×
Ad

ಪಟ್ಟಭದ್ರ ಹಿತಾಸಕ್ತಿಗಳು ಮೂಢನಂಬಿಕೆಗಳನ್ನು ಜೀವಾಂತವಾಗಿರಿಸಿವೆ : ಸಿದ್ದರಾಮಯ್ಯ

Update: 2026-07-10 21:02 IST

ಬೆಂಗಳೂರು : ಸುಮಾರು 800 ವರ್ಷಗಳ ಹಿಂದೆಯೇ ಬಸವಾದಿ ಶರಣರು ಮೂಢನಂಬಿಕೆಯನ್ನು ವಿರೋಧಿಸಿದ್ದು, ನಮ್ಮ ಸರಕಾರ ಮೂಢನಂಬಿಕೆ ನಿಷೇಧ ಕಾಯ್ದೆಯನ್ನು ಜಾರಿ ಮಾಡಿದೆ. ಆದರೂ, ಪಟ್ಟಭದ್ರ ಹಿತಾಸಕ್ತಿಗಳು ಅದನ್ನು ಜೀವಾಂತವಾಗಿರಿಸಿವೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಳವಳ ವ್ಯಕ್ತಪಡಿಸಿದ್ದಾರೆ.

ಶುಕ್ರವಾರ ಇಲ್ಲಿನ ರಾಜ್ಯ ಸರಕಾರಿ ನೌಕರರ ಸಂಘದ ಎನ್‍ಜಿಓ ಸಭಾಂಗಣದಲ್ಲಿ ಜನ ಪ್ರಕಾಶನ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹೈಕೋರ್ಟ್‍ನ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್ ದಾಸ್ ಅವರು ಬರೆದಿರುವ ‘ಮೆಮೊರೆಬಲ್ ಟ್ರಯಲ್ಸ್ - ಅವಿಸ್ಮರಣೀಯ ಪ್ರಕರಣಗಳು’ ಕೃತಿಯ ಕನ್ನಡ ಹಾಗೂ ಇಂಗ್ಲೀಷ್‌ ಆವೃತ್ತಿಯನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ಮೂಢನಂಬಿಕೆಯನ್ನು ಜೀವಾಂತವಾಗಿರಿಸುವ ಪಟ್ಟಭದ್ರ ಹಿತಾಸಕ್ತಿಗಳ ವಿರುದ್ಧ ಹೋರಾಡಿದರೆ ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ. ದೇಶದಲ್ಲಿ ಮನುವಾದಿಗಳ ವಿರುದ್ಧ ಮಾತನಾಡುವುದು ಕಷ್ಟವಾಗುತ್ತಿದೆ. ಹೀಗಾಗಿ ಮೂಢನಂಬಿಕೆಯನ್ನು ತೊಲಗಿಸಲು ಶಿಕ್ಷಣದಲ್ಲಿ ವೈಜ್ಞಾನಿಕತೆಯನ್ನು ಅಳವಡಿಸಬೇಕಿದೆ ಎಂದು ಅವರು ಹೇಳಿದರು.

ಸಂವಿಧಾನದ ಧ್ಯೇಯೋದ್ದೇಶಗಳನ್ನು ಈಡೇರಿಸಿದರೆ ದೇಶದ ಬಹಳ ಸಮಸ್ಯೆಗಳು ಬಗೆಹರಿಯುತ್ತವೆ. ಆದರೆ ವಿದ್ಯಾವಂತರೇ ಸಂವಿಧಾನವನ್ನು ಓದಿಕೊಂಡಿಲ್ಲ. ಸಂವಿಧಾನ ಓದಿದರೆ ದೇಶದ ಜನರ ಹಕ್ಕು-ಕರ್ತವ್ಯಗಳನ್ನು ತಿಳಿಯಲು ಸಾಧ್ಯವಾಗುತ್ತದೆ. ತಿಳಿದುಕೊಳ್ಳದೆ ಹೋದರೆ, ಹಕ್ಕು-ಕರ್ತವ್ಯಗಳು ಗೊತ್ತಾಗುವುದಿಲ್ಲ ಎಂದು ಅವರು ಹೇಳಿದರು.

ಸಮಸಮಾಜ ನಿರ್ಮಾಣವಾಗದಿದ್ದರೆ, ಜಾತಿ ವ್ಯವಸ್ಥೆ ಮತ್ತು ಶೋಷಣೆ ಹೋಗುವುದಿಲ್ಲ. ಯುವಕರಲ್ಲಿ ತ್ಯಾಗದ ಮನೋಭಾವ ಬೆಳೆಯಬೇಕು ಹಾಗೂ ಸತ್ಯಕ್ಕೆ ಹೋರಾಟ ಮಾಡುವ ಭಾವನೆ ಬೆಳೆಯಬೇಕು ಎಂಬ ಉದ್ದೇಶದಿಂದ ಈ ಪುಸ್ತಕವನ್ನು ಜನರ ಮುಂದೆ ಇಡಲಾಗಿದೆ. ಇದನ್ನು ಯುವ ಜನರು ಓದಬೇಕು ಎಂದು ಅವರು ಕರೆ ನೀಡಿದರು.

