ವಿಂಡ್ ಟನಲ್ ಕೆಳಸೇತುವೆ ಕಾಮಗಾರಿಗೆ ವೇಗ ನೀಡಿ: ಸಚಿವ ಕೃಷ್ಣ ಬೈರೇಗೌಡ
ಬೆಂಗಳೂರು, ಜು.10: ವಿಂಡ್ ಟನಲ್ ಕೆಳಸೇತುವೆ ಕಾಮಗಾರಿಗೆ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಿಕೊಂಡು ವೇಗ ನೀಡಲು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಗುತ್ತಿಗೆದಾರರಿಗೆ ಸೂಚನೆ ನೀಡಿದ್ದಾರೆ.
ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯ ಹಳೆ ವಿಮಾನ ನಿಲ್ದಾಣ ರಸ್ತೆಯ ಯು.ಆರ್. ರಾವ್ ಉಪಗ್ರಹ ಕೇಂದ್ರದ ಬಳಿಯಿರುವ ವಿಂಡ್ ಟನಲ್ ಜಂಕ್ಷನ್ ಗೆ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ವೇಳೆ ಮಾತನಾಡಿದ ಅವರು, ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ಹೆಚ್ಚುವರಿ ಸಿಬ್ಬಂದಿಯನ್ನು ಬಳಸಿಕೊಳ್ಳುವಂತೆ ಗುತ್ತಿಗೆದಾರರಿಗೆ ಸೂಚಿಸಿದರು.
ಕೆಳಸೇತುವೆ ಕಾಮಗಾರಿಗೆ ಸಂಬಂಧಿಸಿದಂತೆ ಜಲಮಂಡಳಿಯ ಪೈಪ್ ಲೈನ್, ಒಳಚರಂಡಿ, ಬೆಸ್ಕಾಂ ಕೇಬಲ್ ಗಳು, ಓಎಫ್ ಸಿ ಕೇಬಲ್ ಗಳು ಸೇರಿದಂತೆ ಇತರೆ ಯುಟಿಲಿಟಿಗಳ ಸ್ಥಳಾಂತರ ಕಾರ್ಯ ಪೂರ್ಣಗೊಳಿಸಲಾಗಿದೆ. ಇದೀಗ ತಡೆಗೋಡೆ(ರಿಟೈನಿಂಗ್ ವಾಲ್) ಕಾಮಗಾರಿ ಪ್ರಗತಿಯಲ್ಲಿದ್ದು, ಅದಕ್ಕೆ ಮತ್ತಷ್ಟು ವೇಗ ನೀಡಿ ಮೂರು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಮಾತನಾಡಿ, ವಾಹನ ಸಂಚಾರಕ್ಕೆ ಯಾವುದೇ ಅಡಚಣೆ ಆಗದಂತೆ ಕಾಮಗಾರಿ ನಡೆಸಲಾಗುತ್ತಿದೆ. ಜಂಕ್ಷನ್ ನ ಎರಡೂ ಬದಿಗಳಲ್ಲಿರುವ ರಕ್ಷಣಾ, ಇಸ್ರೋ, ಎನ್.ಎ.ಎಲ್. ಇಲಾಖೆ ಹಾಗೂ ಖಾಸಗಿ ಜಾಗಗಳಲ್ಲಿ ತಾತ್ಕಾಲಿಕ ರಸ್ತೆಗಳನ್ನು ತ್ವರಿತವಾಗಿ ನಿರ್ಮಿಸಿ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಶೇ.75ರಷ್ಟು ಕಾಮಗಾರಿ ಪೂರ್ಣ:
ವಿಂಡ್ ಟನಲ್ ಜಂಕ್ಷನ್ ನಲ್ಲಿ 19 ಕೋಟಿ ರೂ. ವೆಚ್ಚದಲ್ಲಿ 300 ಮೀಟರ್ ಉದ್ದದ ಕೆಳಸೇತುವೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು, ಎರಡೂ ಬದಿಗಳಲ್ಲಿ 7.5 ಮೀಟರ್ ಅಗಲದ 4 ಪಥಗಳ ಕೆಳಸೇತುವೆ ನಿರ್ಮಿಸಲಾಗುತ್ತಿದೆ. ಪ್ರಸಕ್ತ ಒಂದು ಭಾಗದಲ್ಲಿ ಉಪಯುಕ್ತತೆಗಳ ಸ್ಥಳಾಂತರ, ಆರ್.ಸಿ.ಸಿ. ಗೋಡೆ ನಿರ್ಮಾಣ, ಸರ್ವೀಸ್ ರಸ್ತೆ ನಿರ್ಮಾಣ ಹಾಗೂ ಮಧ್ಯಭಾಗದಲ್ಲಿ ಅಳವಡಿಸಲಾಗುವ ಬಾಕ್ಸ್ ಗಳ ತಯಾರಿಕೆ ಸೇರಿದಂತೆ ಶೇ.75ರಷ್ಟು ಕಾಮಗಾರಿ ಪೂರ್ಣಗೊಂಡಿದೆ.
ಕೆಳಸೇತುವೆ ಕಾಮಗಾರಿಯ ಹಂತಗಳು:
ಯುಟಿಲಿಟಿಗಳ ಸ್ಥಳಾಂತರ ಕಾರ್ಯವನ್ನು ಪೂರ್ಣಗೊಲೀಸಲಾಗಿದ್ದು, ತಡೆಗೋಡೆ ಕಾಮಗಾರಿ ಕಾರ್ಯ ಪ್ರಗತಿಯಲ್ಲಿದೆ. ತಡೆಗೋಡೆ ಕಾರ್ಯ ಮುಗಿದ ಬಳಿಕ ಮಧ್ಯಭಾಗಕ್ಕೆ ಸಿದ್ಧಪಡಿಸಿರುವ ಬಾಕ್ಸ್ ಗಳನ್ನು ಅಳವಡಿಸಿ, ಕೊನೆಯ ಹಂತದಲ್ಲಿ ಸರ್ವೀಸ್ ರಸ್ತೆಗಳನ್ನು ನಿರ್ಮಿಸಲಾಗುವುದು.
ಪರಿಶೀಲನೆ ವೇಳೆ ಕೇಂದ್ರ ನಗರ ಪಾಲಿಕೆ ಆಯುಕ್ತ ವೆಂಕಟಾ ಚಲಪತಿ, ಮುಖ್ಯ ಅಭಿಯಂತರರಾದ ವಿಜಯ್ ಕುಮಾರ್ ಹರಿದಾಸ್, ಹೇಮಲತಾ ಸೇರಿದಂತೆ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.