ಎಲ್ಲರಲ್ಲೂ ವೈಜ್ಞಾನಿಕ ಮನೋಭಾವ ಬೆಳೆಯಲಿ : ನ್ಯಾ.ನಾಗಮೋಹನ್‍ದಾಸ್
‘ಭವಿಷ್ಯದ ಭಾರತ’ ವಿಚಾರ ಸಂಕಿರಣ
ಬೆಂಗಳೂರು : ಎಲ್ಲರೂ ಸಂವಿಧಾನದಲ್ಲಿ ತಿಳಿಯಪಡಿಸಿರುವ ವೈಜ್ಞಾನಿಕ ಮನೋಭಾವವನ್ನು ಬೆಳೆಸಿಕೊಂಡು, ಪಸರಿಸಬೇಕು ಎಂದು ಹೈಕೋರ್ಟ್‍ನ ವಿಶ್ರಾಂತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್‍ದಾಸ್ ತಿಳಿಸಿದ್ದಾರೆ.
ಶನಿವಾರ ನಗರದ ಚೆನ್ನಬಸಪ್ಪ ಸಭಾಂಗಣದಲ್ಲಿ ಭಾರತ ಜ್ಞಾನ ವಿಜ್ಞಾನ ಸಮಿತಿಯ ವತಿಯಿಂದ ಆಯೋಜಿಸಿದ್ದ ‘ಭವಿಷ್ಯದ ಭಾರತ’ ವಿಚಾರ ಸಂಕಿರಣದ ಉದ್ಘಾಟನಾ ಅಧಿವೇಶನದಲ್ಲಿ ಅವರು ಮಾತನಾಡಿದರು.
ನಂಬಿಕೆಗಳು ಬೇರೆ, ಮೂಢನಂಬಿಕೆಗಳು ಬೇರೆ. ಯಾರೂ ನಂಬಿಕೆಗಳಿಗೆ ವಿರೋಧಿಗಳಾಗಬಾರದು. ಯಾವ ನಂಬಿಕೆಗಳು ಮಾನವ ಘನತೆಗೆ ಧಕ್ಕೆ ತರುತ್ತವೆಯೋ, ಯಾವ ನಂಬಿಕೆಗಳು ಅನಾರೋಗ್ಯಕರವೋ, ಯಾವ ನಂಬಿಕೆಗಳು ಹಿಂಸಾತ್ಮಕವೋ ಅವುಗಳನ್ನು ವಿರೋಧಿಸೋಣ ಎಂದು ಹೇಳಿದರು.
ಸ್ವಾತಂತ್ರ್ಯ ಬಂದ ನಂತರ ನಾವು ಅನೇಕ ಕ್ಷೇತ್ರದಲ್ಲಿ ಸಾಧೆನ ಮಾಡಿದ್ದೇವೆ. ಅದಕ್ಕೆ ಕಾರಣ ಭಾರತದ ಸಂವಿಧಾನ. ಎಷ್ಟೆಲ್ಲ ಸಾಧನೆ ಮಾಡಿರುವ ಈ ದೇಶದಲ್ಲಿ ಜಾತಿ ವ್ಯವಸ್ಥೆಯನ್ನು ಹೋಗಲಾಡಿಸಿಲ್ಲ. ಆದರೆ ಅಸಮಾನತೆಯನ್ನು ಒಂದಿಷ್ಟು ಕಡಿಮೆ ಮಾಡಲು ಸಾಧ್ಯವಾಗಿದೆ ಎಂದರು.
ಅನೇಕ ಸಾಧನೆ ಮಾಡಿರುವ ಭಾರತದ ಇವತ್ತಿನ ಪರಿಸ್ಥಿತಿಯ ಬಗ್ಗೆ ಯೋಚನೆ ಮಾಡಬೇಕಿದೆ. ಸಂಸತ್ತಿನ ಪರಿಸ್ಥಿತಿ ನೋಡಿದರೆ, ಕಳೆದ 14 ದಿನಗಳಿಂದ ಅಧಿವೇಶನವೇ ನಡೆದಿಲ್ಲ. ನಾವು ಸಂಸದರನ್ನು ಆಯ್ಕೆ ಮಾಡಿ ಕಳುಹಿಸಿರುವುದು ಚರ್ಚೆ ಮಾಡುವುದಕ್ಕಾ? ಅಥವಾ ಜಗಳ ಆಡುವುದಕ್ಕಾ? ನ್ಯಾಯಾಂಗದ ಪರಿಸ್ಥಿತಿ ಕೂಡ ಹಾಗೇ ಇದೆ. ನ್ಯಾಯಾಂಗದಿಂದ ಅನೇಕ ಅಸಂವಿಧಾನಾತ್ಮಕ ತೀರ್ಪುಗಳು ಬರುತ್ತಿವೆ ಎಂದು ತಿಳಿಸಿದರು.
ವಿಚಾರ ಸಂಕಿರಣದಲ್ಲಿ ನಿವೃತ್ತ ಪ್ರಾಧ್ಯಾಪಕ ಡಾ.ಟಿ.ಆರ್.ಚಂದ್ರಶೇಖರ, ಸೈನ್ಸ್ ಗ್ಯಾಲರಿಯ ನಿರ್ದೇಶಕಿ ಪ್ರೊ.ಜಾಹ್ನವಿ ಪಾಲ್ಕೆ, ವಿ.ಜಿ.ಗೋಪಿನಾಥನ್ ಮತ್ತಿತರರು ಉಪಸ್ಥಿತರಿದ್ದರು.