×
Ad

ಆಸ್ತಿಯ ಸಂಪೂರ್ಣ ಹಕ್ಕು ಮಾಲಕರಿಗಿರಬೇಕು: ಸಿಎಂ ಡಿ.ಕೆ.ಶಿವಕುಮಾರ್

ಅಪಾರ್ಟ್‌ಮೆಂಟ್ ಸಂಘಗಳ ಪ್ರತಿನಿಧಿಗಳೊಂದಿಗೆ ಮುಖ್ಯಮಂತ್ರಿಗಳ ಸಂವಾದ

Update: 2026-07-15 13:16 IST

ಬೆಂಗಳೂರು : ಆಸ್ತಿ ಮಾಲಕರ ಸಮಸ್ಯೆಗಳ ಬಗ್ಗೆ ಸರ್ಕಾರಕ್ಕೆ ಸಂಪೂರ್ಣ ಅರಿವಿದ್ದು, ಆಸ್ತಿಯ ಸಂಪೂರ್ಣ ಹಕ್ಕು ಮಾಲೀಕರಿಗೇ ಇರಬೇಕು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.

ಕರ್ನಾಟಕ ಅಪಾರ್ಟ್‌ಮೆಂಟ್ (ಮಾಲೀಕತ್ವ ಮತ್ತು ನಿರ್ವಹಣೆ)–2026 ವಿಧೇಯಕ ಕುರಿತು ಅಪಾರ್ಟ್‌ಮೆಂಟ್ ಸಂಘಗಳ ಪ್ರತಿನಿಧಿಗಳೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆಸ್ತಿ ಖರೀದಿಯಿಂದ ಹಿಡಿದು ನೋಂದಣಿ, ದಾಖಲೆಗಳ ವರ್ಗಾವಣೆ ಹಾಗೂ ನಿರ್ವಹಣೆಯವರೆಗೆ ಎದುರಾಗುವ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲು ಸರ್ಕಾರ ಬದ್ಧವಾಗಿದೆ ಎಂದರು.

ರಾಜ್ಯದಲ್ಲಿ ಇ-ಖಾತಾ ವ್ಯವಸ್ಥೆ ಜಾರಿಗೆ ತರುವ ಮೂಲಕ ಮಹತ್ವದ ಬದಲಾವಣೆ ತರಲಾಗಿದೆ. ಬೆಂಗಳೂರಿನ 40 ಲಕ್ಷ ಆಸ್ತಿಗಳ ಪೈಕಿ ಈಗಾಗಲೇ 26 ಲಕ್ಷ ಆಸ್ತಿಗಳಿಗೆ ಇ-ಖಾತಾ ನೀಡಲಾಗಿದೆ. ಮನೆ ಬಾಗಿಲಿಗೆ ಇ-ಖಾತಾ ಸೇವೆ ಒದಗಿಸಿರುವುದು ದೇಶದಲ್ಲೇ ಮಾದರಿಯಾಗಿದೆ ಎಂದು ಹೇಳಿದರು.

ಅಪಾರ್ಟ್‌ಮೆಂಟ್‌ಗಳಲ್ಲಿ ಎಸ್‌ಟಿಪಿ, ಕುಡಿಯುವ ನೀರು ಸೇರಿದಂತೆ ಮೂಲಸೌಕರ್ಯಗಳನ್ನು ಸುಧಾರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಕೆಲವು ಡೆವಲಪರ್‌ಗಳಿಂದ ದಾಖಲೆಗಳ ವರ್ಗಾವಣೆಯಲ್ಲಿ ಉಂಟಾಗುವ ಸಮಸ್ಯೆಗಳನ್ನು ಪರಿಹರಿಸಲು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು.

ಕರ್ನಾಟಕ ಅಪಾರ್ಟ್‌ಮೆಂಟ್ (ಮಾಲಕತ್ವ ಮತ್ತು ನಿರ್ವಹಣೆ)–2026 ವಿಧೇಯಕದ ಕುರಿತು ಆಗಸ್ಟ್ 6ರವರೆಗೆ ಸಾರ್ವಜನಿಕರು ಹಾಗೂ ಅಪಾರ್ಟ್‌ಮೆಂಟ್ ಸಂಘಗಳು ತಮ್ಮ ಸಲಹೆ, ಅಭಿಪ್ರಾಯಗಳನ್ನು ಬೆಂಗಳೂರು ನಗರಾಭಿವೃದ್ಧಿ ಸಚಿವರಿಗೆ ಸಲ್ಲಿಸಬಹುದು ಎಂದು ಸಿಎಂ ಹೇಳಿದರು.

ನಗರದಲ್ಲಿ ಆಡಳಿತದ ವಿಕೇಂದ್ರೀಕರಣಕ್ಕಾಗಿ ಐದು ಕಾರ್ಪೊರೇಷನ್‌ಗಳನ್ನು ರಚಿಸಲಾಗಿದ್ದು, ಅಪಾರ್ಟ್‌ಮೆಂಟ್ ನಿವಾಸಿಗಳ ಸಮಸ್ಯೆಗಳನ್ನು ಶೀಘ್ರ ಬಗೆಹರಿಸಲು ಸರ್ಕಾರ ಬದ್ಧವಾಗಿದೆ ಎಂದರು.

ಬೆಂಗಳೂರಿನ ಬಹುಕಾಲದ ಸಮಸ್ಯೆಗಳ ಪರಿಹಾರಕ್ಕೆ ಸರ್ಕಾರ ಕಾರ್ಯಪ್ರವೃತ್ತವಾಗಿದ್ದು, ರಸ್ತೆ ಅಭಿವೃದ್ಧಿ, ಮಳೆನೀರು ಕೊಯ್ಲು ಕಡ್ಡಾಯಗೊಳಿಸುವುದು, ಹೈರೈಸ್ ಕಟ್ಟಡಗಳಿಗೆ ಉತ್ತೇಜನ, ಬೆಂಗಳೂರು ಬಿಸಿನೆಸ್ ಕಾರಿಡಾರ್ ನಿರ್ಮಾಣ ಸೇರಿದಂತೆ ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ತಿಳಿಸಿದರು.

ಮುಂಬೈ ಸೇರಿದಂತೆ ಇತರೆ ನಗರಗಳಿಗೆ ಹೋಲಿಸಿದರೆ ಬೆಂಗಳೂರಿನಲ್ಲಿ ಹೂಡಿಕೆ ಹಾಗೂ ಆಸ್ತಿ ಖರೀದಿ ಹೆಚ್ಚು ಅನುಕೂಲಕರವಾಗಿರುವುದರಿಂದ ವಿದೇಶಿ ಹೂಡಿಕೆದಾರರು ಬೆಂಗಳೂರಿನತ್ತ ಆಕರ್ಷಿತರಾಗಿದ್ದಾರೆ. ಎರಡನೇ ವಿಮಾನ ನಿಲ್ದಾಣ ನಿರ್ಮಾಣವೂ ನಗರದ ಅಭಿವೃದ್ಧಿಗೆ ಮತ್ತಷ್ಟು ಉತ್ತೇಜನ ನೀಡಲಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಚಿವರಾದ ಕೃಷ್ಣ ಬೈರೇಗೌಡ, ಬೈರತಿ ಸುರೇಶ್, ಕೆ.ಜೆ. ಜಾರ್ಜ್, ಬಿಡಿಎ ಅಧ್ಯಕ್ಷ ಎನ್.ಎ. ಹ್ಯಾರಿಸ್ ಹಾಗೂ ಅಪಾರ್ಟ್‌ಮೆಂಟ್ ಸಂಘಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News