ಬೆಂಗಳೂರು : ಕಸ್ತೂರಿ ರಂಗನ್ ವರದಿ ಕುರಿತು ಕೇಂದ್ರದ ಕರಡು ಅಧಿಸೂಚನೆ ಮೇಲೆ ರಾಜ್ಯ ಸರಕಾರದ ಪರವಾಗಿ ಅರಣ್ಯ ಸಚಿವ ರಾಮಲಿಂಗಾ ರೆಡ್ಡಿ ಉತ್ತಮ ನಿರ್ಣಯ ಮಂಡಿಸಿದ್ದಾರೆ. ಆದರೆ ಈ ವರದಿ ಕುರಿತ ತಜ್ಞರ ಸಮಿತಿಗೆ ಅರಣ್ಯ ಸಂಪತ್ತಿನ ಬಗ್ಗೆ ಅನುಕಂಪ ಇರುವವರನ್ನು ಸೇರ್ಪಡೆ ಮಾಡಬೇಕು ಎಂದು ಪರಿಷತ್ತಿನ ಕಾಂಗ್ರೆಸ್ ಸದಸ್ಯ ಬಿ.ಕೆ.ಹರಿಪ್ರಸಾದ್ ಒತ್ತಾಯಿಸಿದ್ದಾರೆ.

ಮಂಗಳವಾರ ಪರಿಷತ್ತಿನಲ್ಲಿ ಮಾತನಾಡಿದ ಅವರು, ಕಸ್ತೂರಿ ರಂಗನ್ ವರದಿ ಕುರಿತಾಗಿ ರಾಜ್ಯ ಸರಕಾರ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತಜ್ಞರ ಸಮಿತಿ ರಚಿಸಿದ್ದು, ಸಮಿತಿಯಲ್ಲಿ ಕಂದಾಯ, ಅರಣ್ಯ ಅಧಿಕಾರಿಗಳು, ರೈತ ಸಮುದಾಯದ ಪ್ರತಿನಿಧಿಗಳು, ಕೈಗಾರಿಕಾ ಉದ್ಯಮಿಗಳು, ಅರಣ್ಯ ಹಾಗೂ ಪರಿಸರ ವಿಷಯದಲ್ಲಿ ಪರಿಣಿತಿ ಹೊಂದಿರುವ ಶೈಕ್ಷಣಿಕ ಸಂಸ್ಥೆಗಳ ವಿಜ್ಞಾನಿಗಳನ್ನು ಸೇರಿಸಲಾಗಿದೆ ಎಂದರು.

ಈ ಸಮಿತಿಯು ಕಸ್ತೂರಿ ರಂಗನ್ ವರದಿಯಲ್ಲಿನ ನ್ಯೂನ್ಯತೆಗಳನ್ನು ಸರಿಪಡಿಸಿ ಸೂಕ್ತ ಮಾರ್ಪಾಡುಗಳನ್ನು ಸೂಚಿಸಲು ಕ್ರಮಕೈಗೊಳ್ಳಲಾಗುವುದು. ಭೌತಿಕವಾಗಿ ಸರ್ವೇ ಸಂಖ್ಯೆವಾರು ಸಮೀಕ್ಷೆ ಮಾಡಲು ನಿರ್ಧರಿಸಿದ್ದು, ಈ ಪ್ರಕ್ರಿಯೆ ನಡೆಸಲು ಒಂದು ವರ್ಷ ಕಾಲಾವಕಾಶ ನೀಡುವಂತೆ ಕೇಂದ್ರಕ್ಕೆ ಕೇಳಲು ತೀರ್ಮಾನಿಸಿದ್ದಾರೆ ಎಂದು ಅವರು ವಿವರಿಸಿದರು.

ಕೇರಳದಲ್ಲಿ ಒಮನ್ ಅವರ ನೇತೃತ್ವದಲ್ಲಿ ಸಮಿತಿ ರಚನೆಯಾಗಿ ಭೌತಿಕ ಸಮೀಕ್ಷೆ ಮಾಡಲಾಗಿತ್ತು. ಉತ್ತರ ಕನ್ನಡದಲ್ಲಿ ಶೇ.80ರಷ್ಟು ಕಾಡು ಪ್ರದೇಶವಿದೆ. ಅಲ್ಲಿ ಇವತ್ತಿನವರೆಗೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ತರಲು ಸಾಧ್ಯವಾಗುತ್ತಿಲ್ಲ. ಇವೆಲ್ಲಾ ಸೂಕ್ಷ್ಮ ವಿಚಾರವಾಗಿದ್ದು, ಪಶ್ಚಿಮ ಘಟ್ಟದಲ್ಲಿ ಮೋಡಗಳು ತಗುಲಿ ನಮ್ಮಲ್ಲಿ ಮಳೆ ಬರುವುದು. ಈ ಪ್ರದೇಶಗಳಿಗೆ ಬರುವ ಕೈಗಾರಿಕೋದ್ಯಮಿಗಳು, ಉದ್ಯಮಿಗಳು ತನ್ನ ಹಾಗೂ ತನ್ನ ಕುಟುಂಬಕ್ಕಾಗಿ ಬರುತ್ತಾನೆ ಹೊರತು, ದೇಶಕ್ಕಾಗಿ ಬರುವುದಿಲ್ಲ. ದೇಶಕ್ಕೆ ಅವರ ಕೊಡುಗೆಯನ್ನು ಮುಂದೆ ಪರಿಸರಕ್ಕೆ ಧಕ್ಕೆಯಿಂದಾಗುವ ಅನಾಹುತಗಳ ಜೊತೆ ಹೋಲಿಕೆ ಮಾಡಿ ಆಲೋಚಿಸಬೇಕು. ಮುಂದಿನ ಪೀಳಿಗೆಗೆ ನಾವು ಏನು ಬಿಟ್ಟು ಹೋಗುತ್ತೇವೆ ಎಂಬುದು ಮುಖ್ಯ ಎಂದು ಅವರು ಹೇಳಿದರು.

ಆದ್ದರಿಂದ ಈ ತಜ್ಞರ ಸಮಿತಿ ಮಾಡುವಾಗ ಎಲ್ಲ ಪರಿಸರ, ದೇಶದ ಮೇಲೆ ಕಾಳಜಿ ಇರುವ, ಅರಣ್ಯ ಸಂಪತ್ತು ಕಾಪಾಡುವ ಆಲೋಚನೆ ಇರುವ ನ್ಯಾಯಾಧೀಶರನ್ನು ಸಮಿತಿಗೆ ಸೇರಿಸಿಕೊಳ್ಳಬೇಕು. ನಮ್ಮಲ್ಲಿ ಪರಿಸರ ಮಾಲೀನ್ಯ ನಿಯಂತ್ರಣ ಮಂಡಳಿ ಇದೆ. ಆದರೆ ಬೆಂಗಳೂರಿನಲ್ಲಿ ಮಾಲಿನ್ಯ ಕಡಿಮೆಯಾಗಿಲ್ಲ. ಹೀಗಾಗಿ ದೇಶ ಹಾಗೂ ರಾಜ್ಯದ ಅರಣ್ಯ ಸಂಪತ್ತಿನ ಬಗ್ಗೆ ಅನುಕಂಪ ಇರುವವರನ್ನು ಒಳಗೊಂಡಂತೆ ಸಮಿತಿ ರಚಿಸಬೇಕು ಎಂದು ಸಚಿವ ರಾಮಲಿಂಗಾ ರೆಡ್ಡಿ ಅವರಿಗೆ ಮನವಿ ಮಾಡುವೆ ಎಂದು ಅವರು ಹೇಳಿದರು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor