ʼಕಸ್ತೂರಿ ರಂಗನ್ ವರದಿʼಯ ಬಗ್ಗೆ ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು : ಆಡಳಿತ-ಪ್ರತಿಪಕ್ಷ ಸದಸ್ಯರ ಒತ್ತಾಯ
ಬೆಂಗಳೂರು : ಪಶ್ಚಿಮ ಘಟ್ಟ ಪ್ರದೇಶದ ಸ್ಥಳೀಯ ಜನರಿಂದಲೇ ಅರಣ್ಯ, ವನ್ಯಜೀವಿಗಳು ಸಂರಕ್ಷಣೆಯಾಗಿದೆ. ಅಲ್ಲಿನ ಜನರನ್ನು ಸ್ಥಳಾಂತರಿಸಿದರೆ ಅರಣ್ಯ ನಾಶವಾಗಲಿದೆ. ಹೀಗಾಗಿ ಕಸ್ತೂರಿ ರಂಗನ್ ವರದಿಯ ಬಗ್ಗೆ ಸರಕಾರ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರು ಒತ್ತಾಯಿಸಿದರು.
ಮಂಗಳವಾರ ವಿಧಾನಸಭೆಯಲ್ಲಿ ಕಸ್ತೂರಿ ರಂಗನ್ ವಿಚಾರಕ್ಕೆ ಸಂಬಂಧಿಸಿದಂತೆ ಆಡಳಿತ ಪಕ್ಷದ ಟಿ.ಡಿ.ರಾಜೇಗೌಡ, ಬಿಜೆಪಿಯ ಭಾಗೀರಥಿ ಮರುಳ್ಯ, ವಿಧಾನಸಭೆಯ ಉಪಸಭಾಧ್ಯಕ್ಷ ಮಾಂಕಾಳ ವೈದ್ಯ ಸೇರಿದಂತೆ ಇನ್ನಿತರ ಸದಸ್ಯರು, ಕಸ್ತೂರಿ ರಂಗನ್ ವರದಿ ಸಾಧಕ-ಬಾಧಕಗಳ ಕುರಿತು ಬೆಳಕು ಚೆಲ್ಲಿದರು.
ಸಮಗ್ರ ವರದಿ ಸಲ್ಲಿಸಿ: ‘ಕಸ್ತೂರಿ ರಂಗನ್ ವರದಿಯ ಸಾಧಕ-ಬಾಧಕಗಳ ಬಗ್ಗೆ ವಾಸ್ತವ ಅಂಶಗಳನ್ನಾಧರಿಸಿದ ಸಮಗ್ರ ವರದಿ ಸಲ್ಲಿಸಬೇಕು. ಈ ವರದಿಯನ್ನು ಒಪ್ಪಲು ಸಾಧ್ಯವಿಲ್ಲ. ಹೀಗಾಗಿ ಇದನ್ನು ತಿರಸ್ಕಾರ ಮಾಡಬೇಕು. ಅರಣ್ಯ ಭೂಮಿ ರಕ್ಷಣೆಗೆ ವನ್ಯಜೀವಿ ಸಂರಕ್ಷಣೆ ಕಾಯ್ದೆ ಸೇರಿದಂತೆ ಹಲವು ಕಾಯಿದೆಗಳು ಜಾರಿಯಲ್ಲಿದ್ದರೂ ಮತ್ತೆ ಈ ವರದಿಯ ಶಿಫಾರಸುಗಳನ್ನು ಹೇರುವುದೇಕೆ?’ ಎಂದು ಟಿ.ಡಿ.ರಾಜೇಗೌಡ ಪ್ರಶ್ನಿಸಿದರು.
