ಬಿಡದಿ ಟೌನ್‍ಶಿಪ್ ಯೋಜನೆ ಕಾನೂನು ಬಾಹಿರ : ನ್ಯಾ.ಗೋಪಾಲಗೌಡ

Update: 2026-07-23 22:36 IST


ರಾಮನಗರ : ಬಿಡದಿ ಟೌನ್‍ಶಿಪ್ ಯೋಜನೆಗಾಗಿ ಸರಕಾರ ಹೊರಡಿಸಿರುವ ಪ್ರಾಥಮಿಕ ಅಧಿಸೂಚನೆಯು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಡಿಯಲ್ಲಿದೆ. ಬಿಡದಿಯು ರಾಮನಗರ ಅಭಿವೃದ್ಧಿ ಪ್ರಾಧಿಕಾರದಡಿಯಲ್ಲಿ ಬರುತ್ತದೆಯೇ ಹೊರತು, ಜಿಬಿಎ ವ್ಯಾಪ್ತಿಗೆ ಬರುವುದಿಲ್ಲ. ಹಾಗಾಗಿ ಈ ಅಧಿಸೂಚನೆಯು ಸಂಪೂರ್ಣ ಕಾನೂನು ಬಾಹಿರ. ಅಷ್ಟೇ ಅಲ್ಲದೇ, ಸುಪ್ರೀಂ ಕೋರ್ಟ್‍ನ ಹಲವು ತೀರ್ಪುಗಳಿಗೂ ತದ್ವಿರುದ್ಧವಾಗಿದೆ ಎಂದು ಸುಪ್ರೀಂ ಕೋರ್ಟ್‍ನ ನಿವೃತ್ತ ನ್ಯಾಯಮೂರ್ತಿ ವಿ. ಗೋಪಾಲಗೌಡರು ತಿಳಿಸಿದ್ದಾರೆ.

ಗುರವಾರ ಬೈರಮಂಗಲ ವೃತ್ತದಲ್ಲಿ ಸಂಯುಕ್ತ ಹೋರಾಟ-ಕರ್ನಾಟಕ ಮತ್ತು ಬೈರಮಂಗಲ, ಕಂಚುಗಾರನಹಳ್ಳಿ ಗ್ರಾ.ಪಂ.ಗಳ ರೈತರ ಭೂ ಹಿತರಕ್ಷಣಾ ಸಂಘ ಆಯೋಜಿಸಿದ್ದ ಸಾರ್ವಜನಿಕ ಅಹವಾಲು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಿಡದಿಯ ಬೈರಮಂಗಲ ಮತ್ತು ಕಂಚುಗಾರನಹಳ್ಳಿ ರೈತರ ಭೂಸ್ವಾಧಿನ ಪ್ರಕ್ರಿಯೆಯು ಸಂವಿಧಾನ ಪರವಾಗಿ, ಶಾಸನ ಬದ್ದವಾಗಿ, ಸುಪ್ರೀಂಕೋರ್ಟ್‍ನ ತೀರ್ಪುಗಳ ಪರವಾಗಿ ಇದೆಯೇ? ಎನ್ನುವುದನ್ನು ರೈತರಿಗೆ ಅರ್ಥ ಪಡಿಸಲು ರೈತನ ಮಗನಾಗಿ ಬಂದಿದ್ದೇನೆ ಎಂದರು.

ಕೆಲವು ವಿಷಯಗಳನ್ನು ಸಂವಿಧಾನ, ಕಾನೂನು, ಸುಪ್ರೀಂಕೋರ್ಟ್ ಮೇಲೆ ರೈತರಿಗೆ ಭಯ ಇದ್ದರೆ ಅದನ್ನು ಹೋಗಲಾಡಿಸಲು ಬಂದಿದ್ದೇನೆ. ಒಂದಿಷ್ಟು ರೈತರು ಸರಕಾರಕ್ಕೆ ಭೂಮಿ ಕೊಡಲು ಮುಂದಾದ ಮಾತ್ರಕ್ಕೆ ಸರಕಾರ ತಕ್ಷಣ ಭೂಸ್ವಾಧೀನ ಮಾಡಲು ಆಗುವುದಿಲ್ಲ. ಒಂದು ವೇಳೆ ಹಾಗೆ ತಿಳಿದುಕೊಂಡಿದ್ದರೆ ಅವರ ಮೂರ್ಖತನ. ಈ ದೇಶ ಪ್ರಜಾಪ್ರಭುತ್ವದ ರಾಷ್ಟ್ರ. ರಾಜಕೀಯ ಗ್ರಂಥ ಸಂವಿಧಾನ. ಕೆಲವು ರಾಜಕೀಯ ಪಕ್ಷಗಳು ಸಂವಿಧಾನ ರಕ್ಷಣೆ ಮಾಡಲು ಹೊರಟಿದ್ದಾರೆ. ಆದರೆ, ಅದರದೇ ಪಕ್ಷದವರು ರಾಜ್ಯದಲ್ಲಿ ಸಂವಿಧಾನ ವಿರೋಧವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಗೋಪಾಲಗೌಡರು ಆಕ್ರೋಶ ವ್ಯಕ್ತಪಡಿಸಿದರು.

