ನಿಯಮ ಉಲ್ಲಂಘನೆ, ಲಂಚದ ಬೇಡಿಕೆ ಆರೋಪ; ಪಶುವೈದ್ಯಾಧಿಕಾರಿ ನೇಮಕಾತಿ ತಡೆಗೆ ಛಲವಾದಿ ನಾರಾಯಣಸ್ವಾಮಿ ಆಗ್ರಹ

Update: 2026-07-24 18:40 IST

ಬೆಂಗಳೂರು : ಕೆಪಿಎಸ್ಸಿಯಿಂದ ಪಶು ವೈದ್ಯಾಧಿಕಾರಿಗಳ ನೇಮಕಾತಿ ನಡೆದಿದ್ದು, ಇದರಲ್ಲಿ ಅಕ್ರಮದ ಆರೋಪ ಕೇಳಿಬಂದಿದೆ. ಹೀಗಾಗಿ ಸರಕಾರ ಕೂಡಲೇ ಆಯ್ಕೆ ಪಟ್ಟಿಯನ್ನು ತಡೆಹಿಡಿದು ಮರು ಪರೀಕ್ಷೆ ಮಾಡಬೇಕು ಎಂದು ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆಗ್ರಹಿಸಿದ್ದಾರೆ.

ಶುಕ್ರವಾರ ವಿಧಾನಸೌಧದಲ್ಲಿನ ತಮ್ಮ ಕೊಠಡಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸರಕಾರದ ಅಧಿಸೂಚನೆ ಉಲ್ಲಂಘಿಸಿ ಎಸ್‍ಸಿ-ಎಸ್‍ಟಿ ವರ್ಗಕ್ಕೆ ಮೀಸಲಾದ ಬ್ಯಾಕ್‍ಲಾಗ್ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಾಗಿದೆ. ಆಯ್ಕೆಯಾಗಲು 80 ಲಕ್ಷ ರೂ.ಗಳನ್ನು ನೀಡಲಾಗಿದೆ ಎಂಬ ಆರೋಪವಿದೆ. ಅಲ್ಲದೆ ಅಮಾನತು ಆಗಿರುವ ಅಧ್ಯಕ್ಷರು ಸ್ವಜನಪಕ್ಷಪಾತ ನಡೆಸಿರುವ ಆರೋಪಗಳಿವೆ. ಹೀಗಾಗಿ ನೇಮಕಾತಿಯನ್ನು ತಡೆಹಿಡಿಯಬೇಕು ಎಂದು ಒತ್ತಾಯಿಸಿದರು.

ಆಯೋಗವು 2024ರಲ್ಲಿ 400 ಹುದ್ದೆ ಭರ್ತಿಗೆ ಅಧಿಸೂಚನೆ ಹೊರಡಿಸಿತ್ತು. ಇದರಲ್ಲಿ 342 ಸಾಮಾನ್ಯ ಹಾಗೂ 58 ಬ್ಯಾಕ್‍ಲಾಗ್ ಹುದ್ದೆಗಳಿದ್ದವು. 58 ಬ್ಯಾಕ್‍ಲಾಗ್ ಹುದ್ದೆಗಳು ಎಸ್‍ಸಿ-ಎಸ್‍ಟಿ ವರ್ಗಕ್ಕೆ ಮೀಸಲಿದ್ದವು. 342 ಹುದ್ದೆಗಳಿಗೆ ಪರೀಕ್ಷೆ ಮತ್ತು ಸಂದರ್ಶನ ಮಾಡಬಹುದು. ಆದರೆ ಬ್ಯಾಕ್‍ಲಾಗ್ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ನಿಷೇಧಿಸಲಾಗಿದೆ ಎಂಬ 2025ರ ಆದೇಶ ಉಲ್ಲಂಘಿಸಿ ಸ್ಪರ್ಧಾತ್ಮಕ ಪರೀಕ್ಷೆಗೆ ಎಸ್‍ಟಿ/ಎಸ್‍ಟಿ ಅಭ್ಯರ್ಥಿಗಳನ್ನು ಒಳಪಡಿಸಿದ್ದಾರೆ ಎಂದು ಅವರು ದೂರಿದರು.

ಪ್ರಶ್ನೆ ಪತ್ರಿಕೆ ಸೋರಿಕೆ ಸಂಬಂಧ ದಿಲ್ಲಿ ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆಯನ್ನು ರಾಜಕೀಯ ಪಕ್ಷಗಳು ಹೈಜಾಕ್ ಮಾಡಿಕೊಂಡಿವೆ. ಪ್ರಶ್ನೆ ಪತ್ರಿಕೆ ಸೋರಿಕೆಯ ನಂತರ ಕೇಂದ್ರ ಸರಕಾರ ಅಗತ್ಯ ಕ್ರಮ ಕೈಗೊಂಡಿದೆ, ಮರುಪರೀಕ್ಷೆ ಆಗಿದ್ದು ಫಲಿತಾಂಶ ಬಂದಿದೆ. ಆದರೂ ವಿದ್ಯಾರ್ಥಿಗಳು ಇದೀಗ ಹೋರಾಟಕ್ಕೆ ಇಳಿದಿದ್ದಾರೆ ಎಂದು ಅವರು ಆಕ್ಷೇಪಿಸಿದರು.

ಮೊಟ್ಟೆ ಬಂದಿದ್ದು ಹೇಗೇ?: ‘ನಗರದ ಕ್ವೀನ್ಸ್‌ ರಸ್ತೆಯಲ್ಲಿರುವುದು ಕಾಂಗ್ರೆಸ್ ಕಚೇರಿಯಲ್ಲ, ಬದಲಿಗೆ, ಅದು ಮಿಲಿಟರಿ ಹೋಟೆಲ್. ಇಲ್ಲದಿದ್ದರೆ ಅಲ್ಲಿ ಮೊಟ್ಟೆಗಳು ಬಂದದ್ದು ಹೇಗೆ?. ಅಲ್ಲೇನು ಕೋಳಿ ಫಾರಂ ಇದೆಯೇ?. ಅಥವಾ ಶಾಲಾ ಮಕ್ಕಳಿಗೆ ಕೊಡಬೇಕಾದ ಮೊಟ್ಟೆಗಳನ್ನು ಕಾಂಗ್ರೆಸ್ ಕಚೇರಿಯಲ್ಲಿ ಇಟ್ಟುಕೊಂಡು ಆಮ್ಲೆಟ್ ಮಾಡಿಕೊಳ್ಳುತ್ತಿದ್ದಾರೆಯೇ?’ ಎಂದು ಛಲವಾದಿ ನಾರಾಯಣಸ್ವಾಮಿ ಪ್ರಶ್ನಿಸಿದರು.

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News