ಎರಡು ತಿಂಗಳಲ್ಲಿ 2ನೇ ಬಾರಿ ಕೆಎಎಸ್ ಅಧಿಕಾರಿ ಆಶಾ ಪರ್ವೀನ್ ವರ್ಗಾವಣೆ; ಸರಕಾರದ ನಡೆಗೆ ಸಾರ್ವಜನಿಕ ವಲಯದಲ್ಲಿ ಅಸಮಾಧಾನ
ಬೆಂಗಳೂರು : ರಾಜ್ಯ ಸರಕಾರವು ಕೆಎಎಸ್ ಅಧಿಕಾರಿ ಆಶಾ ಪರ್ವೀನ್ ಅವರನ್ನು ಅಲ್ಪಾವಧಿಯಲ್ಲಿಯೆ ಮತ್ತೆ ವರ್ಗಾವಣೆ ಮಾಡಿದ ನಂತರ ರಾಜಕೀಯ ಮತ್ತು ಸಾರ್ವಜನಿಕ ವಲಯಗಳಲ್ಲಿ ವಿವಿಧ ಪ್ರಶ್ನೆಗಳು ಏಳುತ್ತಿವೆ. ಕೇವಲ ಎರಡು ತಿಂಗಳ ಹಿಂದೆ, ಅವರಿಗೆ ಕಿದ್ವಾಯಿ ಸ್ಮಾರಕ ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿಯ ಜವಾಬ್ದಾರಿಯನ್ನು ನೀಡಲಾಯಿತು, ಆದರೆ ಈಗ ಅವರನ್ನು ಮತ್ತೆ ವರ್ಗಾಯಿಸಲಾಗಿದೆ.
ಕಿದ್ವಾಯಿ ಆಸ್ಪತ್ರೆಯಲ್ಲಿ ನಡೆದ ಅಕ್ರಮಗಳು ಮತ್ತು ಆಡಳಿತಾತ್ಮಕ ಲೋಪಗಳನ್ನು ಎತ್ತಿ ತೋರಿಸಿ ಆಶಾ ಪರ್ವೀನ್ ಸರಕಾರಕ್ಕೆ ವಿವರವಾದ ವರದಿಯನ್ನು ಸಲ್ಲಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಇದರಿಂದಾಗಿ, ಆಶಾ ಪರ್ವೀನ್ ಅವರನ್ನು ವರ್ಗಾವಣೆ ಮಾಡಲಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಜನರು ಚರ್ಚೆ ನಡೆಸುತ್ತಿದ್ದಾರೆ. ಆದರೆ, ಈ ಬಗ್ಗೆ ಸರಕಾರ ಅಧಿಕೃತವಾಗಿ ಯಾವುದೇ ಹೇಳಿಕೆಯನ್ನು ನೀಡಿಲ್ಲ. ಅಲ್ಲದೇ, ಆರೋಪವನ್ನು ನಿರಾಕರಿಸಿಯೂ ಇಲ್ಲ. ಅದೇ ರೀತಿ, ವಿಕ್ಟೋರಿಯಾ ಆಸ್ಪತ್ರೆಯ ಮೂತ್ರಪಿಂಡ ವಿಭಾಗದಲ್ಲಿ ನಡೆದ ಭ್ರಷ್ಟಾಚಾರದ ಬಗ್ಗೆಯೂ ದಾಖಲೆಗಳೊಂದಿಗೆ ಸರಕಾರಕ್ಕೆ ವರದಿ ಸಲ್ಲಿಸಿದ್ದ ಕಾರಣಕ್ಕೂ ವರ್ಗಾವಣೆಗೆ ಒಳಗಾಗಿದ್ದರು ಎಂಬ ಆರೋಪಗಳಿವೆ. ಇತ್ತೀಚಿನ ವರ್ಗಾವಣೆಯಡಿಯಲ್ಲಿ, ಆಶಾ ಪರ್ವೀನ್ ಅವರನ್ನು ಬೆಂಗಳೂರು ಜಲಮಂಡಳಿಯ ಆಡಳಿತ ಅಧಿಕಾರಿಯಾಗಿ ನೇಮಿಸಲಾಗಿದೆ.
ಇಲ್ಲಿ ಅತ್ಯಂತ ದೊಡ್ಡ ಪ್ರಶ್ನೆ ಏನೆಂದರೆ, 10 ರೂಪಾಯಿ ಭ್ರಷ್ಟಾಚಾರವನ್ನೂ ಸಹಿಸುವುದಿಲ್ಲ ಎಂದು ಘೋಷಿಸಿದ್ದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸರಕಾರದಲ್ಲಿ, ಕೋಟ್ಯಂತರ ರೂಪಾಯಿಗಳ ಅಕ್ರಮಗಳ ಬಗ್ಗೆ ವರದಿ ನೀಡಿದ ಅಧಿಕಾರಿಗೆ ಸಿಕ್ಕಿರುವುದು ಗೌರವವೇ ಅಥವಾ ಶಿಕ್ಷೆಯೆ? ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.
ಆ ವರದಿಯ ಮೇಲೆ ಕ್ರಮ ಕೈಗೊಳ್ಳುವುದರ ಬದಲು, ವರದಿ ಸಲ್ಲಿಸಿದ ಅಧಿಕಾರಿಯನ್ನೇ ಸ್ಥಳಾಂತರಿಸುವುದು ಯಾವ ಸಂದೇಶವನ್ನು ಸಮಾಜಕ್ಕೆ ನೀಡುತ್ತಿದೆ. ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ಅವರ ಇಲಾಖೆ ಈ ವರದಿಯನ್ನು ಗಂಭೀರವಾಗಿ ಪರಿಗಣಿಸದೆ, ಆಶಾ ಪರ್ವೀನ್ ಅವರಂತಹ ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿಯನ್ನು ಎತ್ತಂಗಡಿ ಮಾಡಿರುವುದು, ಸರಕಾರ ಭ್ರಷ್ಟಾಚಾರದ ವಿರುದ್ಧವಲ್ಲ, ಭ್ರಷ್ಟಾಚಾರವನ್ನು ಬಯಲಿಗೆಳೆಯುವವರ ವಿರುದ್ಧ ನಿಂತಿದೆಯೇ ಎಂಬ ಅನುಮಾನ ಮತ್ತಷ್ಟು ಬಲಪಡಿಸುತ್ತಿದೆ ಎಂದು ಸಾರ್ವಜನಿಕರು ಅಸಮಾಧಾನ ಹೊರಹಾಕಿದ್ದಾರೆ.