ನಿಯಮ ಉಲ್ಲಂಘಿಸಿ ನೇಮಕಾತಿ ಆರೋಪ; ರಾಜ್ಯಪಾಲರಿಗೆ ದೂರು ಸಲ್ಲಿಕೆ
ಬೆಂಗಳೂರು : ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮದ(ಕೆಎಸ್‌ಎಂಎಸ್‌ಸಿಎಲ್) ವ್ಯವಸ್ಥಾಪಕ ನಿರ್ದೇಶಕರ ಹುದ್ದೆಗೆ ವೃಂದ ಮತ್ತು ನೇಮಕಾತಿ ಹಾಗೂ ಮಾನವ ಸಂಪನ್ಮೂಲ (ಎಚ್‌ಆರ್)ನಿಯಮ ಉಲ್ಲಂಘಿಸಿ ಎ.ಆರ್.ರವಿ ಎಂಬವರನ್ನು ನೇಮಕಾತಿ ಮಾಡಲಾಗಿದೆ ಎಂದು ಆರೋಪಿಸಿ ರಾಜ್ಯಪಾಲರಿಗೆ ದೂರು ಸಲ್ಲಿಕೆ ಮಾಡಲಾಗಿದೆ.
ಶನಿವಾರ ಈ ಸಂಬಂಧ ಸಾಮಾಜಿಕ ಕಾರ್ಯಕರ್ತ ಬಿ.ವಿ.ಗೌತಮ್ ದೂರು ಸಲ್ಲಿಕೆ ಮಾಡಿದ್ದು, ಹಣಕಾಸು ಇಲಾಖೆ ಅನುಮೋದಿಸಿದ ಮಾನವ ಸಂಪನ್ಮೂಲ ಮಾದರಿ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆದೇಶ ಪ್ರಕಾರ, ಕೆಎಸ್‌ಎಂಎಸ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕರ ಹುದ್ದೆಯು ನಿಯೋಜನೆ ಆಧಾರದ ಮೇಲೆ ಐಎಎಸ್ ಅಧಿಕಾರಿಗೆ ಮೀಸಲಾಗಿರಬೇಕು. ಆದರೆ, ನಿಯಮ ಮೀರಿ ರವಿ ಅವರನ್ನು ವ್ಯವಸ್ಥಾಪಕ ನಿರ್ದೇಶಕರ ಹುದ್ದೆಗೆ ನೇಮಿಸಲಾಗಿದೆ. ಹಾಗಾಗಿ, ಈ ನೇಮಕಾತಿಯನ್ನು ತಕ್ಷಣ ರದ್ದುಗೊಳಿಸಿ ಐಎಎಸ್ ಅಧಿಕಾರಿಯನ್ನು ನೇಮಿಸಬೇಕೆಂದು ಅವರು ದೂರಿನಲ್ಲಿ ಒತ್ತಾಯಿಸಿದ್ದಾರೆ.
ಪ್ರಮುಖವಾಗಿ ಔಷಧಗಳು, ವೈದ್ಯಕೀಯ ಉಪಕರಣಗಳ ಖರೀದಿ ಹಾಗೂ ಸರಕಾರಿ ಆಸ್ಪತ್ರೆಗಳಿಗೆ ಸರಬರಾಜು ಮಾಡುವ ಪ್ರಮುಖ ಜವಾಬ್ದಾರಿಯನ್ನು ನಿಗಮ ಹೊಂದಿದೆ. 2022ರ ನ.25ರಂದು ಹಣಕಾಸು ಇಲಾಖೆಯು, ನಿಗಮಕ್ಕೆ ಒಟ್ಟು 331 ಹುದ್ದೆಗಳನ್ನು ಮಂಜೂರು ಮಾಡಿ ಮಾನವ ಸಂಪನ್ಮೂಲ ಮಾದರಿಯನ್ನು ಅನುಮೋದಿಸಿತ್ತು. ಇದರಲ್ಲಿ ವ್ಯವಸ್ಥಾಪಕ ನಿರ್ದೇಶಕರ ಹುದ್ದೆಯನ್ನು ನಿಯೋಜನೆ ಆಧಾರದಲ್ಲಿ ಐಎಎಸ್ ಅಧಿಕಾರಿಯನ್ನೆ ಭರ್ತಿ ಮಾಡಬೇಕು ಎಂದು ಸ್ಪಷ್ಟವಾಗಿ ನಮೂದಿಸಲಾಗಿತ್ತು. ಈ ಅನುಮೋದನೆ ಆಧಾರದಲ್ಲಿ ಆರೋಗ್ಯ ಇಲಾಖೆಯು 2023ರ ಜ.11ರಂದು ಸರಕಾರಿ ಆದೇಶ ಹೊರಡಿಸಿ, ಎಂಡಿ ಹುದ್ದೆಯು ‘ಐಎಎಸ್’ ವೃಂದದ ಹುದ್ದೆಯಾಗಿದ್ದು, ನಿಯೋಜನೆ ಮೂಲಕವೇ ಭರ್ತಿ ಮಾಡಬೇಕೆಂದು ಅಧಿಕೃತಗೊಳಿಸಿತ್ತು ಎಂದು ದೂರಿನಲ್ಲಿ ವಿವರಿಸಿದ್ದಾರೆ.
2026ರ ಫೆ.20ರ ಆದೇಶದಂತೆ, ಟೆಂಡರ್ ಸ್ವೀಕಾರ ಸಮಿತಿಯ ಅಧ್ಯಕ್ಷರಾಗಿ ಕಮಿಷನರ್ ದರ್ಜೆಗಿಂತ ಮೇಲ್ಪಟ್ಟ ಐಎಎಸ್ ಅಧಿಕಾರಿ ಇರಬೇಕು. ಆದರೆ, ಐಎಎಸ್ ಅಧಿಕಾರಿಯಲ್ಲದವರ ನೇಮಕದಿಂದ ಆಡಳಿತಾತ್ಮಕ ಪಾರದರ್ಶಕತೆ ಮತ್ತು ಜವಾಬ್ದಾರಿಗೆ ಧಕ್ಕೆಯುಂಟಾಗುತ್ತದೆ. ಹಾಗಾಗಿ, ರವಿ ಅವರ ನೇಮಕಾತಿ ಕುರಿತು ರಾಜ್ಯ ಸರಕಾರದಿಂದ ತಕ್ಷಣವೇ ವಿವರ ಪಡೆಯಬೇಕು. ನಿಯಮಾವಳಿ ಉಲ್ಲಂಘನೆಗೆ ಅವಕಾಶ ನೀಡಿದ ಯಾವುದೇ ತಿದ್ದುಪಡಿ ಅಥವಾ ಅನುಮೋದಿತ ಸರಕಾರಿ ಆದೇಶಗಳಿದ್ದರೆ ಅದನ್ನು ಒದಗಿಸಲು ಸರಕಾರಕ್ಕೆ ನಿರ್ದೇಶಿಸಬೇಕು. ನಿಯಮ ಪ್ರಕಾರ ಐಎಎಸ್ ಅಧಿಕಾರಿಯನ್ನು ತಕ್ಷಣವೇ ಎಂಡಿ ಹುದ್ದೆಗೆ ನೇಮಿಸಲು ಶಿಫಾರಸು ಮಾಡಬೇಕು. ಈ ಅಕ್ರಮ ನೇಮಕಾತಿಯ ಹಿಂದಿನ ಸನ್ನಿವೇಶಗಳ ಬಗ್ಗೆ ತನಿಖೆ ನಡೆಸಿ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ನಿರ್ದೇಶನ ನೀಡಬೇಕು ಎಂದು ರಾಜ್ಯಪಾಲರನ್ನು ಮನವಿ ಮಾಡಿದ್ದಾರೆ.