ಉಪ್ಪು ಸೇವನೆ ಕಡಿತ ಕ್ರಿಯಾ ಯೋಜನೆ ಬಿಡುಗಡೆ; 2030ರೊಳಗೆ ಉಪ್ಪಿನ ಸೇವನೆ ಶೇ.30ರಷ್ಟು ಕಡಿಮೆ ಮಾಡುವ ಗುರಿ
ಬೆಂಗಳೂರು : ರಾಜ್ಯದಲ್ಲಿ ಅತಿಯಾದ ಉಪ್ಪಿನ ಸೇವನೆಯನ್ನು ಕಡಿಮೆ ಮಾಡಿ, ಆರೋಗ್ಯಕರ ಆಹಾರ ಪದ್ಧತಿಯನ್ನು ಉತ್ತೇಜಿಸುವ ಉದ್ದೇಶದಿಂದ ‘ಕರ್ನಾಟಕ ರಾಜ್ಯ ಬಹುಕ್ಷೇತ್ರೀಯ ಉಪ್ಪು ಸೇವನೆ ಕಡಿತ ಮತ್ತು ಆರೋಗ್ಯಕರ ಆಹಾರ ಪದ್ಧತಿಗಳ ಉತ್ತೇಜನ ಕ್ರಿಯಾ ಯೋಜನೆ’ಯನ್ನು ಆರೋಗ್ಯ ಸಚಿವ ಯು.ಟಿ.ಖಾದರ್ ಬಿಡುಗಡೆ ಮಾಡಿದ್ದಾರೆ.
ಮಂಗಳವಾರ ನಗರದ ವಿಧಾನಸೌಧದಲ್ಲಿ ನಡೆದ ತಾಂತ್ರಿಕ ಸಲಹಾ ಸಮೂಹದ ಸಭೆಯಲ್ಲಿ ಮಾಜಿ ಸಚಿವ ದಿನೇಶ್ ಗುಂಡೂರಾವ್ ಹಾಗೂ ರಾಜ್ಯಸಭಾ ಸದಸ್ಯ ಮನ್ಸೂರ್ ಅಲಿಖಾನ್ ಉಪಸ್ಥಿತಿಯಲ್ಲಿ ಕ್ರಿಯಾ ಯೋಜನೆ ಬಿಡುಗಡೆ ಮಾಡಲಾಯಿತು. ರಾಜ್ಯಾದ್ಯಂತ ಆರೋಗ್ಯಕರ ಆಹಾರ ಪದ್ಧತಿಯನ್ನು ಉತ್ತೇಜಿಸುವುದು, ಅತಿಯಾದ ಉಪ್ಪಿನ ಸೇವನೆಯನ್ನು ತಗ್ಗಿಸುವುದು ಹಾಗೂ ಸಾಂಕ್ರಾಮಿಕವಲ್ಲದ ರೋಗಗಳ ನಿಯಂತ್ರಣಕ್ಕೆ ಸಮನ್ವಯಿತ ಕ್ರಮ ಕೈಗೊಳ್ಳುವ ಕುರಿತು ಸಭೆಯಲ್ಲಿ ಚರ್ಚಿಸಲಾಗಿದೆ.
ಅತಿಯಾದ ಉಪ್ಪಿನ ಸೇವನೆಯು ಅಧಿಕ ರಕ್ತದೊತ್ತಡದೊಂದಿಗೆ ಸಂಬಂಧ ಹೊಂದಿದ್ದು, ಪಾಶ್ರ್ವವಾಯು ಸೇರಿದಂತೆ ಹೃದಯರಕ್ತನಾಳದ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ. ಭಾರತದಲ್ಲಿ ವ್ಯಕ್ತಿಯೊಬ್ಬರು ದಿನಕ್ಕೆ ಸರಾಸರಿ 8 ರಿಂದ 11 ಗ್ರಾಂ ಉಪ್ಪು ಸೇವಿಸುತ್ತಾರೆ ಎಂದು ಅಂದಾಜಿಸಲಾಗಿದ್ದು, ವಿಶ್ವ ಆರೋಗ್ಯ ಸಂಸ್ಥೆ ಶಿಫಾರಸು ಮಾಡಿರುವ ದಿನಕ್ಕೆ 5 ಗ್ರಾಂಗಿಂತ ಕಡಿಮೆ ಪ್ರಮಾಣಕ್ಕಿಂತ ಇದು ಸುಮಾರು ಎರಡು ಪಟ್ಟು ಹೆಚ್ಚಾಗಿದೆ.
ಸಚಿವ ಯು.ಟಿ.ಖಾದರ್ ಮಾತನಾಡಿ, ಆರೋಗ್ಯಕರ ಆಹಾರ ಪದ್ಧತಿಗಳ ಕುರಿತು ಸಮನ್ವಯಿತ ಮತ್ತು ನಿರಂತರ ಕ್ರಮಗಳನ್ನು ಕೈಗೊಳ್ಳಲು ವಿವಿಧ ಇಲಾಖೆಗಳನ್ನೊಳಗೊಂಡ ರಾಜ್ಯ ಮಟ್ಟದ ಸ್ಟೀರಿಂಗ್ ಸಮಿತಿಯನ್ನು ರಚಿಸುವಂತೆ ಕರೆ ನೀಡಿದರು. ಕೊಬ್ಬು, ಸಕ್ಕರೆ ಮತ್ತು ಉಪ್ಪಿನ ಪ್ರಮಾಣ ಹೆಚ್ಚಿರುವ ಆಹಾರಗಳ ಕುರಿತು ರಾಜ್ಯ ಸರ್ಕಾರ ಈಗಾಗಲೇ ನಿಯಮಗಳು ಮತ್ತು ಕ್ರಮಗಳನ್ನು ಜಾರಿಗೊಳಿಸಿದ್ದು, ಆರೋಗ್ಯಕರ ಆಹಾರ ಪರಿಸರವನ್ನು ಮತ್ತಷ್ಟು ಬಲಪಡಿಸಲು ಇದು ಆಧಾರ ಒದಗಿಸಲಿದೆ ಎಂದು ತಿಳಿಸಿದ್ದಾರೆ.
