ಕೆಂಪೇಗೌಡ ವಿಮಾನ ನಿಲ್ದಾಣದ ಟರ್ಮಿನಲ್-1ರಲ್ಲಿ ಅತಿಕ್ರಮ ಪ್ರವೇಶಕ್ಕೆ ಯತ್ನ: ಆರೋಪಿ ವಿರುದ್ಧ ಪ್ರಕರಣ ದಾಖಲು
ಬೆಂಗಳೂರು : ವಿಮಾನ ನಿಲ್ದಾಣದ ಆವರಣದಲ್ಲಿ ಸಿಐಎಸ್‍ಎಫ್ ಸಿಬ್ಬಂದಿಯನ್ನು ತಳ್ಳಿಕೊಂಡು ಅತಿಕ್ರಮವಾಗಿ ಟರ್ಮಿನಲ್ ಪ್ರವೇಶಿಸಲು ಯತ್ನಿಸಿದ ವ್ಯಕ್ತಿಯ ವಿರುದ್ಧ ನಗರದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೆಂಪೇಗೌಡ ವಿಮಾನ ನಿಲ್ದಾಣದ ಟರ್ಮಿನಲ್-1ರ ನಿರ್ಗಮನ ದ್ವಾರ ಸಂಖ್ಯೆ 8ರಲ್ಲಿ ಜೂ.17ರ ರಾತ್ರಿ ಈ ಘಟನೆ ನಡೆದಿದೆ. ಸಿಐಎಸ್‍ಎಫ್ ಸಿಬ್ಬಂದಿ ನೀಡಿದ ದೂರಿನನ್ವಯ ಜಮ್ಮು ಕಾಶ್ಮೀರ ಮೂಲದ 22 ವರ್ಷದ ಸಾದದ್ ಮಹಮ್ಮದ್ ಬಾಬಾ ಎಂಬುವರ ವಿರುದ್ಧ ಸರಕಾರಿ ನೌಕರರ ಸಾರ್ವಜನಿಕ ಸೇವೆಗೆ ಅಡ್ಡಿಪಡಿಸಿದ ಆರೋಪದಡಿ ವಿಮಾನ ನಿಲ್ದಾಣ ಠಾಣೆಯಲ್ಲಿ ಪ್ರಕರಣ ದಾಖಲಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಜೂ.17ರಂದು ಇಂಡಿಗೋ ವಿಮಾನ ಸಂಖ್ಯೆ 6ಇ-6288ರಲ್ಲಿ ಬೆಂಗಳೂರಿನಿಂದ ದಕ್ಷಿಣ ಶ್ರೀನಗರಕ್ಕೆ ಪ್ರಯಾಣಿಸಲು ಸಾದದ್ ಮಹಮ್ಮದ್ ಬಾಬಾ ಅವರು ಏರ್ ಪೋರ್ಟ್‍ಗೆ ಬಂದಿದ್ದರು. ಆಗ ಟರ್ಮಿನಲ್ 1ರ ನಿರ್ಗಮನ ದ್ವಾರ ಸಂಖ್ಯೆ 8ರಲ್ಲಿ ಅತಿಕ್ರಮವಾಗಿ ಪ್ರವೇಶಿಸಲು ಮುಂದಾಗಿದ್ದು, ಈ ವೇಳೆ ಸಿಐಎಸ್‍ಎಫ್ ಸಿಬ್ಬಂದಿಯಾದ ನಿರಂಜನ್ ಸಿಂಗ್ ಹಾಗೂ ವೆಲ್ಲಿಸ್ವಾಮಿ ಅವರು ಆರೋಪಿಯನ್ನು ತಡೆದಿದ್ದಾರೆ. ಆದರೆ, ಸಿಬ್ಬಂದಿಯನ್ನು ತಳ್ಳಿಕೊಂಡು ಟರ್ಮಿನಲ್ ಪ್ರವೇಶಿಸಲು ಯತ್ನ ಮಾಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.