ಕನ್ನಡ ಪದವೀಧರ ಶಿಕ್ಷಕರ ಹುದ್ದೆ ಸೃಷ್ಠಿಸಿ: ಪ್ರೊ.ಬರಗೂರು ರಾಮಚಂದ್ರಪ್ಪ
ಬೆಂಗಳೂರು : ಇತ್ತೀಚೆಗೆ ಸರಕಾರವು ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ನೇಮಕಾತಿ ಸಂಬಂಧ ಗೆಜೆಟ್ ಪ್ರಕಟಣೆ ಮಾಡಿದ್ದು, ಅದರಲ್ಲಿ ಕನ್ನಡ ಅಧ್ಯಾಪಕರ ಪ್ರಸ್ತಾಪವೇ ಇಲ್ಲ. ಆದುದರಿಂದ ಕನ್ನಡ ಪದವೀಧರ ಅಧ್ಯಾಪಕರ ಹುದ್ದೆಗಳನ್ನು ಸೃಷ್ಟಿಸಿ, ನೇಮಕಾತಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಹಿರಿಯ ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ಒತ್ತಾಯಿಸಿದ್ದಾರೆ.
ಮಂಗಳವಾರ ಈ ಕುರಿತು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರಿಗೆ ಪತ್ರ ಬರೆರುವ ಬರಗೂರು ರಾಮಚಂದ್ರಪ್ಪ, ಗೆಜೆಟ್ ಪ್ರಕಟಣೆಯ ಪ್ರಕಾರ ಪ್ರಾಥಮಿಕ ಶಾಲೆಗಳಿಗೆ 8,500 ಪದವಿ ಪಡೆದ ಅಧ್ಯಾಪಕರನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಆಂಗ್ಲ ಭಾಷಾ ಪಠ್ಯ ಬೋಧನೆಗೆ ಪದವಿಯಲ್ಲಿ ಆಂಗ್ಲ ಭಾಷಾ ಸಾಹಿತ್ಯವನ್ನು ಐಚ್ಛಿಕ ವಿಷಯವಾಗಿ ಕಲಿತ ಪದವೀಧರರು ಅರ್ಜಿ ಹಾಕಲು ಅವಕಾಶ ಕಲ್ಪಿಸಲಾಗಿದೆ. ಆದರೆ ಕನ್ನಡ ಭಾಷಾ ಪಠ್ಯ ಬೋಧನೆಗೆ ಕನ್ನಡ ಭಾಷಾ ಸಾಹಿತ್ಯವನ್ನು ಐಚ್ಛಿಕವಾಗಿ ಅಧ್ಯಯನ ಮಾಡಿದ ಪದವೀಧರರರಿಗೆ ಕನ್ನಡ ಅಧ್ಯಾಪಕರಾಗಲು ಅವಕಾಶವಿಲ್ಲದಂತಾಗಿದೆ. ಯಾಕೆಂದರೆ ಕನ್ನಡ ಅಧ್ಯಾಪಕರ ಹುದ್ದೆಗಳಿಗೆ ಅವಕಾಶವನ್ನೇ ಕಲ್ಪಿಸಿಲ್ಲ ಎಂದು ತಿಳಿಸಿದ್ದಾರೆ.
