ಆರೋಗ್ಯ ಸೇವಾ ದಕ್ಷತೆಗೆ ತಜ್ಞ ವೈದ್ಯರ ದೂರದರ್ಶಿ ಸಮಿತಿ : ಯು.ಟಿ.ಖಾದರ್
ಬೆಂಗಳೂರು : ಆರೋಗ್ಯವಲಯದ ದಕ್ಷತೆ ಹೆಚ್ಚಿಸಲು ತಜ್ಞ ವೈದ್ಯರನ್ನು ಒಳಗೊಂಡ ದೂರದರ್ಶಿ ಸಮಿತಿ(ವಿಷನ್ ಕಮಿಟಿ) ರಚಿಸುವುದಾಗಿ ಆರೋಗ್ಯ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.
ಮಂಗಳವಾರ ಜಯನಗರದಲ್ಲಿರುವ ಬ್ರೈನ್ಸ್ ಆಸ್ಪತ್ರೆಯಲ್ಲಿ ವಿಶ್ವ ತೀವ್ರಾಘಾತ ಜಾಗೃತಿ ದಿನಾಚರಣೆ ಮತ್ತು ವಿಶ್ವ ಪಾಶ್ರ್ವವಾಯು ಜಾಗೃತಿ ದಿನಾಚರಣೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ನ್ಯೂರೋ ಸರ್ಜಿಕಲ್ ರೋಬೋಟ್ ಯಂತ್ರವನ್ನು ಅನಾವರಣಗೊಳಿಸಿ ಮಾತನಾಡಿದರು.
ಕಾಯಿಲೆ ಬಂದಾಗ ವೈದ್ಯರ ಬಳಿ ಹೋಗುವುದಕ್ಕಿಂತ ಕಾಯಿಲೆ ಬಾರದಂತೆ ಮುನ್ನೆಚ್ಚರಿಕೆ ವಹಿಸುವುದು ಒಳಿತು. ಈ ನಿಟ್ಟಿನಲ್ಲಿ ವೈದ್ಯರು ಸಮಾಜದಲ್ಲಿ ಜಾಗೃತಿ ಮೂಡಿಸಬೇಕು.ಮುಖ್ಯವಾಗಿ ತಾಯಂದಿರು ಜಾಗೃತರಾದರೆ ಆರೋಗ್ಯ ಸಮಾಜ ನಿರ್ಮಿಸಲು ಸಹಕಾರಿಯಾಗುತ್ತದೆ. ಶುದ್ಧ, ನೀರು, ಗಾಳಿ, ಆಹಾರ ಜನರಿಗೆ ದೊರಕುವ ನಿಟ್ಟಿನಲ್ಲಿ ಮತ್ತಷ್ಟು ನಿಯಂತ್ರಣ ಕಾಯ್ದೆಗಳನ್ನು ಜಾರಿಗೊಳಿಸಲು ಸರಕಾರ ಬದ್ಧವಾಗಿದೆ ಎಂದು ಖಾದರ್ ತಿಳಿಸಿದರು.
ಮಾಜಿ ಸಚಿವ ಹಾಗೂ ರಾಜ್ಯ ಸ್ಕೌಟ್ಸ್ ಆಯುಕ್ತ ಪಿ.ಜಿ.ಆರ್. ಸಿಂಧ್ಯಾ ಮಾತನಾಡಿ, ಬೆಂಗಳೂರು ನಗರವನ್ನು ಉತ್ತಮ ಆರೋಗ್ಯ ನಗರವನ್ನಾಗಿ ಮಾಡಲು ಸರಕಾರ ಮತ್ತು ವೈದ್ಯಕೀಯ ಸಮುದಾಯ ಜೊತೆಗೂಡಿ ಶ್ರಮಿಸಬೇಕು ಎಂದು ಹೇಳಿದರು.
ನರಶಸ್ತ್ರಚಿಕಿತ್ಸಾ ತಜ್ಞ ಡಾ.ವೆಂಕಟರಮಣ ಮಾತನಾಡಿದರು.
ಈ ವೇಳೆಯಲ್ಲಿ ಡಾ.ವೆಂಕಟರಮಣ ರಚಿಸಿರುವ ಇಂಗ್ಲಿಷ್ ಮೂಲದ ಕನ್ನಡ ಅನುವಾದಿತ ‘ಮೆದುಳಿನ ಅಘಾತ- ಸತ್ಯ ಹಾಗೂ ಮಿಥ್ಯ’ ಮತ್ತು ‘ಗೋಲ್ಡನ್ ಅವರ್’ ಎಂಬ ಪುಸ್ತಕಗಳನ್ನು ಲೋಕಾರ್ಪಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಲೇಖಕ ಡಾ.ಕೆ.ಆರ್.ಕಮಲೇಶ್, ಭಂತೆ ಧಮ್ಮರತ್ನ, ಭಂತೆ ಸುಗತಾನಂದ, ಸ್ಟಾರ್ ಡಮ್ ಪ್ರಕಾಶಕ ರಾಮ್ ಆನಂದ್ ಮತ್ತು ರೈಟ್ ಅವೆನ್ಯೂ ಮೆಡ್ ಟೆಕ್ ಸಿಇಒ ಆಯನ್ ಚಕ್ರವರ್ತಿ ಸೇರಿದಂತೆ ಹಲವರು ಭಾಗವಹಿಸಿದ್ದರು.