ಬೆಂಗಳೂರು : ರಾಜ್ಯದ ಏಳು ಜಿಲ್ಲೆಗಳ 500 ಕೆರೆಗಳ ಪುನಶ್ಚೇತನಕ್ಕೆ ವಿಶ್ವಬ್ಯಾಂಕ್ ನೆರವಿನ ಯೋಜನೆಯಡಿ 150ಕೋಟಿ ರೂ.ಸಮಗ್ರ ಯೋಜನಾ ವರದಿ ಸಿದ್ಧವಾಗಿದ್ದು, ಸಮರೋಪಾದಿಯಲ್ಲಿ ಕೆರೆ ಅಭಿವೃದ್ಧಿ ಮಾಡಬೇಕು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರ ಖಂಡ್ರೆ, ಜಿ.ಪಂ.ಸಿಇಓಗಳಿಗೆ ಸೂಚನೆ ನೀಡಿದ್ದಾರೆ.

ಮಂಗಳವಾರ ವಿಕಾಸಸೌಧದ ತಮ್ಮ ಕಚೇರಿಯಲ್ಲಿ ಜಿ.ಪಂ. ಮುಖ್ಯಕಾರ್ಯನಿರ್ವಹಣಾಧಿಕಾರಿಗಳೊಂದಿಗೆ ಬರ ಸ್ಥಿತಿ ಹಿನ್ನೆಲೆಯಲ್ಲಿ ಗ್ರಾಮಗಳ ಕುಡಿಯುವ ನೀರಿನ ಸಮಸ್ಯೆ ಕುರಿತಂತೆ ವಿಡಿಯೋ ಸಂವಾದ ನಡೆಸಿದ ಅವರು, ವಿಶ್ವ ಬ್ಯಾಂಕ್ ನೆರವಿನ ಜೊತೆಗೆ ವಿಬಿ-ಜಿ ರಾಮ್ ಜಿ ಸಹಯೋಗದಲ್ಲಿ ಕೆರೆಗಳ ಹೂಳು ತೆಗೆಯುವುದು, ಏರಿ ದುರಸ್ತಿ, ಏರಿ ಎತ್ತರಿಸುವುದು, ಸೌಂದರ್ಯೀಕರಣ, ನಾಲೆಗಳ ದುರಸ್ತಿ ಮಾಡಬೇಕು ಎಂದು ನಿರ್ದೇಶನ ನೀಡಿದರು.

ಇದೀಗ ಮಳೆ ಇಲ್ಲದ ಕಾರಣ ಕೆರೆಗಳು ಬತ್ತಿ ಹೋಗಿದ್ದು, ಕೆರೆ, ಕಾಲುವೆ ಪುನಶ್ಚೇತನಕ್ಕೆ ಸೂಕ್ತ ಸಮಯ. ಹಿಂಗಾರು ಮಳೆಯಾದರೆ ಈ ಕೆರೆಗಳಿಗೆ ನೀರು ಬರುತ್ತದೆ. ಮುಂದಿನ ಬೇಸಿಗೆಯಲ್ಲಿ ಎದುರಾಗಬಹುದಾದ ನೀರಿನ ಸಮಸ್ಯೆಗೆ ಪರಿಹಾರ ಸಾಧ್ಯವಾಗುತ್ತದೆ. ಭೂಮಿಯ ತೇವಾಂಶ ಮತ್ತು ಅಂತರ್ಜಲ ಮಟ್ಟವೂ ಹೆಚ್ಚುತ್ತದೆ. ಹೀಗಾಗಿ ತಕ್ಷಣವೇ ಕಾರ್ಯಪ್ರವೃತ್ತರಾಗಬೇಕು ಎಂದು ಅವರು ತಿಳಿಸಿದರು.