ಶಿಕ್ಷಣ ಇಲಾಖೆಯ ದೃಷ್ಟಿಯಲ್ಲಿ ಕನ್ನಡ ಬೋಧನೆ ಮಾಡಲು ಕನ್ನಡ ಭಾಷಾ ಅಧ್ಯಾಪಕರು ಬೇಕಾಗಿಲ್ಲ. ಸಮಾಜ ಶಾಸ್ತ್ರದ ಅಧ್ಯಾಪಕರು ಕನ್ನಡ ಭಾಷಾ ವಿಷಯಗಳನ್ನೂ ಬೋಧನೆ ಮಾಡುತ್ತಾರೆ. ಆಂಗ್ಲ ಭಾಷೆಗೆ ಆಂಗ್ಲ ಭಾಷಾ ಪದವೀಧರ ಅಧ್ಯಾಪಕರು ಬೇಕು. ಸಮಾಜ ಶಾಸ್ತ್ರಕ್ಕೆ ಸಮಾಜ ಶಾಸ್ತ್ರಗಳ ಪದವೀಧರ ಅಧ್ಯಾಪಕರು ಬೇಕು. ಕನ್ನಡ ಭಾಷಾ ವಿಷಯಗಳ ಬೋಧನೆಗೆ ಕನ್ನಡ ಭಾಷಾಪದವೀಧರ ಅಧ್ಯಾಪಕರು ಬೇಡ. ಇದು ಯಾವ ತತ್ವ? ಯಾವ ತರ್ಕ? ಕನ್ನಡ ದ್ರೋಹ ಎಂಬುದೇ ಉತ್ತರ ಎಂದು ಅವರು ಹೇಳಿದ್ದಾರೆ.
ಕನ್ನಡ ಭಾಷಾ ವಿಷಯ, ಕನ್ನಡ ಅಧ್ಯಾಪಕರ ವಿಷಯದಲ್ಲಿ 2017, 2019 ಮತ್ತು 2022ರ ನೇಮಕಾತಿಯಲ್ಲೂ ಈ ದ್ರೋಹವನ್ನು ಮಾಡಲಾಗಿದೆ. ಆದರೆ ಈ ಮೂರು ನೇಮಕಾತಿಗಳ ಮುಂಚಿನ ನೇಮಕಾತಿಗಳಲ್ಲಿ ಕನ್ನಡ ಭಾಷಾ ಪದವೀಧರ ಶಿಕ್ಷಕರ ಹುದ್ದೆಗಳಿಗೆ ಪ್ರತ್ಯೇಕ ಸ್ಥಾನವನ್ನು ಕಲ್ಪಿಸಲಾಗಿತ್ತು. ಆದರೆ ಇತ್ತೀಚೆಗೆ ಕೈಬಿಡಲಾಗಿದೆ. ಕನ್ನಡ ಮಾಧ್ಯಮದ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿರುವುದು ಇದಕ್ಕೆ ಕಾರಣವೆಂದು ಅಧಿಕಾರಿಗಳು ಹೇಳುತ್ತಾರಂತೆ. ಕನ್ನಡ ಮಾಧ್ಯಮವನ್ನೂ ಒಳಗೊಂಡಂತೆ ಎಲ್ಲಾ ಮಾತೃ ಭಾಷಾ ಮಾಧ್ಯಮಗಳಲ್ಲೂ ಕನ್ನಡವನ್ನು ಒಂದು ಭಾಷೆಯಾಗಿ ಕಲಿಸಲು ಅವಕಾಶವಿರುವಾಗ ಸಂಖ್ಯೆ ಕಡಿಮೆಯಾಗಿದೆಯೆಂಬ ಕಾರಣವೇ ಅಪ್ರಸ್ತುತವಾಗುತ್ತದೆ ಎಂದು ಬರಗೂರು ರಾಮಚಂದ್ರಪ್ಪ ತಿಳಿಸಿದ್ದಾರೆ.
ಕರ್ನಾಟಕದಲ್ಲಿ ಕನ್ನಡ ಭಾಷಾ ಅಧ್ಯಾಪಕರಿಗೇ ಸ್ವತಂತ್ರ ಅಸ್ತಿತ್ವ ಇಲ್ಲವಾದರೆ ಇನ್ನೆಲ್ಲಿ ಇರುತ್ತದೆ? ಆದ್ದರಿಂದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ಕೂಡಲೇ ಮಧ್ಯೆ ಪ್ರವೇಶಿಸಿ ಕನ್ನಡ ಪದವೀಧರ ಆಧ್ಯಾಪಕರ ಹುದ್ದೆಗಳನ್ನು ಸೃಷ್ಟಿಸಿ. ನೇಮಕಾತಿ ಮಾಡಿಕೊಳ್ಳಲು ಸೂಕ್ತ ನಿರ್ದೇಶನ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.