×
Ad

ಸಾರಿಗೆ ನಿಗಮದ ಸಿಬ್ಬಂದಿಗೆ ವೇತನ ಪಾವತಿಸುವುದೇ ಸವಾಲು : ಕೆ.ಬಿ.ಶಿವಕುಮಾರ್

Update: 2026-07-15 21:03 IST

ಸಾಂದರ್ಭಿಕ ಚಿತ್ರ | PC : Gemini AI

ಬೆಂಗಳೂರು : ರಾಜ್ಯದ ಕೆಎಸ್ಸಾರ್ಟಿಸಿ, ಬಿಎಂಟಿಸಿ ಸೇರಿದಂತೆ ನಾಲ್ಕೂ ಸಾರಿಗೆ ನಿಗಮದ ಸಿಬ್ಬಂದಿಗೆ ವೇತನ ಪಾವತಿಸುವುದೇ ಬಹುದೊಡ್ಡ ಸವಾಲಾಗಿದೆ ಎಂದು ಕೆಎಸ್ಸಾರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಕೆ.ಬಿ.ಶಿವಕುಮಾರ್ ತಿಳಿಸಿದ್ದಾರೆ.

ಬುಧವಾರ ನಗರದ ಕಾರ್ಮಿಕ ಭವನದಲ್ಲಿ ಕಾರ್ಮಿಕ ಇಲಾಖೆಯ ಆಯುಕ್ತ ಡಾ.ರಾಗಪ್ರಿಯಾ ಆರ್. ಅಧ್ಯಕ್ಷತೆಯಲ್ಲಿ ನಡೆದ ರಾಜಿ ಸಂಧಾನ ಸಭೆಯಲ್ಲಿ ಮಾತನಾಡಿದ ಅವರು, ನಾಲ್ಕೂ ನಿಗಮಗಳಿಗೆ ಸರಕಾರ ಹೆಚ್ಚುವರಿ ಬಸ್ ಸೇವೆ ಒದಗಿಸುತ್ತಿದ್ದು, ಇದಕ್ಕೆ ಚಾಲಕರು, ನಿರ್ವಾಹಕರ ನೇಮಕದ ಜೊತೆಗೆ ಸಾರಿಗೆ ಬಸ್‍ಗಳಿಗೆ ಪರಿಕರಗಳನ್ನು ಒದಗಿಸಬೇಕಾಗಿದೆ. ಹೀಗಾಗಿ ನಿಗಮಕ್ಕೆ ಹೆಚ್ಚುವರಿ ಹೊರೆ ಬೀಳುತ್ತಿದೆ ಎಂದರು.

ಜೊತೆಗೆ ಮಧ್ಯಪ್ರಾಚ್ಯದ ಯುದ್ಧ ಭೀತಿಯಿಂದ ತೈಲ ದರಗಳು ಹೆಚ್ಚಾಗಿವೆ. ಹೀಗಿರುವಾಗ ಸಾರಿಗೆ ನಿಗಮಗಳಿಗೆ ವೇತನ ಪಾವತಿಸುವುದು ಸಹ ಕಷ್ಟವಾಗುತ್ತಿದೆ. ವೇತನ ಪಾವತಿಗೆ ಸರಕಾರ ಪರ್ಯಾಯ ಮಾರ್ಗಗಳನ್ನು ಹುಡುಕುತ್ತಿದೆ. ಸರಕಾರ ಇದೀಗ ಶೇ.12.5ರಷ್ಟು ವೇತನ ಹೆಚ್ಚಳ ಮಾಡಿದ್ದು, ಈ ಹಣ ಒದಗಿಸುವುದು ಕಷ್ಟವಾಗಿದೆ ಎಂದು ಹೇಳಿದರು.

ಇದೇ ವೇಳೆ ಸರಕಾರದಿಂದ ಬಾಕಿ ಉಳಿದಿರುವ ಅನುದಾನ ಹಾಗೂ ಪರಿಹಾರ ಮೊತ್ತವನ್ನು ತಕ್ಷಣ ಬಿಡುಗಡೆ ಮಾಡುವ ಮೂಲಕ ಸುಮಾರು 1,15,000 ಸಾರಿಗೆ ನೌಕರರ ವೇತನ, ಭತ್ಯೆ ಹಾಗೂ ಇತರ ಸೌಲಭ್ಯಗಳ ಪಾವತಿಗೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಕಾರ್ಮಿಕ ಸಂಘಟನೆಗಳ ಪ್ರತಿನಿಧಿಗಳು ಒತ್ತಾಯಿಸಿದರು.

ರಾಜ್ಯದ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ನಿರಂತರವಾಗಿ ಮುನ್ನಡೆಸುತ್ತಿರುವ ಸಾರಿಗೆ ನೌಕರರ ಹಿತಾಸಕ್ತಿಯನ್ನು ಕಾಪಾಡುವ ನಿಟ್ಟಿನಲ್ಲಿ ರಾಜ್ಯ ಸರಕಾರ ಶೀಘ್ರವೇ 5,000 ಕೋಟಿ ರೂ. ಬಾಕಿ ಮೊತ್ತವನ್ನು ಕೆಎಸ್ಸಾರ್ಟಿಸಿ ಹಾಗೂ ಬಿಎಂಟಿಸಿ ನಿಗಮಗಳ ಖಾತೆಗಳಿಗೆ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಬಸ್ ಸೇವೆಯನ್ನು ಸಾರಿಗೆ ನಿಗಮಗಳು ಯಶಸ್ವಿಯಾಗಿ ಒದಗಿಸುತ್ತಿವೆ. ಆದರೆ, ಈ ಯೋಜನೆಯಡಿ ಸಾರಿಗೆ ನಿಗಮಗಳಿಗೆ ಸರಕಾರದಿಂದ ಪಾವತಿಯಾಗಬೇಕಿರುವ ಸುಮಾರು 5 ಸಾವಿರ ಕೋಟಿ ರೂ.ಪರಿಹಾರ ಮೊತ್ತ ಬಾಕಿ ಉಳಿದಿದೆ. ಇದರಿಂದ ನಿಗಮಗಳ ಆರ್ಥಿಕ ಸ್ಥಿತಿ ಗಂಭೀರ ಸಂಕಷ್ಟಕ್ಕೆ ಸಿಲುಕಿದೆ.

-ಗಂಡಸಿ ಸದಾನಂದ ಸ್ವಾಮಿ, ಸಾಮಾಜಿಕ ಕಾರ್ಯಕರ್ತ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News