×
Ad

ಆಲಮಟ್ಟಿ ಡ್ಯಾಂನಿಂದ ಕೆರೆಗಳಿಗೆ ನೀರು ಹರಿಸಿ : ಸಿಎಂಗೆ ಮಾಜಿ ಸಚಿವ ಶಿವಾನಂದ ಪಾಟೀಲ್‌ ಮನವಿ

Update: 2026-07-15 12:47 IST

ಡಿ.ಕೆ.ಶಿವಕುಮಾರ್, ಶಿವಾನಂದ ಪಾಟೀಲ್‌

ಬೆಂಗಳೂರು : ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಜನರು ಹಾಗೂ ಜಾನುವಾರುಗಳಿಗೆ ಉಂಟಾಗಿರುವ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಲಾಲ್ ಬಹದ್ದೂರ್ ಶಾಸ್ತ್ರಿ (ಆಲಮಟ್ಟಿ) ಜಲಾಶಯದಿಂದ ಕಾಲುವೆಗಳಿಗೆ ತಕ್ಷಣ ನೀರು ಬಿಡುಗಡೆ ಮಾಡುವಂತೆ ಶಾಸಕ ಹಾಗೂ ಮಾಜಿ ಸಚಿವ ಶಿವಾನಂದ ಪಾಟೀಲ್‌ ಅವರು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

ಆಲಮಟ್ಟಿ ಜಲಾಶಯ ಮುಂಗಾರಿನಲ್ಲಿ ಭರ್ತಿಯಾಗದಿದ್ದರೂ ಹಿಂಗಾರಿನಲ್ಲಿ ಭರ್ತಿಯಾಗುವ ಸಾಧ್ಯತೆ ಹೆಚ್ಚಿದೆ. ಹಿಂದೆ ಕೂಡ ಹಿಂಗಾರಿನಲ್ಲಿ ಜಲಾಶಯ ಭರ್ತಿಯಾದ ಉದಾಹರಣೆಗಳಿರುವುದರಿಂದ ಈಗಲೇ ನೀರು ಹರಿಸಲು ಹಿಂಜರಿಯುವ ಅಗತ್ಯವಿಲ್ಲ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.

ಪ್ರಸ್ತುತ ಜಲಾಶಯದಲ್ಲಿ 70 ಟಿಎಂಸಿ ಅಡಿ ಬಳಸಬಹುದಾದ ನೀರು ಲಭ್ಯವಿದ್ದು, ಪೂರ್ಣ ಭರ್ತಿಗೆ ಇನ್ನೂ 35 ಟಿಎಂಸಿ ಅಡಿ ನೀರಿನ ಅಗತ್ಯವಿದೆ. ಮುಂಗಾರು ಇನ್ನೂ ಮುಗಿದಿಲ್ಲದ ಕಾರಣ ಜಲಾಶಯ ಭರ್ತಿಯಾಗುವ ವಿಶ್ವಾಸವಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳ ಹಲವು ಭಾಗಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದ್ದು, ನೀರಾವರಿ ಸಲಹಾ ಸಮಿತಿ ಸಭೆಗಾಗಿ ಕಾಯದೆ ಪರಿಸ್ಥಿತಿಯ ಗಂಭೀರತೆಯನ್ನು ಪರಿಗಣಿಸಿ ತಕ್ಷಣ ಕಾಲುವೆಗಳಿಗೆ ನೀರು ಬಿಡುಗಡೆ ಮಾಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದು ಮನವಿ ಮಾಡಿದ್ದಾರೆ.

ಪ್ರತಿ ವರ್ಷ ಜಲಾಶಯ ಭರ್ತಿಯಾದ ಬಳಿಕ ನೂರರಿಂದ 200 ಟಿಎಂಸಿ ನೀರು ವ್ಯರ್ಥವಾಗಿ ಹರಿದು ಹೋಗುತ್ತಿದೆ. ಅಧಿಕಾರಿಗಳು ಇನ್ನೂ 10ರಿಂದ 15 ಟಿಎಂಸಿ ನೀರು ಸಂಗ್ರಹವಾದ ಬಳಿಕವೇ ನೀರು ಬಿಡುವ ನಿಲುವು ಹೊಂದಿರುವುದು ಸರಿಯಲ್ಲ. ಈ ವಿಳಂಬದಿಂದ ಸರ್ಕಾರ ಜನರ ಆಕ್ರೋಶಕ್ಕೆ ಗುರಿಯಾಗುವ ಸಾಧ್ಯತೆ ಇದೆ ಎಂದು ಅವರು ಎಚ್ಚರಿಸಿದ್ದಾರೆ.

ಮುಖ್ಯಮಂತ್ರಿಗಳು ಹಲವು ಜನಪರ ವಿಚಾರಗಳಲ್ಲಿ ತ್ವರಿತ ನಿರ್ಧಾರ ಕೈಗೊಂಡಿರುವುದನ್ನು ಉಲ್ಲೇಖಿಸಿರುವ ಶಿವಾನಂದ ಪಾಟೀಲ, ಇದೇ ರೀತಿಯಲ್ಲಿ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಯ ಕುಡಿಯುವ ನೀರಿನ ಸಮಸ್ಯೆಗೂ ತುರ್ತು ಸ್ಪಂದನೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News