×
Ad

ನಾಡಗೀತೆಯಲ್ಲಿ ‘ಬೌದ್ಧರುದ್ಯಾನ’ ಪದ ಸೇರ್ಪಡೆಗೆ ತಜ್ಞರ ಸಮಿತಿ ಶಿಫಾರಸು : ಡಾ.ಪುರುಷೋತ್ತಮ ಬಿಳಿಮಲೆ

Update: 2026-07-15 20:56 IST

ಬೆಂಗಳೂರು : ರಾಷ್ಟ್ರಕವಿ ಕುವೆಂಪು ರಚಿಸಿರುವ ನಾಡಗೀತೆಯಲ್ಲಿ ‘ಬೌದ್ಧರುದ್ಯಾನ’ ಪದ ಸೇರಿಸುವಂತೆ ತಜ್ಞರ ಸಮಿತಿ ಸರಕಾರಕ್ಕೆ ಶಿಫಾರಸು ಮಾಡಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ, ತಜ್ಞರ ಸಮಿತಿಯ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ತಿಳಿಸಿದ್ದಾರೆ.

ಈ ಕುರಿತು ವಾರ್ತಾಭಾರತಿಯೊಂದಿಗೆ ಮಾಹಿತಿ ಹಂಚಿಕೊಂಡ ಅವರು, ನಾಡಗೀತೆಯಲ್ಲಿ ‘ಬೌದ್ಧ’ ಪದ ಸೇರ್ಪಡೆ ಮಾಡುವಂತೆ ಬೌದ್ಧ ಧರ್ಮಗುರುಗಳು, ಬೌದ್ಧ ಸಂಘಟನೆಗಳು ರಾಜ್ಯ ಸರಕಾರವನ್ನು ಆಗ್ರಹಿಸಿದ್ದವು. ಈ ಬಗ್ಗೆ ಅಧ್ಯಯನ ನಡೆಸಿ ವರದಿ ಸಲ್ಲಿಸಲು ಸರಕಾರ ತಜ್ಞರ ಸಮಿತಿ ರಚಿಸಿತ್ತು ಎಂದು ತಿಳಿಸಿದರು.

ಸಮಿತಿಯು ಇತ್ತೀಚಿಗೆ ಸಭೆ ನಡೆಸಿ, ‘ಬೌದ್ಧರುದ್ಯಾನ’ ಪದ ಸೇರ್ಪಡೆಗೆ ಒಮ್ಮತದ ತೀರ್ಮಾನ ಕೈಗೊಂಡಿದೆ. ನಾಡಗೀತೆಯಲ್ಲಿನ ‘ಪಾರಸಿಕ ಜೈನರುದ್ಯಾನ’ ಎಂಬ ಸಾಲುಗಳನ್ನು, 'ಪಾರಸಿಕ ಜೈನ ಬೌದ್ಧರುದ್ಯಾನ' ಎಂದು ಮಾರ್ಪಾಡು ಮಾಡಲು ಸಮಿತಿಯು ಶಿಫಾರಸು ಮಾಡಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ವರದಿ ಸಲ್ಲಿಸಿದೆ ಎಂದು ತಿಳಿಸಿದರು.

ನಾಡಗೀತೆಯಲ್ಲಿ ಬೌದ್ಧರು ಎನ್ನುವ ಪದ ಸೇರಿಸಿದರೆ, ಏನು ತೊಂದರೆಯಾಗುತ್ತದೆ. ಕುವೆಂಪು ಆಶಯ, ಚಿಂತನೆಗೆ ವಿರೋಧವಾಗುತ್ತದೆಯೇ? ಎನ್ನುವುದನ್ನು ಸಭೆಯಲ್ಲಿ ಚರ್ಚಿಸಿದ್ದೇವೆ. ಹಿಂದೆ ಮಧ್ವ ಪದ ಸೇರಿಸಿದಾಗ ತುಂಬಾ ಗಲಾಟೆಯಾಗಿತ್ತು. ಆ ಹಿನ್ನೆಲೆಯಲ್ಲಿ ಕೂಡ ಚರ್ಚಿಸಿದ್ದೇವೆ. ಕುವೆಂಪು ಅವರಿಗೆ ಬೌದ್ಧರ ಬಗ್ಗೆ ಪ್ರೀತಿ ಇತ್ತು. ನಾಡಗೀತೆಯ ಕರಡಿನಲ್ಲಿ ಬೌದ್ಧರು ಪದ ಇತ್ತು. ಬೌದ್ಧರ ಬಗ್ಗೆ ನಾಟಕ, ಕವನವನ್ನು ಬರೆದಿದ್ದಾರೆ. ಅದರಿಂದ ‘ಬೌದ್ಧರುದ್ಯಾನ’ ಪದ ಸೇರಿಸಿದರೆ ಕುವೆಂಪು ಆಶಯಕ್ಕೆ ಧಕ್ಕೆ ಬರುವುದಿಲ್ಲ ಎಂಬ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.

ಬೌದ್ಧರುದ್ಯಾನ ಪದ ಸೇರಿಸಿದಾಗ ನಾಡಗೀತೆ ಹಾಡುವಾಗ ಉದ್ದ ಹೆಚ್ಚಾಗಿ, ಲಯ ಹಾಳಾಗುತ್ತಾ ಎನ್ನುವುದನ್ನು ಕೂಡ ನೋಡಿದಾಗ ಲಯಕ್ಕೆ ಯಾವುದೇ ಧಕ್ಕೆ ಯಾಗುವುದಿಲ್ಲ ಎನ್ನುವುದು ತಿಳಿದು ಬಂದಿತು. ಈಗ ನಾಡಗೀತೆಯಲ್ಲಿ ಪಾರಸಿಕ ಜೈನರುದ್ಯಾನ ಎಂದಿದೆ. ಅದನ್ನು ‘ಪಾರಸಿಕ ಜೈನ ಬೌದ್ಧರುದ್ಯಾನ’ ಎಂದು ಸೇರಿಸುವಂತೆ ಸರ್ವಾನುಮತದಿಂದ ಶಿಫಾರಸು ಮಾಡಿದ್ದೇವೆ ಎಂದು ಹೇಳಿದರು.

ನಿವೃತ್ತ ಕುಲಪತಿ ಡಾ.ಚಿದಾನಂದಗೌಡ, ಹಿರಿಯ ಸಾಹಿತಿಗಳಾದ ಪ್ರೊ. ಹಂಪ ನಾಗರಾಜಯ್ಯ, ಪ್ರೊ.ಬರಗೂರು ರಾಮಚಂದ್ರಪ್ಪ, ಪ್ರೊ.ಕಾಳೇಗೌಡ ನಾಗವಾರ, ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಡಾ.ಮೂಡ್ನಾಕೂಡು ಚಿನ್ನಸ್ವಾಮಿ, ಡಾ.ಸಿ.ಎಸ್.ದ್ವಾರಕನಾಥ್, ಡಾ.ಮೀನಾಕ್ಷಿ ಬಾಳಿ, ಡಾ.ಎಂ.ಎಸ್.ಆಶಾದೇವಿ ಅವರು ಸಮಿತಿಯಲ್ಲಿದ್ದರು. ಪ್ರೊ.ಬರಗೂರು ರಾಮಚಂದ್ರಪ್ಪ ಅವರು ಬಿಟ್ಟು ಎಲ್ಲರೂ ಸಭೆಯಲ್ಲಿ ಭಾಗವಹಿಸಿದ್ದು, ಒಮ್ಮತದ ತೀರ್ಮಾನ ಮಾಡಿದ್ದೇವೆ ಎಂದು ತಿಳಿಸಿದರು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News