ಲೈಂಗಿಕ ಕಿರುಕುಳ ಆರೋಪ: ಗೋಪಾಲ್ ಜೋಶಿ ಬಂಧನಕ್ಕೆ ಆಗ್ರಹಿಸಿ ಕಾಂಗ್ರೆಸ್ ಧರಣಿ
ಬೆಂಗಳೂರು : ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ, ಜೀವ ಬೆದರಿಕೆ ಹಾಕಿರುವ ಆರೋಪದ ಹಿನ್ನೆಲೆಯಲ್ಲಿ ಗೋಪಾಲ್ ಜೋಶಿಯನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿ ಕಾಂಗ್ರೆಸ್ ಕಾರ್ಯಕರ್ತರು, ಧರಣಿ ಸತ್ಯಾಗ್ರಹ ನಡೆಸಿದರು.
ಶನಿವಾರ ಇಲ್ಲಿನ ಆನಂದ ರಾವ್ ವೃತ್ತದ ಸಮೀಪದ ರೇಸ್‍ಕೋರ್ಸ್ ರಸ್ತೆಯಲ್ಲಿ ಕಾಂಗ್ರೆಸ್ ಕಚೇರಿಯ ಬಳಿ ಧರಣಿ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರು, ಗೋಪಾಲ್ ಜೋಶಿ ವಿರುದ್ಧ ಮಹಿಳೆಯೊಬ್ಬರು ಮಾಡಿರುವ ಲೈಂಗಿಕ ದೌರ್ಜನ್ಯದ ಆರೋಪಗಳ ಕುರಿತು ಸಮಗ್ರ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಸಬೇಕು. ತನಿಖಾ ಸಂಸ್ಥೆಗಳು ರಾಜಕೀಯ ಒತ್ತಡವಿಲ್ಲದೆ ಸತ್ಯಾಸತ್ಯತೆ ಪರಿಶೀಲಿಸಬೇಕು. ಆರೋಪಗಳು ಸಾಬೀತಾದಲ್ಲಿ ತಪ್ಪಿತಸ್ಥನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.
ಈ ವೇಳೆ ಮಾತನಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್.ಮನೋಹರ್, ಗೋಪಾಲ್ ಜೋಶಿ ವಿರುದ್ಧ ಮಹಿಳೆಯೊಬ್ಬರು ಮಾಡಿರುವ ಅತ್ಯಂತ ಗಂಭೀರ ಆರೋಪಗಳ ಬಗ್ಗೆ ಸರಕಾರ ಹಾಗೂ ಪೊಲೀಸರು ತ್ವರಿತಗತಿಯಲ್ಲಿ ತನಿಖೆ ನಡೆಸಬೇಕು. ಗೋಪಾಲ್ ಜೋಶಿ ಚುನಾವಣೆಯಲ್ಲಿ ಟಿಕೆಟ್ ಕೊಡಿಸುವುದಾಗಿ ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹೆಸರಿನಲ್ಲಿ 2ಕೋಟಿ ರೂ.ವಂಚನೆ ಮಾಡಿದ್ದಾರೆಂಬ ಆರೋಪವು ಕೇಳಿಬಂದಿದೆ ಎಂದು ಉಲ್ಲೇಖಿಸಿದರು.
ಇಂತಹ ಆರೋಪಗಳನ್ನು ರಾಜಕೀಯ ಬಣ್ಣದಲ್ಲಿ ನೋಡುವ ಬದಲು, ಸಂತ್ರಸ್ತ ಮಹಿಳೆಗೆ ನ್ಯಾಯ ದೊರಕಿಸುವುದು ಮುಖ್ಯ. ಮಹಿಳೆಯರ ಮೇಲೆ ನಡೆಯುವ ಯಾವುದೇ ರೀತಿಯ ದೌರ್ಜನ್ಯ ಖಂಡನೀಯ. ಆರೋಪಿತ ವ್ಯಕ್ತಿ ಎಷ್ಟೇ ಪ್ರಭಾವಿ ವ್ಯಕ್ತಿಗಳಾಗಿದ್ದರೂ ಕಾನೂನಿನ ಮುಂದೆ ಎಲ್ಲರೂ ಸಮಾನರು. ಹೀಗಾಗಿ ತನಿಖೆ ನಡೆಸಿ, ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸುವ ಕೆಲಸ ಆಗಬೇಕು ಎಂದು ಅವರು ಕೋರಿದರು.
ಈ ವೇಳೆ ಕೆಪಿಸಿಸಿ ಮುಖಂಡರಾದ ಜಿ.ಪ್ರಕಾಶ್, ಹೇಮರಾಜ್, ಪುಟ್ಟರಾಜು, ಕುಶಾಲ್, ಹರುವೇಗೌಡ, ರಂಜೀತ್ ಕುಮಾರ್, ಆನಂದ್, ಮಾಧವ ಹನೂರು, ಪ್ರವೀಣ್ ರಾವ್, ಒಬಳೇಶ್, ಪವನ್ ಸೇರಿದಂತೆ ಇನ್ನಿತರರು ಹಾಜರಿದ್ದರು.