‘ಘಟ್ಟ ಪ್ರದೇಶದಲ್ಲಿನ ಗ್ರಾಮ ವಾರು ಸರ್ವೆ ಮಾಡಬೇಕು. ಮನೆ, ರಸ್ತೆ, ಶಾಲೆ, ಕೃಷಿ ಚಟುವಟಿಕೆಗಳನ್ನು ಪರಿಗಣಿಸಬೇಕು. ಒಂದು ವರ್ಷ ಸಮಾಲೋಚನೆಗೆ ಅವಕಾಶವನ್ನು ಕೋರಬೇಕು. ಪರಿಸರ ರಕ್ಷಣೆಯ ಜೊತೆಗೆ ಜನರ ಬದುಕನ್ನೂ ಉಳಿಸುವಂತಹ ಕೆಲಸವಾಗಬೇಕು. ಸಾರ್ವಜನಿಕ ಆಕ್ಷೇಪಣೆಗೂ ಅವಕಾಶ ಕಲ್ಪಿಸಬೇಕು. ಭೂಮಿ ಕಳೆದುಕೊಂಡಂತಹ ಸಂತ್ರಸ್ತರಿಗೆ ಪರಿಹಾರ ನೀಡುವ ವ್ಯವಸ್ಥೆಯಾಗಬೇಕು’ ಎಂದು ರಾಜೇಗೌಡ ಸಲಹೆ ಮಾಡಿದರು.
ವರದಿ ಒಪ್ಪಲು ಸಾಧ್ಯವಿಲ್ಲ: ‘ಅರಣ್ಯ ಉಳಿಯಬೇಕು, ಮನುಷ್ಯರು ಉಳಿಯಬಾರದು’ ಎಂಬ ವರದಿಯನ್ನು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ. ಪಶ್ಚಿಮಘಟ್ಟ ಪ್ರದೇಶದ ವ್ಯಾಪ್ತಿಯ ಆರು ರಾಜ್ಯಗಳ ಪೈಕಿ ಅತೀ ಹೆಚ್ಚು ಅರಣ್ಯ ಕರ್ನಾಟಕದಲ್ಲಿದೆ. ಅದು ನಮ್ಮ ಉತ್ತರ ಕನ್ನಡ ಜಿಲ್ಲೆಯಲ್ಲಿ ಶೇ.82ರಷ್ಟು ಅರಣ್ಯವಿದೆ. 85ಸಾವಿರ ಕುಟುಂಬಗಳು ಈ ವರದಿಯಿಂದ ಆತಂಕದಲ್ಲಿವೆ ಎಂದು ಉಪಸಭಾಧ್ಯಕ್ಷ ಮಾಂಕಾಳ ವೈದ್ಯ ಹೇಳಿದರು.
ಎಲ್ಲೂ ಬೇಡವಾದ ಯೋಜನೆಗಳನ್ನು ನಮ್ಮ ಜಿಲ್ಲೆಯಲ್ಲಿ ಅನುಷ್ಠಾ ನಗೊಳಿಸಲಾಗುತ್ತಿದೆ. ದೇವರು ನಮ್ಮ ಜಿಲ್ಲೆಗೆ ಎಲ್ಲವನ್ನೂ ಕೊಟ್ಟಿದ್ದಾನೆ. ಕೃಷಿ, ತೋಟಗಾರಿಕೆಗೆ ಶೇ.18ರಷ್ಟು ಜಮೀನು ಬಳಕೆಯಾಗುತ್ತಿದೆ. ಈಗಾಗಲೇ 13ವರ್ಷ ಕಳೆದಿದೆ. ಎನ್‍ಜಿಟಿ ಆದೇಶವನ್ನು ಜಾರಿ ಮಾಡಿದರೆ ಜನರಿಗೆ ಅನ್ಯಾಯವಾಗಲಿದೆ. ಅರಣ್ಯ ಇಲಾಖೆ ವನ್ಯಜೀವಿಗಳ ಸಂರಕ್ಷಣೆಯಾಗುತ್ತಿದೆ ಎಂಬುದು ಸುಳ್ಳು. ಅವುಗಳ ಸಂರಕ್ಷಣೆಯನ್ನು ನಾವು ಮಾಡುತ್ತಿದ್ದೇವೆ. ಸಮುದ್ರ, ನದಿ, ಕಾಡು, ಸರಕಾರದ ಯೋಜನೆಗಳ ನಡುವೆ ನಮ್ಮ ಬದುಕನ್ನು ನಡೆಸಬೇಕಿದೆ ಎಂದು ಅವರು ಹೇಳಿದರು.