ಈಗ ನೆಹರು ಹಾಗೂ ಮೋದಿಯನ್ನು ಹೋಲಿಕೆ ಮಾಡುತ್ತಿದ್ದಾರೆ. ನೆಹರು 17 ವರ್ಷ ಪ್ರಧಾನ ಮಂತ್ರಿಯಾಗಿದ್ದರು. ಮೋದಿ 12 ವರ್ಷ ಪ್ರಧಾನ ಮಂತ್ರಿಯಾಗಿದ್ದಾರೆ. ಆದರೆ ಮೋದಿ ಅವರು ನೆಹರು ಅವರ ದಾಖಲೆ ಮುರಿದಿದ್ದಾರೆ ಎಂದು ಸುಳ್ಳು ಪ್ರಚಾರ ಮಾಡಲಾಗುತ್ತಿದೆ. ಇಂತಹ ಸುಳ್ಳುಗಳನ್ನು ಖಂಡಿಸದಿದ್ದರೆ, ಅದೇ ನಿಜ ಎಂದು ಜನರು ನಂಬುತ್ತಾರೆ ಎಂದು ಅವರು ಹೇಳಿದರು.

ಚಿತ್ರನಟ ಪ್ರಕಾಶ್ ರಾಜ್ ಮಾತನಾಡಿ, ಇಂದು ಪತ್ರಕರ್ತರು ಮಾತ್ರವಲ್ಲ, ಕಲಾವಿದರು, ವಕೀಲರು, ನ್ಯಾಯಾಮೂರ್ತಿಗಳು, ವೈದ್ಯರು, ಉದ್ಯಮಿಗಳು ಮಾರಿಕೊಂಡಿದ್ದಾರೆ. ಲಕ್ಷಾಂತರ ಮತಗಳನ್ನು ಪಡೆದುಕೊಂಡಿರುವ ವಿಧಾನಸಭೆ ಹಾಗೂ ಲೋಕಸಭೆ ಸದಸ್ಯರು ಮಾರಿಕೊಂಡಿದ್ದಾರೆ. ಈ ಮಾರಿಕೊಳ್ಳುವ ವ್ಯಾಧಿ ದೇಶವನ್ನು ದುರ್ಬಲಗೊಳಿಸಿದೆ. ಇಲ್ಲಿ ಸಿದ್ಧಾಂತದಲ್ಲಿ ಸಮಸ್ಯೆ ಇಲ್ಲ, ಅವಕಾಶವಾದಿಗಳು ಹೆಚ್ಚಾಗಿದ್ದಾರೆ ಎಂದರು.

ಇಂದು ಪ್ರಜಾಪ್ರಭುತ್ವ ನಿರ್ಮಾಣವಾಗಿರುವುದು ಸತ್ಯಕ್ಕೆ ದೂರವಾಗಿದೆ. ಎಲ್ಲ ಕಾಲದಲ್ಲಿಯೂ ಪ್ರಜಾಪ್ರಭುತ್ವ ಒಂದು ಪ್ರಾಯೋಗಿಕವಾಗಿಯೇ ಉಳಿದಿದೆ. ಪ್ರತಿನಿಧಿಗಳ ಆಯ್ಕೆಯಾಗುವಾಗ ಮಾತ್ರ ಪ್ರಜಾಪ್ರಭುತ್ವ ಇರುತ್ತದೆ. ಪ್ರತಿನಿಧಿಗಳ ಆಯ್ಕೆಯಾದ ನಂತರ ಸರ್ವಾಧಿಕಾರ ನಿರ್ಮಾಣವಾಗುತ್ತದೆ. ಒಮ್ಮೆ ಅಧಿಕಾರ ಸಿಕ್ಕ ನಂತರ ಅಧಿಕಾರವನ್ನು ಬಿಟ್ಟುಕೊಡುವುದಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಈಗ ಪ್ರಜಾಪ್ರಭುತ್ವ ಪರವಾಗಿದ್ದವರ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ಮುಸ್ಲಿಂ, ಮಾವೋವಾದಿ ಬಗ್ಗೆ ಮಾತನಾಡಿದರೆ, ದೇಶದ್ರೋಹಿ, ಹಿಂದೂ ವಿರೋಧಿ ಎಂದು ಅಪಪ್ರಚಾರ ಮಾಡಲಾಗುತ್ತಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಸಮಾರಂಭದಲ್ಲಿ ಹೈಕೋರ್ಟ್‍ನ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್ ದಾಸ್, ಲೇಖಕಿ ತಸ್ರಿಮ್ ಮುಲ್ಲಾ, ಕೃತಿ ಇಂಗ್ಲಿಷ್‌ ಆವೃತ್ತಿಯ ಅನುವಾದಕ ಬಿ.ಎಸ್.ಲೋಕೇಶ್‍ಚಂದ್ರ, ಜನ ಪ್ರಕಾಶನದ ಬಿ.ರಾಜಶೇಖರಮೂರ್ತಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

 

ಐದು ಗ್ಯಾರೆಂಟಿಗಳು ಮಾಡಿದಾಗ ನಮ್ಮ ಪಕ್ಷದವರೇ ಅವುಗಳನ್ನು ಟೀಕೆ ಮಾಡುವ ಪರಿಸ್ಥಿತಿ ಇತ್ತು. ಈಗ ಅದರ ಮಹತ್ವ ಎಲ್ಲರಿಗೂ ಗೊತ್ತಾಗಿದೆ. ಅವು ಅಸಮಾನತೆಯನ್ನು ತೊಲಗಿಸಲು ನೆರವಾಗಿವೆ. ಬೆಲೆಯೇರಿಕೆ ಸಂದರ್ಭದಲ್ಲಿ ಗ್ಯಾರೆಂಟಿ ಯೋಜನೆಗಳು ಇಲ್ಲದಿದ್ದರೆ, ಬಡವರಿಗೆ ತೊಂದರೆಯಾಗುತ್ತಿತ್ತು.

- ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News