆ ಹೆಚ್ಚಿಸುವುದು ನಮ್ಮ ಆದ್ಯತೆಯಾಗಿದೆ. ಮಾಲಕರು ಒಂದು ಸ್ಥಳದಲ್ಲಿ ದಂಡ ಪಾವತಿಸಿದ ವಾಹನವನ್ನು ಕೊಂಡೊಯ್ದು ಮತ್ತೊಂದು ಕಡೆ ಸಾರ್ವಜನಿಕ ಸ್ಥಳದಲ್ಲಿ ನಿಲ್ಲಿಸಿದರೆ ಅಂಥವರಿಗೆ ಹೆಚ್ಚು ದಂಡ ವಿಧಿಸುವಂತೆ ಪೊಲೀಸ್ ಇಲಾಖೆಗೆ ಸೂಚಿಸಿದ್ದೇನೆ ಎಂದು ಕೃಷ್ಣಬೈರೇಗೌಡ ಎಚ್ಚರಿಸಿದರು.

ಪೊಲೀಸ್ ಇಲಾಖೆ ಗುರುತಿಸಿರುವ ವಾಹನಗಳಷ್ಟೇ ಅಲ್ಲದೆ ಅಂಥವುಗಳ ಸಂಖ್ಯೆ ಇನ್ನೂ ಹೆಚ್ಚೂ ಸಹ ಇರಬಹುದು. ಆದ್ದರಿಂದ ನಗರದಲ್ಲಿ ಎಲ್ಲೆಂದರಲ್ಲಿ ನಿಲ್ಲಿಸಿರುವ ವಾಹನಗಳು ಕಂಡುಬಂದರೆ ‘ಬಿಟಿಪಿ ಅಸ್ತ್ರಂ’ ಆ್ಯಪ್‍ನ ಮೂಲಕ ಸಾರ್ವಜನಿಕರು ರಿಪೋರ್ಟ್ ಮಾಡಬಹುದು. ಅಂತಹ ವಾಹನಗಳ ಮೇಲೆಯೂ ನೋಟಿಸ್ ಅಂಟಿಸಿ ಗಡುವು ನೀಡಲಾಗುತ್ತದೆ ಎಂದು ಕೃಷ್ಣಬೈರೇಗೌಡ ತಿಳಿಸಿದರು.

ಈ ಸಂದರ್ಭದಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧಿಕಾರಿಗಳು ಹಾಗೂ ಸಂಚಾರ ವಿಭಾಗದ ಪೆÇಲೀಸರು ಉಪಸ್ಥಿತರಿದ್ದರು.


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News