ಆರೆಸ್ಸೆಸ್ ಬಗ್ಗೆ ದಿನೇಶ್ ಗುಂಡೂರಾವ್ ಹೇಳಿಕೆ; ನೋಟಿಸ್ ನೀಡದ ಪೊಲೀಸರ ನಡೆಗೆ ಹೈಕೋರ್ಟ್ ತರಾಟೆ
ಬೆಂಗಳೂರು : ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರೆಸ್ಸೆಸ್) ಹಾಗೂ ಅದರ ಸದಸ್ಯರ ಬಗ್ಗೆ ಮಾನಹಾನಿಕಾರಕ ಹೇಳಿಕೆ ನೀಡಿದ ಆರೋಪದಲ್ಲಿ ದಾಖಲಾಗಿರುವ ಖಾಸಗಿ ದೂರಿನಿಂದ ಮಾಜಿ ಸಚಿವ ದಿನೇಶ್ ಗುಂಡೂರಾವ್ ಅವರನ್ನು ಕೈಬಿಟ್ಟಿರುವ ಕ್ರಮ ಪ್ರಶ್ನಿಸಿದ ಅರ್ಜಿ ಸಂಬಂಧ ದಿನೇಶ್ ಗುಂಡೂರಾವ್‌ಗೆ ಮೂರು ವಾರ ಕಳೆದರೂ ನೋಟಿಸ್ ನೀಡದ ಪೊಲೀಸರನ್ನು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.
ದಿನೇಶ್ ಗುಂಡೂರಾವ್ ಅವರ ಹೆಸರು ಕೈಬಿಟ್ಟಿರುವ ಮ್ಯಾಜಿಸ್ಪ್ರೇಟ್ ಆದೇಶ ಪ್ರಶ್ನಿಸಿ ಆರೆಸ್ಸೆಸ್ ಬೆಂಬಲಿಗ ಬೆಂಗಳೂರಿನ ಜಯನಗರದ ನಿವಾಸಿ ಎ. ತೇಜಸ್ ಎಂಬವರು ಸಲ್ಲಿಸಿರುವ ಕ್ರಿಮಿನಲ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ಹೈಕೋರ್ಟ್ ಕಟ್ಟಡದ ಮುಂಭಾಗದಲ್ಲೇ ಇರುವ ಕಲ್ಲು ಕಟ್ಟಡದಲ್ಲಿರುವವರಿಗೆ ನೋಟಿಸ್ ತಲುಪಿಸುವುದು ಪೊಲೀಸರಿಗೆ ಸಾಧ್ಯವಿಲ್ಲವೇ, ಇದು ನಿಜಕ್ಕೂ ಆಘಾತಕಾರಿ ಎಂದು ತೀಕ್ಷಣವಾಗಿ ನುಡಿಯಿತು. ಅರ್ಜಿದಾರರ ಪರ ವಕೀಲ ವೆಂಕಟೇಶ್ ದಳವಾಯಿ ಅವರು, ನ್ಯಾಯಾಲಯ ನೋಟಿಸ್ ಜಾರಿಗೊಳಿಸಿ ಮೂರು ವಾರಗಳು ಕಳೆದಿವೆೆ. ಆದರೆ, ಇನ್ನೂ ಪ್ರತಿವಾದಿ ದಿನೇಶ್ ಗುಂಡೂರಾವ್‌ಗೆ ನೋಟಿಸ್ ಜಾರಿಯಾಗಿಲ್ಲ ಎಂದರು. ಆಗ ಸರಕಾರದ ಪರ ವಕೀಲರು, ಇನ್ನೂ ಪೊಲೀಸರಿಂದ ಪ್ರತಿವಾದಿಗೆ ನೋಟಿಸ್‌ಜಾರಿಯಾಗಿರುವ ಬಗ್ಗೆ ವರದಿಗಾಗಿ ಕಾಯಲಾಗುತ್ತಿದೆ ಎಂದು ತಿಳಿಸಿದರು.
ಅದಕ್ಕೆ ಆಘಾತ ವ್ಯಕ್ತಪಡಿಸಿದ ನ್ಯಾಯಪೀಠ, ಏನು? ಇನ್ನೂ ಕೋರ್ಟ್ ನೋಟಿಸ್ ಜಾರಿಯಾಗಿಲ್ಲವೇ? ದಿನೇಶ್ ಗುಂಡೂರಾವ್ ಅವರು ನೋಟಿಸ್ ಜಾರಿಗೆ ಸಿಕ್ಕಿಲ್ಲವೇ? ಶಾಸಕರು ಹಾಗೂ ಸಚಿವರು ಎಲ್ಲಿದ್ದಾರೆಂಬುದು ಪೊಲೀಸರಿಗೆ ತಿಳಿದಿದೆ. ಆದರೂ ಅವರಿಗೆ ನೋಟಿಸ್ ಜಾರಿಯಾಗಿಲ್ಲ ಎಂದರೆ ಏನರ್ಥ ಎಂದು ಮೌಖಿಕವಾಗಿ ಪ್ರಶ್ನಿಸಿತಲ್ಲದೆ, ಕೂಡಲೇ ನೋಟಿಸ್ ತಲುಪಿಸಲು ಪೊಲೀಸರು ಕ್ರಮ ಕೈಗೊಳ್ಳಬೇಕೆಂದು ನಿರ್ದೇಶಿಸಿ ವಿಚಾರಣೆಯನ್ನು ಆಗಸ್ಟ್ 13ಕ್ಕೆ ಮುಂದೂಡಿತು.