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿ ಉಪಕುಲಪತಿ ಡಾ.ಭಗವಾನ್ ಬಿ.ಸಿ. ಅಧ್ಯಕ್ಷತೆಯಲ್ಲಿ ತಾಂತ್ರಿಕ ಸಲಹಾ ಸಮಿತಿ ಕಾರ್ಯನಿರ್ವಹಿಸುತ್ತಿದ್ದು, ಉಪ್ಪಿನ ಸೇವನೆ ಕಡಿತ ಹಾಗೂ ಆರೋಗ್ಯಕರ ಆಹಾರ ಪದ್ಧತಿಗಳ ಕುರಿತು ಸಾಕ್ಷ್ಯಾಧಾರಿತ ಕ್ರಮಗಳಿಗೆ ತಾಂತ್ರಿಕ ಮಾರ್ಗದರ್ಶನ ನೀಡುತ್ತಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ, ನಿಮ್ಹಾನ್ಸ್, ಶೈಕ್ಷಣಿಕ ಸಂಸ್ಥೆಗಳು ಹಾಗೂ ಸಾರ್ವಜನಿಕ ಆರೋಗ್ಯ ಕ್ಷೇತ್ರದ ವಿವಿಧ ಸಂಸ್ಥೆಗಳ ತಜ್ಞರು ಸಮಿತಿಯಲ್ಲಿ ಭಾಗವಹಿಸಿದ್ದಾರೆ.
ಮೂರು ಹಂತಗಳಲ್ಲಿ ಕ್ರಮ: 2030ರ ವೇಳೆಗೆ ಜನಸಂಖ್ಯಾ ಮಟ್ಟದಲ್ಲಿ ಉಪ್ಪಿನ ಸೇವನೆಯನ್ನು ಶೇ.30ರಷ್ಟು ಕಡಿಮೆ ಮಾಡುವ ಜಾಗತಿಕ ಗುರಿಗೆ ಅನುಗುಣವಾಗಿ ಕ್ರಿಯಾ ಯೋಜನೆ ರೂಪಿಸಲಾಗಿದೆ. ಪ್ರತಿ ವ್ಯಕ್ತಿಯ ದಿನದ ಉಪ್ಪಿನ ಸೇವನೆಯನ್ನು 5 ಗ್ರಾಂಗಿಂತ ಕಡಿಮೆ ಮಾಡುವ ಡಬ್ಲ್ಯೂಎಚ್‍ಒ ಶಿಫಾರಸಿನತ್ತ ಪ್ರಗತಿ ಸಾಧಿಸುವುದು ಇದರ ಮತ್ತೊಂದು ಗುರಿಯಾಗಿದೆ.
ಮನೆಯಲ್ಲಿನ ಆಹಾರ, ಮನೆಯಿಂದ ಹೊರಗೆ ಸೇವಿಸುವ ಆಹಾರ ಹಾಗೂ ಸಂಸ್ಕರಿತ ಮತ್ತು ಪ್ಯಾಕೇಜ್ ಮಾಡಿದ ಆಹಾರ. ಈ ಮೂರು ಪ್ರಮುಖ ಕ್ಷೇತ್ರಗಳಲ್ಲಿ ಉಪ್ಪಿನ ಸೇವನೆಯನ್ನು ಕಡಿಮೆ ಮಾಡುವ ಕ್ರಮಗಳನ್ನು ಯೋಜನೆ ಒಳಗೊಂಡಿದೆ. ಹೆಚ್ಚುವರಿ ಉಪ್ಪು ಬಳಕೆಯನ್ನು ಕಡಿಮೆ ಮಾಡುವುದು, ಆರೋಗ್ಯಕರ ಆಹಾರ ಆಯ್ಕೆಗಳನ್ನು ಉತ್ತೇಜಿಸುವುದು, ಸಂಸ್ಕರಿತ ಆಹಾರಗಳಲ್ಲಿ ಉಪ್ಪಿನ ಪ್ರಮಾಣ ಕಡಿಮೆ ಮಾಡಲು ಉತ್ತೇಜನ ನೀಡುವುದು ಮತ್ತು ಆರೋಗ್ಯ ವ್ಯವಸ್ಥೆಯಲ್ಲಿ ಆಹಾರ ಸಂಬಂಧಿತ ಸಮಾಲೋಚನೆಯನ್ನು ಬಲಪಡಿಸುವುದು ಪ್ರಮುಖ ಕ್ರಮಗಳಾಗಿವೆ.
ಈ ವೇಳೆಯಲ್ಲಿ ಆರೋಗ್ಯ ಇಲಾಖೆ ಉಪನಿರ್ದೇಶಕ ಡಾ.ರಘುನಂದನ್, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿಯ ಡಾ.ಅಮೃತ್ ಕದಮ್, ಕೇಂದ್ರ ಸರಕಾರದ ವೈಜ್ಞಾನಿಕ ಸಲಹೆಗಾರರ ಸಲಹಾ ಸಮಿತಿ ಸದಸ್ಯ ಡಾ.ಯು.ಎಸ್.ವಿಶಾಲ್ ರಾವ್, ಡಾ.ಮನಿಕಾ ಶರ್ಮಾ, ಅಮಿತ್ ಕರ್ಣಿಕ್ ಸೇರಿದಂತೆ ಹಲವರು ಇದ್ದರು.