ವಿಶ್ವ ಬ್ಯಾಂಕ್ ಯೋಜನೆಯಡಿ ಬೆಂ.ಗ್ರಾಮಾಂತರ-68, ಬೆಂ.ನಗರ-67, ಬೀದರ್-44, ಚಿಕ್ಕಬಳ್ಳಾಪುರ-90, ಕಲಬುರ್ಗಿ-49, ತುಮಕೂರು-96 ಮತ್ತು ಕೋಲಾರ ಜಿಲ್ಲೆಯ-86 ಕೆರೆಗಳ ಪುನಶ್ಚೇತನಕ್ಕೆ ಯೋಜನೆ ರೂಪಿಸಲಾಗಿದೆ. ಎಲ್ಲ ಗ್ರಾಮಗಳಿಗೂ ಶುದ್ಧ ಕುಡಿಯುವ ನೀರು ಪೂರೈಕೆ ಆಗುತ್ತಿರುವುದನ್ನು ಸಿಇಓಗಳು ಮತ್ತು ಪಿಡಿಓಗಳು ಖಚಿತಪಡಿಸಿಕೊಳ್ಳಬೇಕು. ನಿಯಮಿತವಾಗಿ ನೀರಿನ ಪರೀಕ್ಷೆ ಮಾಡಬೇಕು. ಕಲುಷಿತ ನೀರಿನ ದೂರು ಬಂದರೆ ಕೂಡಲೇ ಜಲ ಮೂಲದಿಂದ ಹಿಡಿದು ಮನೆಯ ನಲ್ಲಿಯ ವರೆಗೆ ಪರಿಶೀಲನೆ ನಡೆಸಿ, ತ್ಯಾಜ್ಯ ನೀರು ಸೇರದಂತೆ ಕ್ರಮವಹಿಸಬೇಕು ಎಂದು ಅವರು ಸೂಚಿಸಿದರು.

ಕಾಮಗಾರಿಗೆ ವೇಗ ನೀಡಿ: ಬೆಂಗಳೂರು, ಬೆಳಗಾವಿ, ಉತ್ತರ ಕನ್ನಡ, ಧಾರವಾಡ, ಕೊಡಗು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ವಿಬಿ-ಜಿ ರಾಮ್ ಜಿ ಅಡಿ ಮಾನವ ದಿನ ಸೃಜನೆ ಕಡಿಮೆ ಪ್ರಮಾಣದಲ್ಲಿದೆ. ಪ್ರಸ್ತುತ ವಸತಿ ಯೋಜನೆಗಳನ್ನೂ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ವ್ಯಾಪ್ತಿಗೆ ಸೇರಿಸಿರುವ ಹಿನ್ನೆಲೆಯಲ್ಲಿ ಎಲ್ಲ ನಗರ ಪಟ್ಟಣದಲ್ಲೂ ಉದ್ಯೋಗ ನೀಡಲು ಅವಕಾಶವಿದೆ. ಇದನ್ನು ಬಳಸಿಕೊಂಡು ರಾಜ್ಯದ ಯಾವುದೇ ಭಾಗದಿಂದ ಯಾರೊಬ್ಬರೂ ಗುಳೆ ಹೋಗದಂತೆ ತಡೆಯಬೇಕು ಎಂದು ಈಶ್ವರ ಖಂಡ್ರೆ ಹೇಳಿದರು.

ಕೂಲಿ ಹಣ ಪಾವತಿ ಮಾಡಿ: ವಿಬಿ-ಜಿ ರಾಮ್ ಜಿ ಅಡಿ ಕೆಲಸ ಮಾಡಿದ ಕಾರ್ಮಿಕರಿಗೆ ತಿಂಗಳಾದರೂ ಕೂಲಿ ಹಣ ಪಾವತಿಸದಿದ್ದರೆ ಅವರು ಕೆಲಸಕ್ಕೆ ಬರುವುದಿಲ್ಲ. ಆಗ ಯೋಜನೆಯ ಉದ್ದೇಶವೇ ವಿಫಲವಾಗುತ್ತದೆ. 15 ದಿನಗಳ ಒಳಗಾಗಿ ಕೂಲಿ ಪಾವತಿಗೆ ಕ್ರಮ ಕೈಗೊಳ್ಳಬೇಕು. ಸಿಇಓಗಳು, ಪಿಡಿಓಗಳಿಗೆ ಮತ್ತು ಖಜಾನೆ ಅಧಿಕಾರಿಗಳಿಗೆ ಈ ಬಗ್ಗೆ ಸ್ಪಷ್ಟ ನಿರ್ದೇಶನ ನೀಡಬೇಕು ಎಂದು ಅವರು ಸೂಚಿಸಿದರು.

ಗ್ರಾಮೀಣಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಸಮೀರ್ ಶುಕ್ಲ ಸೇರಿದಂತೆ ಹಿರಿಯ ಅಧಿಕಾರಿಗಳು, ಜಿಲ್ಲಾ ಪಂಚಾಯಿತಿ ಸಿಇಓಗಳು ಸಭೆಯಲ್ಲಿ ಭಾಗವಹಿಸಿದ್ದರು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor