×
Ad

ಡಿಸೆಂಬರ್ ಒಳಗೆ ಜಿಬಿಎ ಚುನಾವಣೆ ನಡೆಸಲು ಅನುಮತಿ ಕೋರಿ ಸುಪ್ರೀಂ ಕೋರ್ಟ್‍ಗೆ ಸರಕಾರ ಅರ್ಜಿ

Update: 2026-07-10 23:30 IST

ಬೆಂಗಳೂರು : ರಾಜ್ಯದಲ್ಲಿ ಎಸ್‍ಐಆರ್ ಪ್ರಕ್ರಿಯೆ ನಡೆಯುತ್ತಿರುವ ಹಿನ್ನೆಲೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ(ಜಿಬಿಎ) ವ್ಯಾಪ್ತಿಯ ಐದು ನಗರ ಪಾಲಿಕೆಗಳ ಚುನಾವಣೆಯನ್ನು ಡಿಸೆಂಬರ್ ತಿಂಗಳೊಳಗೆ ನಡೆಸಲು ಅನುಮತಿ ನೀಡುವಂತೆ ಕೋರಿ ಸುಪ್ರೀಂ ಕೋರ್ಟ್‍ಗೆ ರಾಜ್ಯ ಸರಕಾರ ಅರ್ಜಿ ಸಲ್ಲಿಸಿರುವುದಾಗಿ ವರದಿಯಾಗಿದೆ.

ಬೆಂಗಳೂರಿನಲ್ಲಿ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಪ್ರಕ್ರಿಯೆ ನಡೆಯುತ್ತಿದೆ. ಕರಡು ಮತದಾರರ ಪಟ್ಟಿ ಪ್ರಕಟಣೆ, ಆಕ್ಷೇಪಣೆಗಳ ಸ್ವೀಕಾರ ಮತ್ತು ಅವುಗಳ ವಿಚಾರಣೆ ಇನ್ನೂ ಪೂರ್ಣಗೊಂಡಿಲ್ಲ. ಸುಮಾರು 8,972 ಬಿಎಲ್‍ಓಗಳು, 938 ಮೇಲ್ವಿಚಾರಕರು, 28 ಇಆರ್‌ ಒ, 75 ಸಹಾಯಕ ಇಆರ್‌ ಒಗಳು ಸೇರಿದಂತೆ ಸಾವಿರಾರು ಸಿಬ್ಬಂದಿ ಎಸ್‍ಐಆರ್ ಕೆಲಸದಲ್ಲಿ ನಿರತರಾಗಿದ್ದಾರೆ. ಚುನಾವಣೆ ನಡೆಸುವ ಸಿಬ್ಬಂದಿಯೇ ಎಸ್‍ಐಆರ್ ಪ್ರಕ್ರಿಯೆಲ್ಲಿ ತೊಡಗಿರುವುದರಿಂದ ಆಗಸ್ಟ್‌ ನಲ್ಲಿ ಚುನಾವಣೆ ನಡೆಸುವುದು ಕಷ್ಟವಾಗಿದೆ ಎಂದು ಸರಕಾರ ವಾದ ಮಂಡಿಸಿದೆ ಎಂದು ತಿಳಿದುಬಂದಿದೆ.

ಆಗಸ್ಟ್ 31 ರೊಳಗೆ ಐದು ಬೆಂಗಳೂರು ನಗರ ಪಾಲಿಕೆಗಳಿಗೆ ಚುನಾವಣೆ ಪೂರ್ಣಗೊಳಿಸುವಂತೆ ಸುಪ್ರೀಂ ಕೋರ್ಟ್ ನಿರ್ದೇಶಿಸಿತ್ತು. ಆದರೆ, ಇದೀಗ 20ಮೇ 2026ರ ಸುಪ್ರೀಂ ಕೋರ್ಟ್ ಆದೇಶವನ್ನು ಮಾರ್ಪಡಿಸುವಂತೆ ಸರಕಾರ ಕೋರಿದೆ ಎಂದು ತಿಳಿದುಬಂದಿದೆ.

ಜಿಬಿಎ ಚುನಾವಣೆಗೆ ಸುಮಾರು 60 ಸಾವಿರ ಸಿಬ್ಬಂದಿ ಅಗತ್ಯವಿದೆ. ಮತದಾನ ಕೇಂದ್ರ ಸಿಬ್ಬಂದಿ, ರಿಟರ್ನಿಂಗ್ ಆಫಿಸರ್, ಭದ್ರತಾ ಸಿಬ್ಬಂದಿ ಸೇರಿದಂತೆ ದೊಡ್ಡ ಪ್ರಮಾಣದ ಮಾನವ ಸಂಪನ್ಮೂಲ ಬೇಕಾಗುತ್ತದೆ. ಇದೇ ವೇಳೆ, ಎಸ್‍ಐಆರ್ ಕೂಡ ನಡೆಯುತ್ತಿರುವುದರಿಂದ ಸಿಬ್ಬಂದಿ ಕೊರತೆ ಉಂಟಾಗುತ್ತದೆ ಎಂದು ಸರಕಾರ ಕೋರ್ಟ್‍ನಲ್ಲಿ ತನ್ನ ವಾದ ಮಂಡಿಸಿರುವುದಾಗಿ ಗೊತ್ತಾಗಿದೆ.

ಬೆಂಗಳೂರಿನಲ್ಲಿ ಸುಮಾರು 1.03 ಕೋಟಿ ಮತದಾರರಿದ್ದಾರೆ. ಸುಮಾರು 40 ಲಕ್ಷ ಮನೆಗಳಿಗೆ ಭೇಟಿ ನೀಡಿ ಮತಪಟ್ಟಿ ಪರಿಶೀಲನೆ ನಡೆಸಬೇಕಿದೆ, ಕರಡು ಮತದಾರರ ಪಟ್ಟಿಗೆ ಲಕ್ಷಾಂತರ ಆಕ್ಷೇಪಣೆಗಳು ಬರಬಹುದು. ಪ್ರತಿಯೊಂದು ವಿಧಾನಸಭಾ ಕ್ಷೇತ್ರಕ್ಕೂ ಒಂದು ಲಕ್ಷಕ್ಕೂ ಹೆಚ್ಚು ಅರ್ಜಿಗಳು/ಆಕ್ಷೇಪಣೆಗಳು ಬರಬಹುದು ಎಂದು ಸರಕಾರ ಅಂದಾಜಿಸಿದೆ.

ನಿಖರ ಮತದಾರರ ಪಟ್ಟಿಯಿಲ್ಲದೆ ಚುನಾವಣೆ ನಡೆಸುವುದು ಸೂಕ್ತವಲ್ಲ. ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗೆ ಅಂತಿಮ ಹಾಗೂ ಸರಿಯಾದ ಮತದಾರರ ಪಟ್ಟಿ ಅಗತ್ಯ. ಹೀಗಾಗಿ, ಚುನಾವಣೆ ನಡೆಸಲು ಡಿಸೆಂಬರ್ ವರೆಗೆ ಸಮಯಾವಕಾಶಬೇಕೆಂದು ರಾಜ್ಯ ಸರಕಾರ ಸುಪ್ರೀಂ ಕೋರ್ಟ್‍ನಲ್ಲಿ ಮನವಿ ಮಾಡಿದೆ ಎಂದು ತಿಳಿದುಬಂದಿದೆ.

 

ಜಿಬಿಎ ಚುನಾವಣೆ ಮುಂದೂಡಿಕೆ ಹುನ್ನಾರ

ಸರಕಾರವು ಜಿಬಿಎ ಚುನಾವಣೆ ಮುಂದೂಡುವ ದೊಡ್ಡ ಹುನ್ನಾರವನ್ನು ನಡೆಸುತ್ತಿದೆ. ಸುಪ್ರೀಂ ಕೋರ್ಟ್ ಈಗಾಗಲೇ ಎರಡು ಬಾರಿ ಕೊನೆಯ ದಿನಾಂಕವನ್ನು ನಿಗದಿಪಡಿಸಿದ್ದರೂ ಸಹ, ಸರಕಾರ ಮತ್ತೆ ಮುಂದೂಡಿಕೆ ಕೋರಿ ಅರ್ಜಿ ಸಲ್ಲಿಸಿದೆ. ಎಸ್‍ಐಆರ್ ನೆಪ ಒಡ್ಡಿ ಚುನಾವಣೆ ಮುಂದೂಡಲು ನೋಡುತ್ತಿದ್ದಾರೆ. ಆಂತರಿಕವಾಗಿ ತಮಗೆ ಗೆಲ್ಲಲು ಸಾಧ್ಯವಿಲ್ಲ ಎಂಬ ಸತ್ಯ ಸರಕಾರಕ್ಕೆ ಮನವರಿಕೆಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಟೀಕಿಸಿದರು.

 

ಯಾವ ಮತಪಟ್ಟಿ ಆಧಾರದ ಮೇಲೆ ಚುನಾವಣೆ ಮಾಡಬೇಕೆಂಬ ಸ್ಪಷ್ಟತೆ ಇಲ್ಲ..!

ಜಿಬಿಎ ಚುನಾವಣೆ ನಡೆಸಲು ನಾವು ತಯಾರಾಗಿದ್ದು, ಪ್ರಣಾಳಿಕೆ ಸಮಿತಿ ಎಲ್ಲವೂ ಸಿದ್ಧವಾಗಿದೆ. ಎಸ್‍ಐಆರ್ ಮಾಡಲು ಸರಕಾರಿ ಅಧಿಕಾರಿಗಳು ಸಿಗುತ್ತಿಲ್ಲ. ಹೋಂಗಾರ್ಡ್‍ಗಳನ್ನು ಸೇರಿಸಿಕೊಂಡು ಮಾಡುತ್ತಿದ್ದಾರೆ. ಅವರಿಂದ ಇದು ಸಾಧ್ಯವಾಗುತ್ತಿಲ್ಲ. ಹೀಗಾಗಿ ಅಧಿಕಾರಿಗಳ ಕೊರತೆಯಿಂದ ಎಸ್‍ಐಆರ್ ಮಾಡಲು ಸಾಧ್ಯವಾಗುತ್ತಿಲ್ಲ. ಅವರು ಸುಪ್ರೀಂ ಕೋರ್ಟ್ ಆದೇಶದಂತೆ ಚುನಾವಣೆ ನಡೆಸಬೇಕಾದರೆ, ಜುಲೈ ತಿಂಗಳಲ್ಲೇ ಅಧಿಸೂಚನೆ ಹೊರಡಿಸಬೇಕು. ಅದಾದ ನಂತರ ಮತಪಟ್ಟಿ ಮಾಡಬೇಕು. ಯಾವ ಮತಪಟ್ಟಿ ಆಧಾರದ ಮೇಲೆ ಚುನಾವಣೆ ಮಾಡಬೇಕು ಎಂಬ ಸ್ಪಷ್ಟತೆಯೂ ಇಲ್ಲ. ಹೀಗಾಗಿ ನ್ಯಾಯಾಲಯದ ಮೆಟ್ಟಿಲೇರಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಸ್ಪಷ್ಟಪಡಿಸಿದರು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News