ಯಾವುದು ಈ ಬಿಡದಿ ಟೌನ್‍ಶಿಪ್, ಯಾರು ಮಾಡಿದ್ದು? ಯಾವ ಕಾಯ್ದೆಯೊಳಗೆ ಮಾಡಿದ್ದೀರಿ? ಸಂವಿಧಾನ ಬದ್ದವಾಗಿ ನಡೆದುಕೊಳ್ಳುವುದು ಮುಖ್ಯ. ನಾವ್ಯಾರು ಸತ್ತಿಲ್ಲ, ನ್ಯಾಯಾಲಯವೂ ಸತ್ತಿಲ್ಲ. ನ್ಯಾಯ ವಿತರಣೆ ಯಾವಾಗಲೂ ಸಜೀವವಾಗಿ ಇರುತ್ತದೆ. ಪ್ರಜಾಪ್ರಭುತ್ವ ಎಂದರೆ ಬಹುಪಾಲು ಇರುವ ಜನರ ಪರವಾಗಿ ಇರಬೇಕು. ಈ ಬಹುಪಾಲು ಮೂಲಕ ಸರಕಾರ ನಡೆಸಲು ಸಾಧ್ಯವಾಗುತ್ತದೆ. ಆದರೆ, ಶೇ.66ರಷ್ಟು ಕೃಷಿ ಮಾಡುವ ರೈತರಿಗೆ ರಕ್ಷಣೆ ಯಾಕೆ ಮಾಡುವುದಿಲ್ಲ. ರೈತರ ವಿಚಾರಕ್ಕೆ ಕೈ ಹಾಕಿದರೆ ನಾವು ನಿಮ್ಮನ್ನು ಹಿಮ್ಮೆಟ್ಟಿಸುತ್ತೇವೆ ಎಂದು ಗೋಪಾಲಗೌಡರು ಎಚ್ಚರಿಕೆ ನೀಡಿದರು.

ಕೃಷಿ ತಜ್ಞ ಡಾ.ಪ್ರಕಾಶ್ ಕಮ್ಮರಡಿ ಮಾತನಾಡಿ, ಸಭೆಯಲ್ಲಿ ಶೇ.90ರಷ್ಟು ರೈತ ಮಹಿಳೆಯರು ಭಾಗವಹಿಸಿರುವುದು ಸಂತೋಷದ ಸಂಗತಿ. ಇದೀಗ ನ್ಯಾಯ, ಸತ್ಯ, ಧರ್ಮವನ್ನು ಹುಡುಕುವ ಸಮಯ. ಸತ್ಯ ಸುದ್ದಿಯ ಕ್ರಾಂತಿಯ ಬದಲಿಗೆ, ಸುಳ್ಳಿನ ಕ್ರಾಂತಿ ಆಗುತ್ತಿದೆ. ಬಹುಪಾಲು ಜನರಿಗೆ ಭೂಮಿ ಕೊಡಲು ಇಷ್ಟ ಇಲ್ಲ ಎನ್ನುವುದು ಇದಕ್ಕೂ ಮೊದಲು 3-4 ಸರಿ ಭೇಟಿ ನೀಡಿದಾಗಲೇ ಅರ್ಥವಾಗಿದೆ. ಆದರೆ, ಇತ್ತೀಚಿಗೆ ಸುದ್ದಿಗಳಲ್ಲಿ ಟೌನ್‍ಶಿಪ್‍ಗೆ ಶೇ.70ರಷ್ಟು ಭೂಮಿ ಕೊಡಲು ಸಿದ್ದರಿದ್ದಾರೆ ಎಂದು ಬಂದಿದ್ದು, ಶುದ್ದ ಸುಳ್ಳು. ಹೋರಾಟದ ಹಿಂದೆ ಯಾವ ರಾಜಕೀಯ ವ್ಯಕ್ತಿಗಳೂ ಇಲ್ಲ ಎನ್ನುವುದು ಇಂದು ಮತ್ತೊಮ್ಮೆ ಸಾಭೀತಾಗಿದೆ ಎಂದರು.

ಡಾ.ವಾಸವಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಸಂಯುಕ್ತ ಹೋರಾಟ ಕರ್ನಾಟಕ ಪದಾಧಿಕಾರಿಗಳಾದ ಬಡಗಲಪುರ ನಾಗೇಂದ್ರ, ನೂರ್ ಶ್ರೀಧರ್, ಯಶವಂತ, ಸ್ಥಳೀಯ ರೈತ ಮುಖಂಡರಾದ ನಾಗರಾಜು, ಪ್ರಕಾಶ್, ಶಾಂಭವಿ ಸೇರಿದಂತೆ ಹಲವರು ಭಾಗವಹಿಸಿದ್ದರು.



Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News