ತಮಿಳುನಾಡಿಗೆ ನೀರು ಹರಿಸಲು ಸಾಧ್ಯವಿಲ್ಲ : ಸಚಿವ ರಾಮಲಿಂಗಾರೆಡ್ಡಿ
ಬೆಂಗಳೂರು : ‘ಕಾವೇರಿ ಜಲಾನಯನ ಪ್ರದೇಶದಲ್ಲಿ ತೀವ್ರ ಸ್ವರೂಪದ ಮಳೆ ಕೊರತೆ ಹಿನ್ನೆಲೆತಲ್ಲಿ ಜಲಾಶಯಗಳಲ್ಲಿನ ನೀರಿನ ಮಟ್ಟ ನಿರೀಕ್ಷಿತ ಪ್ರಮಾಣದಲ್ಲಿ ಇಲ್ಲ. ಹೀಗಾಗಿ ತಮಿಳುನಾಡಿಗೆ ನೀರು ಬಿಡಲು ಸಾಧ್ಯವಿಲ್ಲ’ ಎಂದು ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಇಂದಿಲ್ಲಿ ಸ್ಪಷ್ಟಪಡಿಸಿದ್ದಾರೆ.
ಬುಧವಾರ ಕಾವೇರಿ ನದಿ ನೀರಿನ ಹಂಚಿಕೆ ಕುರಿತ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (ಸಿಡಬ್ಲ್ಯೂಎಂಎ) ಸಭೆಯಲ್ಲಿ ಆನ್‍ಲೈನ್ ಮೂಲಕ ಪಾಲ್ಗೊಂಡ ಬಳಿಕ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಅಭಾವವಿದೆ. ಜೂನ್ ತಿಂಗಳಲ್ಲಿ ಜಲಾಶಯಗಳಿಗೆ ಒಳಹರಿವು ಶೂನ್ಯವಾಗಿದೆ. ಜುಲೈ ತಿಂಗಳಲ್ಲಿ ಹಲವೆಡೆ ಸ್ವಲ್ಪ ಪ್ರಮಾಣದಲ್ಲಿ ಮಳೆಯಾಗಿದೆ. ಆದರೆ, ಜಲಾಶಯಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ನೀರು ಸಂಗ್ರಹವಾಗಿಲ್ಲ ಎಂದು ಹೇಳಿದರು.
ಜುಲೈ ತಿಂಗಳ ಕೊನೆಯಲ್ಲಿಯೂ ಮಳೆ ಬೀಳುವ ಸಾಧ್ಯತೆ ಇಲ್ಲ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹೀಗಾಗಿ ಜಲಾಶಯಗಳಲ್ಲಿ ಪ್ರಸ್ತುತ ಸಂಗ್ರಹವಿರುವ ನೀರನ್ನ ಕುಡಿಯಲು ಮಾತ್ರ ಬಳಸಿಕೊಳ್ಳಬೇಕಿದೆ. ರಾಜಧಾನಿ ಬೆಂಗಳೂರು ಸೇರಿದಂತೆ ಜಲಾನಯನ ಪ್ರದೇಶದ ಹಲವು ಗ್ರಾಮಗಳು ಮತ್ತು ನಗರಗಳು ಕಾವೇರಿ ನೀರನ್ನು ಆಶ್ರಯಿಸಿವೆ ಎಂದು ಅವರು ತಿಳಿಸಿದರು.