ಉದ್ಯಮದ ಸಹಭಾಗಿತ್ವದಿಂದ ಭಾರತವನ್ನು ಎಐ ಆಧಾರಿತ ಉತ್ಪನ್ನ ರಾಷ್ಟ್ರವನ್ನಾಗಿ ರೂಪಿಸೋಣ : ಸಚಿವ ಪ್ರಿಯಾಂಕ್ ಖರ್ಗೆ

Update: 2026-07-23 21:40 IST

ಬೆಂಗಳೂರು : ಭಾರತವನ್ನು ಕೃತಕ ಬುದ್ಧಿಮತ್ತೆ(ಎಐ) ಆಧಾರಿತ ಜಾಗತಿಕ ಉತ್ಪನ್ನ ರಾಷ್ಟ್ರವನ್ನಾಗಿ ರೂಪಿಸಲು ಸರಕಾರ, ಉದ್ಯಮ ಮತ್ತು ಶೈಕ್ಷಣಿಕ ಸಂಸ್ಥೆಗಳು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕಾಗಿದೆ ಎಂದು ಗೃಹ ಹಾಗೂ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಕರೆ ನೀಡಿದ್ದಾರೆ.

ಗುರುವಾರ ನಗರದಲ್ಲಿ ನಡೆದ ‘22ನೇ ಸಿಐಐ ಇನೋವೇಷನ್ ಸಮ್ಮೇಳನ’ದಲ್ಲಿ ಮಾತನಾಡಿದಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜ್ಯವು ದೇಶದ ಮಾಹಿತಿ ತಂತ್ರಜ್ಞಾನ ಹಾಗೂ ನವೋದ್ಯಮ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದ್ದು, ಮುಂದಿನ ಹಂತದ ಬೆಳವಣಿಗೆಯು ಕೇವಲ ತಂತ್ರಜ್ಞಾನ ಅಭಿವೃದ್ಧಿಗೆ ಸೀಮಿತವಾಗಿರದೆ, ಪ್ರತಿಭೆ, ಸಂಶೋಧನೆ, ಉದ್ಯಮಶೀಲತೆ, ಜಾಗತಿಕ ಸಹಭಾಗಿತ್ವ ಮತ್ತು ಜವಾಬ್ದಾರಿಯುತ ಕೃತಕ ಬುದ್ಧಿಮತ್ತೆಯ ಬಳಕೆಯ ಮೇಲೆ ಅವಲಂಬಿತವಾಗಿರಲಿದೆ ಎಂದರು.

ಭಾರತವನ್ನು ಎಐ ಆಧಾರಿತ ಉತ್ಪನ್ನ ರಾಷ್ಟ್ರವನ್ನಾಗಿ ರೂಪಿಸಲು ಸರಕಾರ, ಉದ್ಯಮ ಮತ್ತು ಶಿಕ್ಷಣ ಸಂಸ್ಥೆಗಳು ಪ್ರತ್ಯೇಕವಾಗಿ ಕೆಲಸ ಮಾಡುವ ಕಾಲ ಮುಗಿದಿದೆ. ರಾಜ್ಯವು ಆರಂಭದಿಂದಲೂ ಸಹಭಾಗಿತ್ವದ ಮಾದರಿಯಲ್ಲಿ ನವೋದ್ಯಮವನ್ನು ಉತ್ತೇಜಿಸುತ್ತಿದೆ. ಸರಕಾರದ ಪಾತ್ರ ಕೇವಲ ನೀತಿಗಳನ್ನು ರೂಪಿಸುವುದಲ್ಲ, ಉದ್ಯಮ, ಸಂಶೋಧಕರು ಮತ್ತು ನವೋದ್ಯಮಿಗಳೊಂದಿಗೆ ಕೈಜೋಡಿಸಿ ಪ್ರತಿಭೆ, ಸಂಶೋಧನೆ, ಸ್ಟಾರ್ಟ್‍ಅಪ್‍ಗಳು ಹಾಗೂ ಜವಾಬ್ದಾರಿಯುತ ಎಐ ಬೆಳವಣಿಗೆಗೆ ಅನುಕೂಲಕರ ಪರಿಸರ ನಿರ್ಮಿಸುವುದಾಗಿದೆ ಎಂದು ಅವರು ತಿಳಿಸಿದರು.

ಸಂಶೋಧನಾ ಸಂಸ್ಥೆಗಳು, ವಿಶ್ವವಿದ್ಯಾಲಯಗಳು ಮತ್ತು ಕೈಗಾರಿಕೆಗಳ ನಡುವಿನ ಸಹಯೋಗವನ್ನು ಮತ್ತಷ್ಟು ಬಲಪಡಿಸುವ ಮೂಲಕ ಉತ್ಕೃಷ್ಟತಾ ಕೇಂದ್ರಗಳ ಸಾಮರ್ಥ್ಯ ವನ್ನು ವಿಸ್ತರಿಸಲಾಗುತ್ತಿದೆ. ಪ್ರಸ್ತಾವಿತ ಎಐ ವಿಶ್ವವಿದ್ಯಾಲಯದ ಮೂಲಕ ಜವಾಬ್ದಾರಿಯುತ ಎಐ ಶಿಕ್ಷಣ, ಸಂಶೋಧನೆ ಹಾಗೂ ಕೈಗಾರಿಕೆಯ ಅಗತ್ಯಗಳಿಗೆ ಹೊಂದುವ ಪಠ್ಯಕ್ರಮಗಳನ್ನು ಅಭಿವೃದ್ಧಿಪಡಿಸಲು ರಾಜ್ಯ ಸರಕಾರ ಆದ್ಯತೆ ನೀಡುತ್ತಿದೆ ಎಂದು ಅವರು ತಿಳಿಸಿದರು.

ಉದ್ಯಮ ವಲಯವು ಕೇವಲ ಹೂಡಿಕೆ ಮಾಡುವುದಕ್ಕಷ್ಟೇ ಸೀಮಿತವಾಗದೆ, ಸ್ಟಾರ್ಟ್‍ಅಪ್‍ಗಳಿಗೆ ಮಾರ್ಗದರ್ಶನ ನೀಡುವುದು, ಶಿಕ್ಷಣ ಸಂಸ್ಥೆಗಳನ್ನು ದತ್ತು ಪಡೆದು ಕೌಶಲ್ಯಾಭಿವೃದ್ಧಿಗೆ ಕೈಜೋಡಿಸುವುದು, ಉತ್ಕೃಷ್ಟತಾ ಕೇಂದ್ರಗಳಲ್ಲಿ ಪಾಲುದಾರರಾಗುವುದು ಹಾಗೂ ಸಂಶೋಧನೆ ಮತ್ತು ಉತ್ಪನ್ನ ಅಭಿವೃದ್ಧಿಯಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದು ಸಚಿವರು ಕರೆ ನೀಡಿದರು.

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News