ಬೆಂಗಳೂರು ದಕ್ಷಿಣ ಶೈಕ್ಷಣಿಕ ಜಿಲ್ಲೆಯನ್ನು ‘ಬೆಂಗಳೂರು ಕೇಂದ್ರ ಶೈಕ್ಷಣಿಕ ಜಿಲ್ಲೆ’ಯನ್ನಾಗಿ ಆದೇಶ
ಬೆಂಗಳೂರು : ರಾಜ್ಯ ಸರಕಾರವು ರಾಮನಗರ ಜಿಲ್ಲೆಯ ಹೆಸರನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣ ಮಾಡಿರುವ ಹಿನ್ನೆಲೆಯಲ್ಲಿ, ಶಾಲಾ ಶಿಕ್ಷಣ ಇಲಾಖೆಯ ಪ್ರಸ್ತುತ ಬೆಂಗಳೂರು ದಕ್ಷಿಣ ಶೈಕ್ಷಣಿಕ ಜಿಲ್ಲೆಯ ಹೆಸರನ್ನು ಆಡಳಿತಾತ್ಮಕ ದೃಷ್ಟಿಯಿಂದ ‘ಬೆಂಗಳೂರು ಕೇಂದ್ರ ಶೈಕ್ಷಣಿಕ ಜಿಲ್ಲೆ’ ಎಂದು ಮರು ನಾಮಕರಣ ಮಾಡಿ ಸರಕಾರ ಆದೇಶಿಸಿದೆ.
ಕಂದಾಯ ಇಲಾಖೆಯ ಅಧಿಸೂಚನೆಯನ್ವಯ ‘ರಾಮನಗರ’ ಜಿಲ್ಲೆಯ ಹೆಸರನ್ನು ‘ಬೆಂಗಳೂರು ದಕ್ಷಿಣ’ ಜಿಲ್ಲೆ ಎಂದು ಮರುನಾಮಕರಣ ಮಾಡಿರುವುದರಿಂದ, ಇನ್ನು ಮುಂದೆ ಎಲ್ಲಾ ಅಧಿಕೃತ ಪತ್ರ ವ್ಯವಹಾರಗಳು, ಸರಕಾರಿ ಆದೇಶಗಳು, ಅಧಿಸೂಚನೆಗಳು, ಅಧಿಕೃತ ದಾಖಲೆಗಳು ಹಾಗೂ ಇಲಾಖೆಯ ಎಲ್ಲಾ ತಂತ್ರಾಂಶಗಳಲ್ಲಿ ಬೆಂಗಳೂರು ದಕ್ಷಿಣ ಜಿಲ್ಲೆ ಎಂಬ ಹೆಸರನ್ನೇ ಕಡ್ಡಾಯವಾಗಿ ಬಳಸಬೇಕು ಎಂದು ಆದೇಶ ತಿಳಿಸಿದೆ.
ಆದೇಶ ಹೊರಡಿಸಿದ ದಿನಾಂಕದಿಂದಲೇ ಶಾಲಾ ಶಿಕ್ಷಣ ಇಲಾಖೆಯ ಪ್ರಸ್ತುತ ಬೆಂಗಳೂರು ದಕ್ಷಿಣ ಶೈಕ್ಷಣಿಕ ಜಿಲ್ಲೆಯನ್ನು ಬೆಂಗಳೂರು ಕೇಂದ್ರ ಶೈಕ್ಷಣಿಕ ಜಿಲ್ಲೆ ಎಂದು ಹಾಗೂ ರಾಮನಗರ ಜಿಲ್ಲೆಯ ಹೆಸರನ್ನು ‘ಬೆಂಗಳೂರು ದಕ್ಷಿಣ’ ಜಿಲ್ಲೆ ಎಂದು ಪರಿಗಣಿಸಬೇಕು ಎಂದು ತಿಳಿಸಿದೆ.
ಇನ್ನು ಮುಂದೆ ಶಾಲಾ ಶಿಕ್ಷಣ ಇಲಾಖೆಯ ಎಲ್ಲ ಕಚೇರಿಗಳು ಹಾಗೂ ಇಲಾಖೆಯ ಎಲ್ಲ ತಂತ್ರಾಂಶಗಳು, ವೆಬ್‍ಸೈಟ್‍ಗಳು, ದತ್ತಾಂಶ ನಿರ್ವಹಣಾ ವ್ಯವಸ್ಥೆಗಳಲ್ಲಿ, ಅಧಿಕೃತ ವತ್ರ ವ್ಯವಹಾರಗಳು, ಸರಕಾರಿ ಆದೇಶಗಳು, ಅಧಿಸೂಚನೆಗಳು, ಜ್ಞಾಪನೆಗಳು, ದಾಖಲೆಗಳು, ವರದಿಗಳು, ಮುದ್ರಿತ ನಮೂನೆಗಳು ಹಾಗೂ ಇತರೆ ಎಲ್ಲ್ಲ ಅಧಿಕೃತ ದಾಖಲಾತಿಗಳಲ್ಲಿ ಬೆಂಗಳೂರು ಕೇಂದ್ರ ಶೈಕ್ಷಣಿಕ ಜಿಲ್ಲೆ ಎಂಬ ಹೆಸರನ್ನೇ ಕಡ್ಡಾಯವಾಗಿ ಬಳಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.