ಬಿಡದಿ ಟೌನ್‍ಶಿಪ್ ವಿರೋಧಿಸಿ ನಾಳೆ(ಆ.9) ಜೆಡಿಎಸ್ ಪಾದಯಾತ್ರೆ

Update: 2026-08-08 22:43 IST

ಬೆಂಗಳೂರು : ರಾಜ್ಯ ಸರಕಾರದ ಬಿಡದಿ ಟೌನ್‍ಶಿಪ್ ಯೋಜನೆ ವಿರೋಧಿಸಿ ರವಿವಾರ(ಆ.9) ಜೆಡಿಎಸ್ ಪಾದಯಾತ್ರೆ ಚಾಲನೆ ಕಾರ್ಯಕ್ರಮದಲ್ಲಿ ಬಿಜೆಪಿ ನಾಯಕರು ಸಾಂಕೇತಿಕವಾಗಿ ಪಾಲ್ಗೊಳ್ಳಲಿದ್ದು, ಒಂದಾಗಿ ಹೋರಾಟ ಮಾಡಲು ತೀರ್ಮಾನಿಸಿದ್ದಾರೆ.

ಶನಿವಾರ ಇಲ್ಲಿನ ಖಾಸಗಿ ಹೋಟೆಲ್‍ನಲ್ಲಿ ನಡೆದ ಬಿಜೆಪಿ ಮತ್ತು ಜೆಡಿಎಸ್ ಸಮನ್ವಯ ಸಭೆಯಲ್ಲಿ ಸಮನ್ವಯ ಸಭೆಯಲ್ಲಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ವಿಧಾನಸಭೆಯ ವಿಪಕ್ಷ ನಾಯಕ ಆರ್.ಅಶೋಕ್, ಪರಿಷತ್ತಿನ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಸೇರಿದಂತೆ ಉಭಯ ಪಕ್ಷಗಳು ನಾಯಕರು ಆ.9 ಮತ್ತು 10ರಂದು ನಡೆಯುವ ಪಾದಯಾತ್ರೆಯಲ್ಲಿ ಸಾಂಕೇತಿಕವಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಿಸಿದರು.

ಈ ಕುರಿತು ಮಾತನಾಡಿದ ಎಚ್.ಡಿ.ಕುಮಾರಸ್ವಾಮಿ, ‘ಬಿಡದಿ ಟೌನ್‍ಶಿಪ್ ಯೋಜನೆ ಕೈಬಿಡುವಂತೆ ಆಗ್ರಹಿಸಿ ಎರಡು ದಿನಗಳ ಕಾಲ ಬೈರಮಂಗಲದಿಂದ ಕೆಂಗೇರಿವರೆಗೆ ಪಾದಯಾತ್ರೆ ನಡೆಯಲಿದೆ. ಆ ಬಳಿಕ ಫ್ರೀಡಂ ಪಾರ್ಕ್‍ನಲ್ಲಿ ಸಮಾರೋಪ ಸಮಾವೇಶ ನಡೆಯಲಿದೆ. ಜೆಡಿಎಸ್ ಹಾಗೂ ಬಿಜೆಪಿ ಜಂಟಿ ಸಮಾರೋಪ ಸಮಾವೇಶ ನಡೆಸಲಾಗುವುದು’ ಎಂದು ತಿಳಿಸಿದರು.

ಆರ್.ಅಶೋಕ್ ಮಾತನಾಡಿ, ‘ಸಮನ್ವಯತೆ ಕೊರತೆ ಆಗದಂತೆ ನೋಡಿಕೊಳ್ಳಬೇಕು ಎಂದು ಚರ್ಚೆ ಮಾಡಿದ್ದೇವೆ. ಸದನದಲ್ಲೂ ಬಿಡದಿ ವಿಚಾರ ಚರ್ಚೆ ಆಗಲೇಬೇಕು. ರೈತರ ಮಹಿಳೆಯರ ಹೋರಾಟವನ್ನು ಇಡೀ ರಾಜ್ಯ ನೋಡುತ್ತಿದೆ. ರೈತರು ಭೂಮಿ ಕೊಡಲು ತಯಾರಿಲ್ಲ. ಸಚಿವರಿಗೆ ಖಾತೆ ಹಂಚಿಕೆ ಆಗಿಲ್ಲ. ಕೇವಲ ಸಿಎಂ ಪದವಿ ವಿಚಾರಕ್ಕೆ ಮೂರು ವರ್ಷಗಳ ಕಾಲ ಕಳೆದರು. ಈಗ ಸಚಿವರ ಖಾತೆ ವಿಚಾರಕ್ಕೆ ಕಾಲ ಕಳೆಯುತ್ತಿದ್ದಾರೆ. ಆ ಪಕ್ಷದ ದಿವಾಳಿತನ ಇದು’ ಎಂದು ಟೀಕಿಸಿದರು.

ಬಿಡದಿ ಟೌನ್‍ಶಿಪ್‍ಗೆ ವಿರೋಧ ಇದೆ. ಎರಡೂ ಪಕ್ಷಗಳು ಹೋರಾಟ ಮಾಡುವ ತೀರ್ಮಾನ ಮಾಡಿದ್ದೇವೆ. ಬಿಜೆಪಿ, ಜೆಡಿಎಸ್ ನಡುವೆ ಸಮನ್ವಯ ಸಮಿತಿ ರಚನೆ ಮಾಡುತ್ತೇವೆ. ರೈತರು 500 ದಿನಗಳಿಂದ ಹೋರಾಟ ಮಾಡುತ್ತಿದ್ದಾರೆ. ಭೂಮಿ ಕೊಡಲು ರೈತರಿಗೆ ಇಚ್ಚೆ ಇಲ್ಲ. ಬೆದರಿಕೆ, ಒತ್ತಡ ಹಾಕಿ ಭೂಮಿ ಪಡೆಯುತ್ತಿದ್ದಾರೆ. ಈ ವಿಚಾರ ಸದನದಲ್ಲಿ ಚರ್ಚೆ ಆಗಬೇಕು ಎಂದ ಅವರು, ವಿಧಾನಮಂಡಲ ಅಧಿವೇಶನದಲ್ಲಿ ಜನರ ಸಮಸ್ಯೆ ಕುರಿತು ಧ್ವನಿ ಎತ್ತಲು ನಿರ್ಧಾರ ಮಾಡಲಾಗಿದೆ ಎಂದು ಹೇಳಿದರು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News