×
Ad

ರಾಜಧಾನಿಯಲ್ಲಿ 1,500 ರೌಡಿಶೀಟರ್ ಮನೆಗಳ ಮೇಲೆ ಪೊಲೀಸರ ದಾಳಿ, ಶೋಧ

Update: 2025-09-20 18:45 IST

ಬೆಂಗಳೂರು, ಸೆ. 20: ನಗರದಲ್ಲಿ ಇತ್ತೀಚೆಗೆ ಸರಗಳ್ಳತನ, ದರೋಡೆ ಸೇರಿದಂತೆ ಅಪರಾಧ ಚಟುವಟಿಕೆಗಳು ಹೆಚ್ಚುತ್ತಿದ್ದು, ಇವುಗಳ ನಿಯಂತ್ರಿಸಲು ಹಾಗೂ ಅಪರಾಧ ಹಿನ್ನೆಲೆಯುಳ್ಳವರ ಮೇಲೆ ನಿಗಾ ವಹಿಸಲು ಸೆ.19ರ ಶುಕ್ರವಾರ ತಡರಾತ್ರಿ ನಗರಾದ್ಯಂತ ಸುಮಾರು 1,500 ರೌಡಿಶೀಟರ್‍ಗಳ ಮನೆಗಳ ಮೇಲೆ ಬೆಂಗಳೂರು ಪೊಲೀಸರು ದಿಢೀರ್ ದಾಳಿ ನಡೆಸಿದ್ದಾರೆ.

ನಗರದ ಎಲ್ಲ ವಿಭಾಗಗಳ ಉಪ ವಿಭಾಗಗಳಲ್ಲಿ ಎಸಿಪಿಗಳ ನೇತೃತ್ವದಲ್ಲಿ ಹಲಸೂರು, ಬಾಣಸವಾಡಿ, ಇಂದಿರಾನಗರ, ಹೆಣ್ಣೂರು, ರಾಮಮೂರ್ತಿನಗರ, ಭಾರತಿನಗರ, ಶಿವಾಜಿನಗರ, ಆಡುಗೋಡಿ, ಕುಮಾರಸ್ವಾಮಿ ಲೇಔಟ್, ತಿಲಕ್‍ನಗರ ಸೇರಿದಂತೆ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯ ಸುಮಾರು 1,500 ರೌಡಿಶೀಟರ್‌ ಗಳ ಮನೆಗಳು, ಮದ್ಯದಂಗಡಿಗಳ ಮೇಲೆ ಜಂಟಿ ಕಾರ್ಯಾಚರಣೆ ಮಾಡಿ ಶೋಧ ಕೈಗೊಳ್ಳಲಾಯಿತು ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.

ಬೆಂಗಳೂರಿನ ಪಶ್ಚಿಮ ವಿಭಾಗದಲ್ಲಿ 222, ದಕ್ಷಿಣ ವಿಭಾಗದ 119, ಆಗ್ನೇಯ ವಿಭಾಗದ 120 ಸೇರಿದಂತೆ ಸರಿ ಸುಮಾರು 1,500 ರೌಡಿಶೀಟರ್‌ ಗಳ ಮನೆಗಳ ಮೇಲೆ ದಾಳಿ ನಡೆಸಲಾಗಿದ್ದು, ಒಟ್ಟು 127 ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಅಲ್ಲದೆ, ರೌಡಿಶೀಟರ್‌ ಗಳ ಪ್ರಸ್ತುತ ಕೆಲಸ, ಅವರ ಆದಾಯದ ಮೂಲ ಸೇರಿದಂತೆ ಮತ್ತಿತರ ವಿವರಗಳನ್ನು ಕಲೆ ಹಾಕಲಾಗಿದ್ದು, ಅಪರಾಧ ಕೃತ್ಯಗಳಲ್ಲಿ ಭಾಗಿಯಾಗದಂತೆ ಅವರಿಗೆ ಎಚ್ಚರಿಕೆ ಸಹ ನೀಡಲಾಗಿದೆ ಎಂದು ಸೀಮಂತ್ ಕುಮಾರ್ ಸಿಂಗ್ ಹೇಳಿದ್ದಾರೆ.

ದಾಳಿ ವೇಳೆಯಲ್ಲಿ ಸುಮಾರು 10 ಜನ ಮಾದಕ ಸೇವನೆ ಮಾಡಿರುವುದು ಇದುವರೆಗಿನ ಪರೀಕ್ಷೆಯ ವರದಿಯ ಮೂಲಕ ಧೃಡಪಟ್ಟಿದೆ ಹಾಗೂ ವಾರಂಟ್ ಜಾರಿಯಾದ ಬಳಿಕವೂ ನ್ಯಾಯಾಲಯದ ಮುಂದೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಕೆಲವರನ್ನು ವಶಕ್ಕೆ ಪಡೆಯಲಾಗಿದೆ. ಅಲ್ಲದೆ, ಪೊಲೀಸರ ತಪಾಸಣೆಗೆ ಅಡ್ಡಿಪಡಿಸಿದ ಇಬ್ಬರ ವಿರುದ್ಧ ಚಂದ್ರಾಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಕರ್ತವ್ಯಕ್ಕೆ ನಿರತರಾಗಿದ್ದ ಸಿಬ್ಬಂದಿ ಮೇಲೆ ಹಲ್ಲೆಗೈದ ಆರೋಪದಡಿ ಇಬ್ಬರು ಪಾನಮತ್ತ ಆರೋಪಿಗಳ ವಿರುದ್ಧವೂ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಸೀಮಂತ್ ಕುಮಾರ್ ಸಿಂಗ್ ವಿವರಿಸಿದ್ದಾರೆ.

ದಾಳಿ ಸಂದರ್ಭದಲ್ಲಿ ಕೆಲವರು ಮನೆಯಲ್ಲಿ ಇರದಿರುವುದು ಪತ್ತೆಯಾಗಿದೆ. ಅಂಥವರಿಗೆ ಕಾಲಮಿತಿ ನೀಡಿ, ಠಾಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗುವುದು ಎಂದು ಸೀಮಂತ್ ಕುಮಾರ್ ಸಿಂಗ್ ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News