Bengaluru | ಪೊಲೀಸರ ಸೋಗಿನಲ್ಲಿ ವ್ಯಕ್ತಿಯ ಅಪಹರಣ; ಐವರು ಆರೋಪಿಗಳ ಬಂಧನ
ಸಾಂದರ್ಭಿಕ ಚಿತ್ರ | PC : AI
ಬೆಂಗಳೂರು : ಕೇಂದ್ರ ಅಪರಾಧ ವಿಭಾಗ(ಸಿಸಿಬಿ) ಪೊಲೀಸರ ಸೋಗಿನಲ್ಲಿ ವ್ಯಾಯಾಮ ಶಾಲೆಯ ತರಬೇತುದಾರನನ್ನು ಅಪಹರಿಸಿ ಹಣ ವಸೂಲಿ ಮಾಡಲು ಯತ್ನಿಸಿದ್ದ ಐವರು ಆರೋಪಿಗಳನ್ನು ಶಂಕರಪುರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಯಲಹಂಕದ ನ್ಯೂಟೌನ್ ನಿವಾಸಿಯಾದ ರೌಡಿಶೀಟರ್ ತಿರುಮಲ(28), ವಿದ್ಯಾರಣ್ಯಪುರ ನಿವಾಸಿ ಶಾಂತ್ ಕುಮಾರ್(44), ಯಲಹಂಕ ನಿವಾಸಿ ಪ್ರೇಮ್ ಸಾಯಿ (30), ಆರ್.ಟಿ ನಗರ ನಿವಾಸಿ ರಂಜೀತ್ ರಾವ್(31) ಮತ್ತು ಆರ್.ಟಿ ನಗರ ನಿವಾಸಿ ನಮೀತ್ (29) ಬಂಧಿತ ಆರೋಪಿಗಳಾಗಿದ್ದು, ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ಒಂದು ಇನ್ನೋವಾ ಕಾರು ಮತ್ತು 5 ಮೊಬೈಲ್ ಫೋನ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬಂಧಿತರು ಜೆ.ಪಿ ನಗರದ ನಿವಾಸಿ ಕುಮಾರ್ (25) ಎಂಬುವರನ್ನು ಅಪಹರಿಸಿ ಹಣ ನೀಡುವಂತೆ ಜೀವ ಬೆದರಿಕೆ ಹಾಕಿದ್ದರು. ಈ ಬಗ್ಗೆ ಶಂಕರಪುರ ಠಾಣಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.