ಕಂಪೆನಿಗಳಿಂದಲೇ ಅರಣ್ಯ ನಾಶ: ‘ಪಶ್ಚಿಮ ಘಟ್ಟದ ಅರಣ್ಯ ವಾಸಿಗಳು ಅರಣ್ಯವನ್ನು ಉಳಿಸಿದ್ದಾರೆಯೇ ಹೊರತು ಹಾಳು ಮಾಡಿಲ್ಲ. ಆದರೆ, ವಾಣಿಜ್ಯ ಕಾರಣಕ್ಕೆ ದೊಡ್ಡ-ದೊಡ್ಡ ಕಂಪೆನಿಗಳು ಅರಣ್ಯ ನಾಶ ಮಾಡಿವೆ. ಕಸ್ತೂರಿ ರಂಗನ್ ವರದಿಯಿಂದ ಅರಣ್ಯವಾಸಿಗಳಿಗೆ ಅನ್ಯಾಯವಾಗಲಿದೆ ಎಂದು ಹಿರಿಯ ಶಾಸಕ ಎಚ್.ಕೆ.ಪಾಟೀಲ್ ಗಮನ ಸೆಳೆದರು.
ಉತ್ತರ ಕನ್ನಡ ಜಿಲ್ಲೆಯಲ್ಲಿ ಆಫ್ರಿಕನ್ನರು, ದ್ರಾವಿಡರು, ಮಂಗೋಲಿಯನ್ನರು ಸೇರಿದಂತೆ ಹಲವು ಅಪರೂಪದ ಆದಿವಾಸಿಗಳಿಗೆ ಹೊಡೆತ ಬೀಳಲಿದೆ. ಅವರನ್ನು ಒಕ್ಕಲೆಬ್ಬಿಸಬಾರದು. ಆ ಜನರ ಬದುಕು, ಜೀವನ ಶೈಲಿ ಇದರಿಂದ ಉಳಿಯುವುದಿಲ್ಲ, ಜನಸಾಮಾನ್ಯರ ಸಾಂಸ್ಕೃ ತಿಕ ಬದುಕಿನ ರಕ್ಷಣೆ ಮಾಡಬೇಕು ಎಂದು ಅವರು ಸಲಹೆ ನೀಡಿದರು.
‘ನಾನು ಪ್ರತಿನಿಧಿಸುವ ಸುಳ್ಯ ಕ್ಷೇತ್ರದ 26 ಗ್ರಾಮಗಳು ಕಸ್ತೂರಿ ರಂಗನ್ ವರದಿ ವ್ಯಾಪ್ತಿಗೆ ಬರುತ್ತವೆ. ಕಂದಾಯ ಇಲಾಖೆಗೆ ಕಂದಾಯ ಭೂಮಿ, ಅರಣ್ಯ ಭೂಮಿ ಯಾವುದು ಎಂಬುದು ಗೊತ್ತಾಗದೇ ಅರಣ್ಯ ಇಲಾಖೆಗೆ ಕಳುಹಿಸಲಾಗುತ್ತದೆ. ಈ ವರದಿಯ ಸಾಧಕ-ಬಾಧಕಗಳ ಬಗ್ಗೆ ಚರ್ಚಿಸಿ ಶಾಶ್ವತ ಪರಿಹಾರ ಕಲ್ಪಿಸಬೇಕು. ಜನರ ಬದುಕಿನ ರಕ್ಷಣೆಗೆ ಸರಕಾರ ಸೂಕ್ತ ಪರಿಹಾರ ಕ್ರಮಗಳನ್ನು ಕಲ್ಪಿಸಬೇಕು’
-ಭಾಗೀರಥಿ ಮುರುಳ್ಯ ಬಿಜೆಪಿ ಸದಸ್ಯೆ