ಬೆಂಗಳೂರು : ರಾಜ್ಯದಲ್ಲಿ ತೀವ್ರ ಬರಗಾಲದ ಪರಿಸ್ಥಿತಿ ಹಾಗೂ ಮೇವಿನ ಕೊರತೆ ಇರುವುದರಿಂದ ಹಾಲಿನ ದರವನ್ನು ಪ್ರತಿ ಲೀಟರ್‌ ಗೆ 8ರಿಂದ 10 ರೂ.ರಷ್ಟು ಹೆಚ್ಚಿಸುವಂತೆ ಆಗ್ರಹಿಸಿ, ಬೆಂಗಳೂರು ಹಾಲು ಒಕ್ಕೂಟ ನಿಗಮ(ಬಮೂಲ್) ವತಿಯಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ಬೃಹತ್ ಧರಣಿ ನಡೆಸಲಾಯಿತು.

ಇದೇ ಅಧಿವೇಶನದಲ್ಲಿ ಪ್ರತೀ ಲೀಟರ್ ಹಾಲಿಗೆ 8ರಿಂದ 10 ರೂ. ಹೆಚ್ಚಿಸಬೇಕು. ಒಂದು ವೇಳೆ ದರ ಏರಿಕೆ ಮಾಡದಿದ್ದರೆ, ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ. ಜೊತೆಗೆ ಲಕ್ಷಾಂತರ ಜನ ಹಾಲು ಉತ್ಪಾದಕರು ಹಾಗೂ ರೈತರು ಬೀದಿಗಿಳಿಯುತ್ತಾರೆ ಎಂದು ಧರಣಿನಿರತರು ಎಚ್ಚರಿಕೆ ನೀಡಿದರು.

ಬರಗಾಲ, ಪಶು ಆಹಾರ ಬೆಲೆ ಏರಿಕೆ, ನಿರ್ವಹಣೆ ಮತ್ತು ಉತ್ಪಾದನಾ ವೆಚ್ಚ ಏರಿಕೆಯಿಂದ ಹೈನುಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದರಿಂದ ನಿತ್ಯ ಹಾಲು ಉತ್ಪಾದನೆ ಕೂಡ ಗಣನೀಯವಾಗಿ ಕುಸಿದಿದೆ. ಅದಕ್ಕಾಗಿ ಹಾಲಿನ ದರವನ್ನು ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.

ಉತ್ಪಾದನಾ ವೆಚ್ಚಕ್ಕೆ ಹೋಲಿಸಿದರೆ ಹೈನುಗಾರರಿಗೆ ನೀಡುತ್ತಿರುವ ಹಾಲಿನ ದರ ಸಮರ್ಪಕವಾಗಿಲ್ಲ. ಬೆಲೆ ಏರಿಕೆಯ ನಡುವೆ ಹೈನೋದ್ಯಮ ನಡೆಸುವುದು ಕಷ್ಟ. ಇದರಿಂದ ಅನೇಕ ರೈತರು ಹೈನುಗಾರಿಕೆಯಿಂದ ವಿಮುಖರಾಗುವ ಆತಂಕ ಎದುರಾಗುತ್ತದೆ. ಆದ್ದರಿಂದ ಹಾಲಿನ ಖರೀದಿ ದರವನ್ನು ತಕ್ಷಣ ಪರಿಷ್ಕರಿಸಬೇಕು ಎಂದು ಧರಣಿನಿರತರು ಒತ್ತಾಯಿಸಿದರು.

ಈ ವೇಳೆ ಧರಣಿ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದ ಸಹಕಾರ ಸಚಿವ ಲಕ್ಷ್ಮಣ್ ಸವದಿ, ನಮ್ಮ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಹಾಲು ಉತ್ಪಾದಕರ ಬೇಡಿಕೆಗೆ ಸ್ಪಂಧಿಸುತ್ತಾರೆ. ಇವತ್ತು (ಸೆ.22ರ) ಮದ್ಯಾಹ್ನ 3ಗಂಟೆಗೆ ಸಭೆ ನಡೆಸಿ, ಸಿಎಂ ಜೊತೆಗೆ ಚರ್ಚಿಸಿ ಇದೇ ಅಧಿವೇಶನದಲ್ಲೇ ದರ ಏರಿಕೆಯ ಬಗ್ಗೆ ಘೋಷಣೆ ಮಾಡುತ್ತೇವೆ ಎಂದು ಭರವಸೆ ನೀಡಿದರು.

ಧರಣಿಯಲ್ಲಿ ಪಶು ಸಂಗೋಪನೆ ಮತ್ತು ರೇಷ್ಮೆ ಸಚಿವ ಪುಟ್ಟರಂಗ ಶೆಟ್ಟಿ ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್ ಮತ್ತಿತರರು ಹಾಜರಿದ್ದರು.

ಫ್ರೀಡಂ ಪಾರ್ಕ್ ಸುತ್ತಮುತ್ತ ವಾಹನ ದಟ್ಟಣೆ: ರಾಜ್ಯದ ವಿವಿಧ ಜಿಲ್ಲೆ ಮತ್ತು ತಾಲೂಕುಗಳಿಂದ ಬಂದ ಲಕ್ಷಾಂತರು ಜನ ಹಾಲು ಉತ್ಪಾದಕರು ಧರಣಿಯಲ್ಲಿ ಭಾಗವಹಿಸಿದ್ದು, ಫ್ರೀಡಂ ಪಾರ್ಕ್ ಸುತ್ತಮುತ್ತ ಕೆಲವು ಸಮಯ ವಾಹನ ದಟ್ಟಣೆ ಉಂಟಾಯಿತು. ಧರಣಿ ವೇಳೆಯಲ್ಲಿ ಆನಂದ್‍ರಾವ್ ವೃತ್ತದಿಂದ ಕೆ.ಆರ್.ವೃತ್ತದ ವರೆಗಿನ ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಾಗಿದ್ದರಿಂದ ವಾಹನ ಸವಾರರು ಪರದಾಡಿದರು.

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor