ಹಜ್ ಯಾತ್ರೆ-2026 | ವೃತ್ತಿಪರರಿಗಾಗಿ 20 ದಿನಗಳ ಹಜ್ ಪ್ಯಾಕೇಜ್ : ಝುಲ್ಫಿಖಾರ್ ಅಹ್ಮದ್ ಖಾನ್
ಬೆಂಗಳೂರು : ಪವಿತ್ರ ಹಜ್ ಯಾತ್ರೆಯ ಅವಧಿಯು 40 ದಿನಗಳದ್ದು ಆಗಿರುತ್ತದೆ. ಇದೇ ಮೊದಲ ಬಾರಿಗೆ ಭಾರತೀಯ ಹಜ್ ಸಮಿತಿಯು ವೃತ್ತಿಪರರಿಗಾಗಿ 2026ನೆ ಸಾಲಿನ ಹಜ್ ಯಾತ್ರೆ ವೇಳೆ 20 ದಿನಗಳ ಹಜ್ ಪ್ಯಾಕೇಜ್ ಅನ್ನು ಪರಿಚಯಿಸುತ್ತಿದೆ ಎಂದು ರಾಜ್ಯ ಹಜ್ ಸಮಿತಿ ಅಧ್ಯಕ್ಷ ಝುಲ್ಫಿಖಾರ್ ಅಹ್ಮದ್ ಖಾನ್ ತಿಳಿಸಿದರು.
ನಗರದ ತಿರುಮೇನಹಳ್ಳಿಯಲ್ಲಿರುವ ಹಜ್ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಎನ್‍ಆರ್ ಐ, ಸಾಫ್ಟ್ ವೇರ್ ಇಂಜಿನಿಯರ್‍ಗಳು ಸೇರಿದಂತೆ ವೃತ್ತಿಪರರಿಗಾಗಿ 20 ದಿನಗಳ ಹಜ್ ಯಾತ್ರೆಯ ಪ್ಯಾಕೇಜ್ ಆರಂಭಿಸಲಾಗುತ್ತಿದೆ. ಭಾರತೀಯ ಹಜ್ ಸಮಿತಿ ನಡೆಸುವ ಖುರ್ರಾ(ಲಾಟರಿ) ಪ್ರಕ್ರಿಯೆ ಸಂದರ್ಭದಲ್ಲಿ ಯಾತ್ರಿಗಳಿಗೆ 20 ಅಥವಾ 40 ದಿನಗಳ ಆಯ್ಕೆ ಮುಂದಿರಿಸಲಾಗುತ್ತದೆ ಎಂದು ಹೇಳಿದರು.
20 ದಿನಗಳ ಪ್ಯಾಕೇಜ್‍ಗೆ ಆಯ್ಕೆಯಾದವರು ನೇರವಾಗಿ 40 ದಿನಗಳ ಪ್ಯಾಕೇಜ್ ಅಡಿಯಲ್ಲಿ ಬರುತ್ತಾರೆ. ಕೇಂದ್ರ ಸರಕಾರವು ಮೀನಾದಲ್ಲಿ ಭಾರತೀಯ ಹಜ್ ಯಾತ್ರಿಕರು ತಂಗಲು ಅಗತ್ಯವಿರುವ ವ್ಯವಸ್ಥೆ ಮಾಡಬೇಕಿರುವ ಹಿನ್ನೆಲೆಯಲ್ಲಿ 2026ನೆ ಸಾಲಿನ ಹಜ್ ಯಾತ್ರೆಗಾಗಿ ಶೀಘ್ರವೇ ಅರ್ಜಿಗಳನ್ನು ಆಹ್ವಾನಿಸಿದೆ ಎಂದು ಅವರು ತಿಳಿಸಿದರು.
ಜು.7ರಿಂದ ಆನ್‍ಲೈನ್ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಜು.31 ಕೊನೆಯ ದಿನವಾಗಿದೆ. ಆಸಕ್ತರು ಭಾರತೀಯ ಹಜ್ ಸಮಿತಿಯ ವೆಬ್‍ಸೈಟ್ https://hajcommittee.gov.in ಅಥವಾ Haj Suvidha App ಮುಖಾಂತರ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಖುರ್ರಾ(ಲಾಟರಿ)ದಲ್ಲಿ ಹಜ್ ಯಾತ್ರೆಗೆ ಆಯ್ಕೆಯಾಗುವವರು ಮೊದಲ ಕಂತಿನ ರೂಪದಲ್ಲಿ 1.50 ಲಕ್ಷ ರೂ.ಗಳನ್ನು ಜಮೆ ಮಾಡಬೇಕು ಎಂದು ಅವರು ತಿಳಿಸಿದರು.
ಅಝಿಝಿಯಾದಲ್ಲಿ ಪುರುಷರು ಹಾಗೂ ಮಹಿಳೆಯರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಬೇಕು ಎಂಬ ಬೇಡಿಕೆ ಬಹಳ ವರ್ಷಗಳಿಂದ ಇತ್ತು. ಈ ಬಾರಿ ಕೇಂದ್ರ ಸರಕಾರ ಹಾಗೂ ಸೌದಿ ಅರೇಬಿಯಾ ಸರಕಾರದ ಸಹಕಾರದೊಂದಿಗೆ ಅಝಿಝಿಯಾದಲ್ಲಿ ಪುರುಷರು ಹಾಗೂ ಮಹಿಳೆಯರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಝುಲ್ಫಿಖಾರ್ ಅಹ್ಮದ್ ಖಾನ್ ಹೇಳಿದರು.
ಭಾರತೀಯ ಹಜ್ ಸಮಿತಿಯ ಖುರ್ರಾದಲ್ಲಿ ಆಯ್ಕೆಯಾಗಿ ಹಜ್ ಯಾತ್ರೆಗೆ ಹೋಗುವವರಿಗೆ ಈ ಬಾರಿ ಕೇಂದ್ರ ಸರಕಾರವು ಮಕ್ಕಾ, ಮದೀನಾ ಹಾಗೂ ಮೀನಾದಲ್ಲಿ ಊಟದ ವ್ಯವಸ್ಥೆಯನ್ನು ಕಲ್ಪಿಸಲು ನಿರ್ಧರಿಸಿದೆ. ಹಜ್ ಯಾತ್ರೆ ಹಾಗೂ ಊಟಕ್ಕಾಗಿ ಎಷ್ಟು ಹಣ ಭರಿಸಬೇಕು ಎಂಬುದರ ಕುರಿತು ಇನ್ನೂ ನಿರ್ಧಾರವಾಗಿಲ್ಲ ಎಂದು ಅವರು ತಿಳಿಸಿದರು.
2025ನೆ ಸಾಲಿನಲ್ಲಿ ರಾಜ್ಯ ಹಜ್ ಸಮಿತಿಯಿಂದ ಯಾತ್ರೆಗೆ ತೆರಳುವವರಿಗೆ 3.30 ಲಕ್ಷ ರೂ.ನಿಗದಿ ಪಡಿಸಲಾಗಿತ್ತು. 2026ನೆ ಸಾಲಿನ ಹಜ್ ಯಾತ್ರೆಗೆ ಎಷ್ಟು ಹಣ ಭರಿಸಬೇಕು ಎಂಬುದರ ಕುರಿತು ಕೇಂದ್ರ ಸರಕಾರ ಇನ್ನೂ ನಿರ್ಧರಿಸಿಲ್ಲ. ಹಜ್ ಯಾತ್ರೆ ಕೈಗೊಳ್ಳಲು ಬಯಸುವವರಿಗೆ ಶೀಘ್ರವೇ ಪಾಸ್‍ಪೋರ್ಟ್‍ಗಳು ಲಭ್ಯವಾಗುವಂತೆ ಮಾಡಲು ಪ್ರಾದೇಶಿಕ ಪಾಸ್‍ಪೋರ್ಟ್ ಅಧಿಕಾರಿಗಳಿಗೆ ಮನವಿ ಮಾಡಿದ್ದೇನೆ ಎಂದು ಅವರು ಹೇಳಿದರು.
ಹಜ್ ಯಾತ್ರೆಗೆ ಹೋಗುವವರು ಆನ್‍ಲೈನ್ ನಲ್ಲಿ ಅರ್ಜಿ ಸಲ್ಲಿಸಿದ ಬಳಿಕ, ರಾಜ್ಯ ಹಜ್ ಸಮಿತಿ ಕಚೇರಿಗೆ ಮಾಹಿತಿ ನೀಡಿದರೆ, ಆದಷ್ಟು ಬೇಗ ಅವರಿಗೆ ಪಾಸ್‍ಪೋರ್ಟ್ ಕಚೇರಿಯಲ್ಲಿ ಭೇಟಿಗೆ ಅವಕಾಶ ಕಲ್ಪಿಸಿ, ಪಾಸ್‍ಪೋರ್ಟ್ ತ್ವರಿತವಾಗಿ ಸಿಗುವಂತೆ ವ್ಯವಸ್ಥೆ ಮಾಡಲಾಗುವುದು. ಈಗಾಗಲೇ ಪಾಸ್‍ಪೋರ್ಟ್ ಹೊಂದಿದ್ದರೆ ಅದರ ಅವಧಿಯು 2026ರ ಡಿ.31ರವರೆಗೆ ಇರಬೇಕು ಎಂದು ಝುಲ್ಫಿಖಾರ್ ಅಹ್ಮದ್ ಖಾನ್ ತಿಳಿಸಿದರು.
65 ವರ್ಷ ಮೇಲ್ಪಟ್ಟವರ ಮೀಸಲಾತಿ ವರ್ಗದಲ್ಲಿ ಪ್ರಯಾಣ ಬೆಳೆಸುವವರ ಜೊತೆಗೆ ಹೋಗುವವರು 60 ವರ್ಷಕ್ಕಿಂತ ಕಡಿಮೆ ಇರಬೇಕು. 12 ವರ್ಷ ಮೇಲ್ಪಟ್ಟ ಮಕ್ಕಳು ಮಾತ್ರ ಹಜ್ ಯಾತ್ರೆಗೆ ಅರ್ಜಿ ಸಲ್ಲಿಸಲು ಅರ್ಹರಿರುತ್ತಾರೆ. ಮೆಹರಮ್ ಕೋಟದಲ್ಲಿ 45 ವರ್ಷ ಮೇಲ್ಪಟ್ಟ ಮಹಿಳೆಯರು ಸಂಗಾತಿ(ಮೆಹರಮ್)ಯಿಲ್ಲದೆ ಹಜ್ ಯಾತ್ರೆಗೆ ತೆರಳಬಹುದಾಗಿದೆ ಎಂದು ಅವರು ಹೇಳಿದರು.
ಹಜ್‍ಯಾತ್ರೆಗೆ ಅರ್ಜಿ ಸಲ್ಲಿಸಲು ಆಧಾರ್ ಕಾರ್ಡ್, ಪಾಸ್‍ಪೋರ್ಟ್ ಅಳತೆಯ ಭಾವಚಿತ್ರ, ಮತದಾರರ ಗುರುತಿನ ಚೀಟಿ ಹಾಗೂ ಪಾಸ್‍ಪೋರ್ಟ್ ಇದ್ದರೆ ಸಾಕು. ಯಾರಿಗಾದರೂ ಅರ್ಜಿ ಸಲ್ಲಿಸಲು ಸಮಸ್ಯೆ ಆಗುತ್ತಿದ್ದರೆ ಅವರು ನಮ್ಮ ಕಚೇರಿಯ ಈ ಮೊಬೈಲ್ ಸಂಖ್ಯೆಗಳಾದ 7892189162, 9483503132 ಅನ್ನು ಕಚೇರಿಯ ಕೆಲಸದ ವೇಳೆ(ಬೆಳಗ್ಗೆ 10 ರಿಂದ ಸಂಜೆ 5 ಗಂಟೆ) ಸಂಪರ್ಕಿಸಿ ತಮ್ಮ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದಾಗಿದೆ ಎಂದು ಝುಲ್ಫಿಖಾರ್ ಅಹ್ಮದ್ ಖಾನ್ ತಿಳಿಸಿದರು.