ಅಧಿಕಾರಿಗಳ ಮೇಲೆ ಹಲ್ಲೆ ನಡೆಸುವ ಯಾರನ್ನೂ ಸುಮ್ಮನೆ ಬಿಡುವುದಿಲ್ಲ : ಕೃಷ್ಣಬೈರೇಗೌಡ ಆಕ್ರೋಶ

Update: 2026-07-21 22:45 IST

ಬೆಂಗಳೂರು  : ಕಾನೂನು ಪ್ರಕಾರವಾಗಿ ಸಾರ್ವಜನಿಕ ಕರ್ತವ್ಯದಲ್ಲಿರುವ ಸರಕಾರಿ ಅಧಿಕಾರಿಗಳ ಮೇಲೆ ಹಲ್ಲೆ ನಡೆಸುವ ಯಾರನ್ನೂ ನಾವು ಬಿಡುವುದಿಲ್ಲ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಭೈರೇಗೌಡ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಂಗಳವಾರ ಹೊಸದಿಲ್ಲಿಯಲ್ಲಿ ಶಿವಾಜಿನಗರದಲ್ಲಿ ಜಿಬಿಎ ಅಧಿಕಾರಿಗಳ ಮೇಲಿನ ಹಲ್ಲೆ ಘಟನೆಯ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಕೃಷ್ಣ ಭೈರೇಗೌಡ, ಈ ಪ್ರಕರಣದಲ್ಲಿ ಪ್ರಮುಖ ಆರೋಪಿ ಬಸವರಾಜ್ ಪಡುಕೋಟೆ ಎಂಬ ವ್ಯಕ್ತಿ ಮೇಲ್ನೋಟಕ್ಕೆ ಇಂತಹ ದಂಧೆಯಲ್ಲಿ ತೊಡಗಿರುವಂತೆ ಕಂಡುಬಂದಿದ್ದು, ಆತನ ವಿರುದ್ಧ ಗೂಂಡಾ ಪ್ರಕರಣ ದಾಖಲಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.

ಸುರಕ್ಷಿತ ಪಾದಚಾರಿ ಮಾರ್ಗ(ಫುಟ್‍ಪಾತ್) ಅಭಿಯಾನದಲ್ಲಿ ಸರಕಾರಿ ಪ್ರತಿನಿಧಿಗಳ ಕೆಲಸಕ್ಕೆ ಅಡ್ಡಿಪಡಿಸಿ ಅವರ ಮೇಲೆ ಹಲ್ಲೆ ನಡೆಸಿದ ಪ್ರತಿಯೊಬ್ಬರನ್ನೂ ಬಂಧಿಸಲಾಗುವುದು. ಈ ಬಗ್ಗೆ ಪೊಲೀಸ್ ಆಯುಕ್ತರು ಮತ್ತು ಜಿಬಿಎ ಅಧಿಕಾರಿಗಳಿಗೆ ನಾನು ಈಗಾಗಲೇ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ ಎಂದು ಕೃಷ್ಣ ಬೈರೇಗೌಡ ಹೇಳಿದರು.

ಹಲ್ಲೆ ಮಾಡಿರುವವರು ಜೀವನೋಪಾಯಕ್ಕಾಗಿ ಕಷ್ಟಪಟ್ಟು ದುಡಿಯುವ ಬಡಜನರಲ್ಲ. ಇವರು ಸಮಾಜಘಾತುಕ ಶಕ್ತಿಗಳು. ಸುಪ್ರೀಂ ಕೋರ್ಟ್ ನಿರ್ದೇಶನವನ್ನು ಜಾರಿಗೊಳಿಸುವಾಗ ಸರಕಾರಿ ಪ್ರತಿನಿಧಿಗಳ ಮೇಲೆ ಹಲ್ಲೆ ನಡೆಸುವುದು ಕಾನೂನಿನ ಗಂಭೀರ ಉಲ್ಲಂಘನೆಯಾಗಿದೆ. ಕಾನೂನಿನಂತೆ ಸಾರ್ವಜನಿಕ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳ ಪರವಾಗಿ ನಾವು ದೃಢವಾಗಿ ನಿಲ್ಲುತ್ತೇವೆ ಎಂದು ಕೃಷ್ಣ ಬೈರೇಗೌಡ ತಿಳಿಸಿದರು.

‘ಸರಕಾರ ಏನೂ ಮಾಡದೇ ಇದ್ದರೂ ಏನೋ ಮಾಡುತ್ತಿದ್ದೇವೆಂದು ತೋರಿಸಿಕೊಳ್ಳಲು ಹೊರಟಿದೆ. ಪಾದಚಾರಿ ರಸ್ತೆಯಲ್ಲಿನ ಅಂಗಡಿಗಳ ತೆರವು ಕಾರ್ಯಚರಣೆಗೆ ವೈಜ್ಞಾನಿಕ ನೀತಿ ರೂಪಿಸಿಲ್ಲ. ಎಸ್‍ಒಪಿ ಇಲ್ಲದೇ ಸರಕಾರ ಬೇಕಾಬಿಟ್ಟಿಯಾಗಿ ನಡೆದುಕೊಂಡರೆ ಇಂತಹ ಘಟನೆಗಳು ನಡೆಯುತ್ತವೆ. ಶಿವಾಜಿನಗರದ ವೋಟ್ ಬ್ಯಾಂಕ್ ರಾಜಕಾರಣಕ್ಕೆ ಅಮಾಯಕ ಅಧಿಕಾರಿಗಳ ಜತೆಗೆ ಸರಕಾರ ಚೆಲ್ಲಾಟವಾಡುತ್ತಿದೆ. ಇದು ಯಾವ ರೀತಿಯ ಪಾದಚಾರಿ ತೆರವು ಕಾರ್ಯಾಚರಣೆ ಸಿಎಂ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವರೇ?’

-ಬಿ.ವೈ.ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷ

......................

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News