ಕೆಪಿಸಿಸಿ ಕಾರ್ಯದರ್ಶಿ-ಸಂಯೋಜಕರ ನೇಮಕಾತಿಗಾಗಿ ಆಯ್ಕೆ ಸಮಿತಿ ರಚನೆ
ಸಾಂದರ್ಭಿಕ ಚಿತ್ರ
ಬೆಂಗಳೂರು : ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ(ಕೆಪಿಸಿಸಿ) ಅಡಿಯಲ್ಲಿ ಕಾರ್ಯನಿರ್ವಹಿಸಲು ಕಾರ್ಯದರ್ಶಿಗಳು ಹಾಗೂ ಸಂಯೋಜಕರ ನೇಮಕಾತಿಗಾಗಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅಧ್ಯಕ್ಷತೆಯಲ್ಲಿ ಆಯ್ಕೆ ಸಮಿತಿಯನ್ನು ರಚಿಸಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ತಿಳಿಸಿದ್ದಾರೆ.
ಮಂಗಳವಾರ ಈ ಸಂಬಂಧ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಆಯ್ಕೆಯಲ್ಲಿ ಸಮಿತಿಯಲ್ಲಿ ಮಾಜಿ ಸಚಿವ ದಿನೇಶ್ ಗುಂಡೂರಾವ್ ಸಹ-ಅಧ್ಯಕ್ಷ, ಕೆಪಿಸಿಸಿ ಉಪಾಧ್ಯಕ್ಷ ಡಾ.ಬಿ.ಎಲ್.ಶಂಕರ್, ಮಾಜಿ ಸಚಿವರಾದ ನಸೀರ್ ಅಹ್ಮದ್ ಹಾಗೂ ರಾಣಿ ಸತೀಶ್ ಅವರನ್ನು ಸದಸ್ಯರನ್ನಾಗಿ ಮಾಡಲಾಗಿದೆ ಎಂದು ಹೇಳಿದ್ದಾರೆ.
ಈ ಸಮಿತಿಗೆ ಪಕ್ಷ ಸಂಘಟನೆಯಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಕೆಪಿಸಿಸಿಗೆ ಕಾರ್ಯದರ್ಶಿಗಳು ಹಾಗೂ ಸಂಯೋಜಕರನ್ನು ಆಯ್ಕೆ ಮಾಡುವ ಜವಾಬ್ದಾರಿ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಕೆಪಿಸಿಸಿ ವತಿಯಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಆಸಕ್ತಿಯುಳ್ಳ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಕೆಪಿಸಿಸಿ ಕಚೇರಿಯಿಂದ ಅರ್ಜಿಗಳನ್ನು ಸ್ವೀಕರಿಸಿ, ಭರ್ತಿ ಮಾಡಿದ ಅರ್ಜಿಗಳನ್ನು ಅ.15ರೊಳಗಾಗಿ ಕೆಪಿಸಿಸಿಗೆ ಸಲ್ಲಿಸಬೇಕು. ಅರ್ಜಿಗಳನ್ನು ಪರಿಶೀಲಿಸಿ ಸಂದರ್ಶನಕ್ಕೆ ಸಮಯ ನಿಗದಿಪಡಿಸಿ ಅರ್ಜಿದಾರರಿಗೆ ಮಾಹಿತಿಯನ್ನು ನೀಡಲಾಗುವುದು ಎಮದು ಹರಿಪ್ರಸಾದ್ ತಿಳಿಸಿದ್ದಾರೆ.