ವಿದ್ಯಾರ್ಥಿನಿಲಯಗಳಲ್ಲಿ ವಾರ್ಡನ್‌ಗಳ ಕೊರತೆ; ಡಾ.ಕೆ.ಟಿ.ತಿಪ್ಪೇಸ್ವಾಮಿ ಸರಕಾರಕ್ಕೆ ಪತ್ರ
ಸಾಂದರ್ಭಿಕ ಚಿತ್ರ | PC : AI
ಬೆಂಗಳೂರು : ರಾಜ್ಯದ ವಿವಿಧ ಇಲಾಖೆಗಳ ಅಧೀನದಲ್ಲಿರುವ ವಿದ್ಯಾರ್ಥಿನಿಲಯಗಳಲ್ಲಿ ವಾರ್ಡನ್‌ಗಳ ಕೊರತೆಯನ್ನು ನಿವಾರಿಸಿ, ಮಕ್ಕಳ ಸುರಕ್ಷತೆ ಹಾಗೂ ಹಕ್ಕುಗಳ ರಕ್ಷಣೆಗೆ ಸಮಗ್ರ ಕ್ರಮಗಳನ್ನು ಕೈಗೊಳ್ಳುವಂತೆ ಸಂಬಂಧಿತ ಇಲಾಖೆಗಳಿಗೆ ನಿರ್ದೇಶನ ನೀಡಬೇಕೆಂದು ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ನಿಕಟಪೂರ್ವ ಸದಸ್ಯ ಡಾ.ಕೆ.ಟಿ.ತಿಪ್ಪೇಸ್ವಾಮಿ ಸರಕಾರಕ್ಕೆ ಪತ್ರ ಬರೆದಿದ್ದಾರೆ.
ಗುರುವಾರ ಸರಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಅವರಿಗೆ ಪತ್ರ ಬರೆದಿರುವ ಅವರು, ಮಕ್ಕಳಿಗೆ ಸುರಕ್ಷಿತ, ಘನತೆಯುತ ಮತ್ತು ಆರೈಕೆಯ ವಾತಾವರಣ ಕಲ್ಪಿಸುವುದು ಸರಕಾರದ ಸಾಂವಿಧಾನಿಕ ಹಾಗೂ ಕಾನೂನು ಬದ್ಧ ಜವಾಬ್ದಾರಿಯಾಗಿದೆ. ಆದ್ದರಿಂದ ಮಕ್ಕಳ ಕಲ್ಯಾಣ ಸುರಕ್ಷತೆಗೆ ಸಂಬಂಧಿಸಿದಂತೆ ಸರಕಾರ ಕೂಡಲೇ ಕ್ರಮ ವಹಿಸಬೇಕು ಎಂದಿದ್ದಾರೆ.
ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗಳ ಅಧೀನದಲ್ಲಿರುವ ಅನೇಕ ವಿದ್ಯಾರ್ಥಿನಿಲಯಗಳಲ್ಲಿ ಮೂರು ಅಥವಾ ನಾಲ್ಕು ವಿದ್ಯಾರ್ಥಿನಿಲಯಗಳಿಗೆ ಒಬ್ಬರೇ ವಾರ್ಡನ್‌ರನ್ನು ನಿಯೋಜಿಸಿರುವುದು ಕಂಡುಬಂದಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ವಿದ್ಯಾರ್ಥಿಗಳ ದೈಹಿಕ, ಮಾನಸಿಕ ಹಾಗೂ ಸಾಮಾಜಿಕ ಯೋಗಕ್ಷೇಮವನ್ನು ಬಲಪಡಿಸಲು ಕೌನ್ಸೆಲಿಂಗ್ ಮತ್ತು ಮಾನಸಿಕ ಆರೋಗ್ಯ ಬೆಂಬಲ ವ್ಯವಸ್ಥೆಯನ್ನು ವಿಸ್ತರಿಸಬೇಕು. ಅದಕ್ಕಾಗಿ ಆಪ್ತ ಸಮಾಲೋಚಕರ ನೇಮಕಾತಿಗೆ ಕ್ರಮವಹಿಸಬೇಕು ಎಂದು ಕೆ.ಟಿ.ತಿಪ್ಪೇಸ್ವಾಮಿ ಪತ್ರದಲ್ಲಿ ತಿಳಿಸಿದ್ದಾರೆ.